ಬಸ್ ಬ್ರೇಕ್ ಫೇಲ್ ಆಗಿ ನಡೆದಿರುವ ಅಪಘಾತImage Credit source: Tv9 Kannada
ಗದಗ, ಜುಲೈ 08: ನಿರ್ವಹಣೆಯ ಕೊರತೆಯಿಂದಾಗಿ ಕರ್ನಾಟಕದ ಸರ್ಕಾರಿ ನಿಗಮಗಳ ಸಾರಿಗೆ ಬಸ್ಗಳು ಡಕೋಟಾ ಆಗಿ ಮಾರ್ಪಡುತ್ತಿವೆ ಎಂಬ ಸಾರ್ವಜನಿಕರ ಗಂಭೀರ ಆರೋಪದ ನಡುವೆ ಇದಕ್ಕೆ ಪೂರಕವೆಂಬಂತೆ ಮೇಲಿಂದ ಮೇಲೆ ಘಟನೆಗಳು ನಡೆಯುತ್ತಿವೆ. ಹೆಡ್ಲೈಟ್ ಕಾರ್ಯನಿರ್ವಹಿಸಿದ ಕಾರಣ ಕಲಬುರಗಿಯಲ್ಲಿ ಮೊಬೈಲ್ ಟಾರ್ಚ್ನಲ್ಲಿ ಚಾಲಕ ಬಸ್ ಓಡಿಸಿದ್ದ ಘಟನೆ ಮಾಸುವ ಮುನ್ನವೇ ಇತ್ತ ಗದಗದಲ್ಲಿ ಸಾರಿಗೆ ಸಂಸ್ಥೆಯ ಬಸ್ ಬ್ರೇಕ್ ಫೇಲ್ ಆಗಿ ಸಂಭವನೀಯ ಭಾರಿ ಅನಾಹುತ ತಪ್ಪಿದೆ.
ಬಸ್ನಡಿ ಸಿಲುಕಿ ಪರದಾಟ
ಗದಗ ನಗರದ ಹಳೆ ಬಸ್ ನಿಲ್ದಾಣದಿಂದ ಹೊಸ ಸ್ಟ್ಯಾಂಡ್ಗೆ ತೆರಳುತ್ತಿದ್ದ ಬಸ್ನ ಬ್ರೇಕ್ ಫೇಲ್ ಆಗಿದೆ. ಈ ವೇಳೆ ಏಕಾಏಕಿ ಬಸ್ ಹಿಮ್ಮುಖವಾಗಿ ಚಲಿಸಲು ಆರಂಭಿಸಿದ್ದು, ಹಿಂಭಾಗದಲ್ಲಿದ್ದ ಬೈಕ್ ಸವಾರರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಹೀಗಿದ್ದರೂ ಓರ್ವರು ಬಸ್ನಡಿ ಸಿಲುಕಿ ಪರದಾಡಿದ್ದಾರೆ. ಸ್ಥಳದಲ್ಲಿದ್ದವರು ಕೂಡಲೇ ಎಚ್ಚತ್ತು, ಅವರನ್ನು ರಕ್ಷಿಸಿದ್ದಾರೆ. ಅವಘಡದಲ್ಲಿ ಎರಡು ಬೈಕ್ಗಳು ಜಖಂ ಆಗಿದ್ದು, ಘಟನೆ ಬಳಿಕ ಸ್ಥಳದಿಂದ ಬಸ್ ಚಾಲಕ ನಾಪತ್ತೆಯಾಗಿದ್ದಾನೆ ಎನ್ನಲಾಗಿ. ಬಸ್ನಡಿ ಸಿಲುಕಿದ್ದ ಬೈಕ್ಗಳನ್ನು ಹೊರತೆಗೆಯಲು ಹರಸಾಹಸ ಪಡಲಾಗಿದ್ದು, ಗದಗ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳು ಹೇಳೋದೇನು?
ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಬಸ್ ಏಕಾಏಕಿ ವೇಗವಾಗಿ ರಿವರ್ಸ್ ಬಂದಿದೆ. ಈ ವೇಳೆ ಸ್ಥಳದಲ್ಲಿದ್ದವರು ಬೈಕ್ ಬಿಟ್ಟು ಹಾರಿ ಜೀವ ಉಳಿಸಿಕೊಂಡಿದ್ದಾರೆ. ಬಸ್ನ ಅಡಿ ಭಾಗದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಸಿಲುಕಿಕೊಂಡಿದ್ದು, ಬೈಕ್ಗಳು ಬಸ್ನ ತಡೆದ ಪರಿಣಾಮ ದೊಡ್ಡ ಅನಾಹುತ ತಪ್ಪಿದೆ. ಅಲ್ಲದೆ, ಮೊದಲೇ ಬಸ್ನ ಬ್ರೇಕ್ ಫೇಲ್ ಆಗಿತ್ತು. ಹೀಗಾಗಿ ಓರ್ವ ಮೆಕಾನಿಕ್ ಕೂಡ ವಾಹನದಲ್ಲಿದ್ದರು. ಇಳಿಜಾರು ಪ್ರದೇಶವಾದ ಕಾರಣ ಚಾಲಕನಿಗೆ ನಿಯಂತ್ರಣ ತಪ್ಪಿದೆ. ಸ್ಥಳದಲ್ಲಿ ಸ್ಪೀಡ್ ಬ್ರೇಕರ್ ಕೂಡ ಬಸ್ನ ತಡೆಯುವಲ್ಲಿ ಸಹಕಾರಿಯಾದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಅಪಘಾತದ ವೇಳೆ ಬಸ್ನಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.