ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ: ಜೂನ್ 18 ರಿಂದ ಅನಿರ್ದಿಷ್ಟಾವಧಿ ಮುಷ್ಕರ – Kannada News | Bengaluru Small Traders and Street Vendors on Strike from June 18

ಬೆಂಗಳೂರು, ಜೂನ್ 17: ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ಖಂಡಿಸಿ ಮತ್ತು ತಮಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಬೆಂಗಳೂರಿನ (Bengaluru) ಸುಮಾರು 58,000ಕ್ಕೂ ಹೆಚ್ಚು ಬೇಕರಿ, ಬೀಡಾ ಅಂಗಡಿ ಮಾಲೀಕರು ಹಾಗೂ ಬೀದಿ ಬದಿ ವ್ಯಾಪಾರಿಗಳು ಜೂನ್ 18ರಿಂದ (ಗುರುವಾರ) ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಮುಖ್ಯಾಂಶಗಳು

  • ಅಧಿಕಾರಿಗಳ ಕಿರುಕುಳ ಖಂಡಿಸಿ ಸಣ್ಣ ವ್ಯಾಪಾರಿಗಳು ಮುಷ್ಕರಕ್ಕೆ ಕರೆ ನೀಡಿದ್ದಾರೆ.
  • ಜೂನ್ 18 ರಿಂದ ಬೆಂಗಳೂರಿನಾದ್ಯಂತ ಬೇಕರಿ, ಸಣ್ಣ ಅಂಗಡಿಗಳು ಬಂದ್ ಆಗಲಿವೆ.
  • ಪ್ಲಾಸ್ಟಿಕ್ ನಿಷೇಧ ಹೆಸರಿನಲ್ಲಿ ತಾರತಮ್ಯದ ದಂಡ ವಿಧಿಸುತ್ತಿರುವುದಕ್ಕೆ ವ್ಯಾಪಾರಿಗಳ ಆಕ್ರೋಶ.

ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಅಧ್ಯಕ್ಷರಾದ ರವಿಶೆಟ್ಟಿ ಬೈಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ವ್ಯಾಪಾರಿಗಳು ಕಾನೂನುಬದ್ಧವಾಗಿ ವ್ಯಾಪಾರ ಮಾಡುತ್ತಾ, ತೆರಿಗೆ ಪಾವತಿಸುತ್ತಿದ್ದರೂ ಸಹ ಅಧಿಕಾರಿಗಳಿಂದ ನಿರಂತರ ತಪಾಸಣೆ, ದಂಡ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ರಾಜ್ಯಾದ್ಯಂತ ಭಾಗಶಃ ಬೆಂಬಲ

ಈ ಮುಷ್ಕರದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಎಲ್ಲಾ ಬೇಕರಿಗಳು ಮತ್ತು ಸಣ್ಣ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದ್ದರೂ, ಕರ್ನಾಟಕದ ಇತರ ಭಾಗಗಳಲ್ಲಿ ಭಾಗಶಃ ಸಹಕರಿಸುವ ಸಾಧ್ಯತೆಯಿದೆ ಎಂದು ಪರಿಷತ್ ತಿಳಿಸಿದೆ.

ಅಧಿಕಾರಿಗಳ ಕಿರುಕುಳದ ವಿರುದ್ಧ ವ್ಯಾಪಾರಿಗಳ ಆಕ್ರೋಶ

ಸಣ್ಣ ವ್ಯಾಪಾರಿಗಳ ಅಸೋಸಿಯೇಷನ್ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ. ವ್ಯಾಪಾರಿಗಳನ್ನು ಪೊಲೀಸ್ ಠಾಣೆ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡಿಸಿ, ಸುದೀರ್ಘ ವಿಚಾರಣೆ ನಡೆಸಿ ನಿಂದಿಸಲಾಗುತ್ತಿದೆ. ಅಲ್ಲದೆ ಯಾವುದೇ ಮುನ್ಸೂಚನೆ ಇಲ್ಲದೆ ಅಂಗಡಿಗಳನ್ನು ಮುಚ್ಚಿಸಲಾಗುತ್ತಿದೆ. ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ಉತ್ಪಾದಿಸುವ ದೊಡ್ಡ ಸಂಸ್ಥೆಗಳು ಮತ್ತು ಸಗಟು ವ್ಯಾಪಾರಿಗಳನ್ನು ಬಿಟ್ಟು, ಸಣ್ಣ ಚಿಲ್ಲರೆ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಭಾರಿ ಮೊತ್ತದ ದಂಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ ರಸ್ತೆ ಗುಂಡಿಗಳ ಪತ್ತೆಗೆ ಎಐ ಮೊರೆಹೋದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಅಲ್ಲದೆ ಸರ್ಕಾರದಿಂದ ಅನುಮತಿ ಪಡೆದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿದರೂ ಸಹ ಅಂಗಡಿ ಮಾಲೀಕರಿಗೆ ದಂಡ ವಿಧಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ಹೀಗಾಗಿ ನಿಯಮಾವಳಿಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಅನಗತ್ಯ ಕಿರುಕುಳ ನಿಲ್ಲುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸಂಘಟನೆಗಳು ಎಚ್ಚರಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *