ಆರೋಹೆಡ್ ಅಂಗಳದಲ್ಲಿ ನಡೆದಿದ್ದು ಕೇವಲ ಕಾಲ್ಚೆಂಡಿನ ಆಟವಾಗಿರಲಿಲ್ಲ, ಬದಲಾಗಿ ಫುಟ್‌ಬಾಲ್ ಮೈದಾನದ ಹಸಿರು ಹಾಸಿನ ಮೇಲೆ ಬರೆದ ಇತಿಹಾಸದ ಮಹಾಕಾವ್ಯ! ಕಾಲಿನಲ್ಲೇ ಕಲೆಯುಂಡು, ಚೆಂಡನ್ನೇ ತನ್ನ ಆಜ್ಞಾಧಾರಕನನ್ನಾಗಿ ಮಾಡಿಕೊಂಡಿರುವ ಫುಟ್‌ಬಾಲ್ ಲೋಕದ ಏಕೈಕ ‘ಮಾಂತ್ರಿಕ’ ಲಿಯೋನೆಲ್ ಮೆಸ್ಸಿ (Lionel Messi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಹ್ಯಾಟ್ರಿಕ್ ಗೋಲು ದಾಖಲಿಸುವ ಮೂಲಕ ಎಂಬುದು ವಿಶೇಷ.
2026ರ ಫಿಫಾ ವಿಶ್ವಕಪ್‌ನ ಗ್ರೂಪ್ ‘ಜೆ’ ನ ಆರಂಭಿಕ ಪಂದ್ಯದಲ್ಲಿ ಆಲ್ಜೀರಿಯಾ ವಿರುದ್ಧ ಭರ್ಜರಿ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಮೆಸ್ಸಿ, ಜರ್ಮನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸ್ ಅವರ ಹೆಸರಲ್ಲಿದ್ದ ಅತಿ ಹೆಚ್ಚು ವಿಶ್ವಕಪ್ ಗೋಲುಗಳ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದ್ದಾರೆ.
- ಮಿರೋಸ್ಲಾವ್ ಕ್ಲೋಸ್: ಜರ್ಮನಿ ಪರ 24 ವಿಶ್ವಕಪ್ ಪಂದ್ಯಗಳನ್ನಾಡಿರುವ ಮಿರೋಸ್ಲಾವ್ ಕ್ಲೋಸ್ 16 ಗೋಲುಗಳನ್ನು ಬಾರಿಸಿ ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಧಿಕ ಗೋಲು ದಾಖಲಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.
- ಲಿಯೋನೆಲ್ ಮೆಸ್ಸಿ: ಅರ್ಜೆಂಟೀನಾ ಪರ ಈವರೆಗೆ 27 ವಿಶ್ವಕಪ್ ಪಂದ್ಯಗಳನ್ನಾಡಿರುವ ಮೆಸ್ಸಿ ಒಟ್ಟು 16 ಗೋಲುಗಳನ್ನು ದಾಖಲಿಸಿದ್ದಾರೆ. ಈ ಮೂಲಕ ಫಿಫಾ ವಿಶ್ವಕಪ್‌ನಲ್ಲಿ ಅತ್ಯಧಿಕ ಗೋಲು ದಾಖಲಿಸಿ ಕ್ಲೋಸ್ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮೆಸ್ಸಿ ಸರಿಗಟ್ಟಿದ್ದಾರೆ.
ಮೆಸ್ಸಿ ಅವರ ಈ ಭರ್ಜರಿ ಪ್ರದರ್ಶನದ ನೆರವಿನೊಂದಿಗೆ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ಅಲ್ಜೀರಿಯಾ ವಿರುದ್ಧ 3-0 ಗೋಲುಗಳ ಅಮೋಘ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಮೆಸ್ಸಿ ಮ್ಯಾಜಿಕ್:
ಅಮೆರಿಕದ ಕನ್ಸಾಸ್ ಸಿಟಿಯ ಆರೋಹೆಡ್ ಸ್ಟೇಡಿಯಂನಲ್ಲಿ ನಡೆದ ಪಂದ್ಯವು ಸಂಪೂರ್ಣವಾಗಿ ಮೆಸ್ಸಿ ಮಯವಾಗಿತ್ತು. ಈ ಪಂದ್ಯಕ್ಕೂ ಮುನ್ನ ವಿಶ್ವಕಪ್‌ಗಳಲ್ಲಿ 13 ಗೋಲುಗಳನ್ನು ಹೊಂದಿದ್ದ ಮೆಸ್ಸಿ, ಪಂದ್ಯದ 17ನೇ ನಿಮಿಷದಲ್ಲೇ ಅದ್ಭುತ ಲಾಂಗ್-ರೇಂಜ್ ಗೋಲು ಬಾರಿಸಿ ಅರ್ಜೆಂಟೀನಾಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಇದಾದ ಬಳಿಕ 60ನೇ ನಿಮಿಷದಲ್ಲಿ ಎರಡನೇ ಗೋಲು ಮತ್ತು 76ನೇ ನಿಮಿಷದಲ್ಲಿ ಮೂರನೇ ಗೋಲು ಬಾರಿಸುವ ಮೂಲಕ ತಮ್ಮ ವಿಶ್ವಕಪ್ ವೃತ್ತಿಜೀವನದ ಚೊಚ್ಚಲ ಹ್ಯಾಟ್ರಿಕ್ ಪೂರೈಸಿದರು.
ಹಲವು ದಾಖಲೆಗಳು ಧೂಳೀಪಟ:
ಈ ಪಂದ್ಯದಲ್ಲಿ ಗೋಲು ಗಳಿಸುತ್ತಿದ್ದಂತೆ ಲಿಯೋನೆಲ್ ಮೆಸ್ಸಿ ಫುಟ್‌ಬಾಲ್ ಇತಿಹಾಸದ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡರು. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
- ಮೊದಲ ವಿಶ್ವಕಪ್ ಹ್ಯಾಟ್ರಿಕ್: ಮೆಸ್ಸಿ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅರ್ಜೆಂಟೀನಾ ಪರ 200ನೇ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಇದರ ನಡುವೆ 6 ಬಾರಿ ವಿಶ್ವಕಪ್‌ನಲ್ಲಿ ಕಣಕ್ಕಿಳಿದಿದ್ದಾರೆ. ಇದಾಗ್ಯೂ ಅವರಿಗೆ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿಯ ವಿಶ್ವಕಪ್‌ನ ಮೊದಲ ಮ್ಯಾಚ್ನಲ್ಲೇ ತಮ್ಮ ಬಹುದೊಡ್ಡ ಕನಸನ್ನು ನನಸಾಗಿಸಿಕೊಂಡಿರುವುದು ವಿಶೇಷ.
- ಹಿರಿಯ ಆಟಗಾರ: 2006ರಲ್ಲಿ ಸೆರ್ಬಿಯಾ ಮತ್ತು ಮಾಂಟೆನೆಗ್ರೊ ವಿರುದ್ಧ 18ನೇ ವಯಸ್ಸಿನಲ್ಲಿ ತಮ್ಮ ಮೊದಲ ವಿಶ್ವಕಪ್ ಗೋಲು ಗಳಿಸಿದ್ದ ಮೆಸ್ಸಿ, ಈಗ 20 ವರ್ಷಗಳ ನಂತರ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಅತ್ಯಂತ ಹಿರಿಯ ಅರ್ಜೆಂಟೀನಾ ಆಟಗಾರ ಎನಿಸಿಕೊಂಡಿದ್ದಾರೆ.
- ಏಕೈಕ ಆಟಗಾರ: ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಆರು ವಿಭಿನ್ನ ವಿಶ್ವಕಪ್ ಟೂರ್ನಿಗಳಲ್ಲಿ (2006, 2010, 2014, 2018, 2022, 2026) ಅರ್ಜೆಂಟೀನಾ ತಂಡವನ್ನು ಪ್ರತಿನಿಧಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಿಜವಾದ ಕ್ಲೋಸ್ ಭವಿಷ್ಯ!
ಈ ಬಾರಿಯ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಸ್ವತಃ ಮಿರೋಸ್ಲಾವ್ ಕ್ಲೋಸ್ ಅವರೇ, “ನನ್ನ ವಿಶ್ವಕಪ್ ದಾಖಲೆಯನ್ನು ಮುರಿಯಲು ಯಾರಾದರೂ ಅರ್ಹರಿದ್ದರೆ ಅದು ಲಿಯೋನೆಲ್ ಮೆಸ್ಸಿ ಮಾತ್ರ” ಎಂದು ಹೇಳಿದ್ದರು.
ಇದನ್ನೂ ಓದಿ: ಫಿಫಾ ವಿಶ್ವಕಪ್ ಅಂಗಳದಲ್ಲಿ ನಾಲ್ವರು ಭಾರತೀಯ ಮೂಲದವರು!
ಮೆಸ್ಸಿ ಈಗ ಅವರ ದಾಖಲೆಯನ್ನು ಸರಿಗಟ್ಟಿದ್ದು, ಮುಂಬರುವ ಪಂದ್ಯಗಳಲ್ಲಿ ಇನ್ನೂ ಒಂದು ಗೋಲು ಗಳಿಸಿದರೆ ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.
Published On – 8:44 am, Wed, 17 June 26
