ತಮಿಳುನಾಡು ಚಿತ್ರರಂಗದ ಇತಿಹಾಸವನ್ನು ಒಮ್ಮೆ ತೆಗೆದು ನೋಡಿದರೆ ಇಂದಿನ ನಟ ದಳಪತಿ ವಿಜಯ್ ಅವರ ಗೆಲುವು ಹೆಚ್ಚು ಅಚ್ಚರಿ ತರುವುದಿಲ್ಲ. ಈಗಾಗಲೇ ಅನೇಕ ಚಿತ್ರರಂಗದ ಗಣ್ಯರು ಅಲ್ಲಿನ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ಇಲ್ಲಿ ಅಚ್ಚರಿ ತರುತ್ತಿರುವುದು ಎಕ್ಸಿಟ್ ಪೋಲ್ ಲೆಕ್ಕಾಚಾರವನ್ನು ವಿಜಯ್ ಸಂಪೂರ್ಣವಾಗಿ ಉಲ್ಟಾ ಮಾಡಿದ್ದು. ದಳಪತಿ ವಿಜಯ್ ಅವರ ಹಾದಿ ಇತರರಿಗಿಂತ ಭಿನ್ನ ಮತ್ತು ಸವಾಲುಗಳಿಂದ ಕೂಡಿತ್ತು. ಇಂದು ಅವರು ಮುಖ್ಯಮಂತ್ರಿ ಗದ್ದುಗೆಯ ಸನಿಹದಲ್ಲಿ ನಿಂತಿದ್ದಾರೆ. ಅವರ ರಾಜಕೀಯ ಯಶಸ್ಸಿನಿಂದ ಚಿತ್ರರಂಗಕ್ಕೆ ಗುಡ್ಬೈ ಹೇಳೋದು ಬಹುತೇಕ ಖಚಿತ ಎಂಬಂತಾಗಿದೆ.
ವಿಜಯ್ ಅವರ ಸಿನಿಮಾಗಳು ಕಳೆದ ದಶಕದಿಂದ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ. ಅವರ ಚಿತ್ರಗಳಲ್ಲಿನ ರಾಜಕೀಯ ವಿಡಂಬನೆ ಮತ್ತು ಸಮಾಜದ ಅಂಕುಡೊಂಕುಗಳ ಬಗೆಗಿನ ಧ್ವನಿ ಆಡಳಿತಾರೂಢ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ವಿಶೇಷವಾಗಿ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯ ಅಡೆತಡೆಗಳನ್ನು ಎದುರಿಸಬೇಕಾಯಿತು. ಚಿತ್ರಕ್ಕೆ ಅನುಮತಿ ನೀಡಲು ವಿಳಂಬ ಮಾಡುವುದು, ವಿವಾದ ಸೃಷ್ಟಿಸುವುದು ವಿಜಯ್ ಅವರನ್ನು ರಾಜಕೀಯವಾಗಿ ಹತ್ತಿಕ್ಕುವ ಪ್ರಯತ್ನದಂತೆ ಕಂಡಿತ್ತು.
ಈ ಅಡೆತಡೆಗಳೇ ವಿಜಯ್ ಅವರಿಗೆ ಮೈಲೇಜ್ ನೀಡಿತು. ಅವರು ‘ಸಂತ್ರಸ್ತ’ನ ರೀತಿ ಕಾಣಿಸಿದರು. ಇದು ಅವರ ಅಭಿಮಾನಿಗಳಲ್ಲಿ ರಾಜಕೀಯ ಆಕ್ರೋಶದ ಕಿಚ್ಚು ಹಚ್ಚಿದವು. ಇಂದು ಅವರು ರಾಜಕೀಯ ಮುನ್ನಡೆ ಸಾಧಿಸುತ್ತಿದ್ದಂತೆ, ‘ಜನ ನಾಯಗನ್’ ನಿರ್ಮಾಪಕರಲ್ಲಿ ಮಂದಹಾಸ ಮೂಡಿದೆ. ಒಂದೊಮ್ಮೆ ಅವರು ಸಿಎಂ ಆದಲ್ಲಿ, ‘ಜನ ನಾಯಗನ್’ ಚಿತ್ರಕ್ಕೆ ಬೃಹತ್ ಮೈಲೇಜ್ ಸಿಗುವುದು ಪಕ್ಕಾ ಆಗಿದೆ. ಲೀಕ್ ಆದ ಹೊರತಾಗಿಯೂ ‘ಜನ ನಾಯಗನ್’ ಗೆಲ್ಲೋದು ಪಕ್ಕಾ ಆಗಿದೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆಯಲ್ಲಿ ಪಿಎಂ ಮೋದಿಯ ಧುರಂಧರ್ ದಳಪತಿ ವಿಜಯ್? ಶುರುವಾಗಿದೆ ಚರ್ಚೆ
ವಿಜಯ್ ಅವರ ಈ ಯಶಸ್ಸಿನ ನಡುವೆ ಅಭಿಮಾನಿಗಳಿಗೆ ಕಾಡುತ್ತಿರುವ ಒಂದು ದೊಡ್ಡ ಆತಂಕವೆಂದರೆ ಚಿತ್ರರಂಗಕ್ಕೆ ಅವರು ಹೇಳಲಿರುವ ‘ಗುಡ್ ಬೈ’. ವಿಜಯ್ ಸಿಎಂ ಆಗಿದ್ದೇ ಹೌದಾದಲ್ಲಿ ಸಂಪೂರ್ಣವಾಗಿ ಅವರು ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ರೀತಿ ಸಿನಿಮಾದಿಂದ ದೂರ ಸರಿಯುವುದು ಕೇವಲ ವೈಯಕ್ತಿಕ ನಿರ್ಧಾರವಲ್ಲ, ಅದು ಜನರ ಮೇಲಿರುವ ಜವಾಬ್ದಾರಿಯ ಸಂಕೇತ ಎಂದು ಅವರು ಭಾವಿಸುತ್ತಾರೆ.
ನಟನೆಯಲ್ಲಿ ಉತ್ತುಂಗದಲ್ಲಿರುವಾಗ ವಿಜಯ್ ಚಿತ್ರರಂಗ ಬಿಡುವುದು ಕಾಲಿವುಡ್‌ಗೆ ದೊಡ್ಡ ನಷ್ಟವಾದರೂ, ತಮಿಳುನಾಡು ರಾಜಕೀಯಕ್ಕೆ ಓರ್ವ ಹೊಸ ಭರವಸೆಯ ನಾಯಕ ಸಿಕ್ಕಂತಾಗಿದೆ. ಅವರ ಕೊನೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆ ಬರೆಯುವ ಎಲ್ಲಾ ಲಕ್ಷಣ ಗೋಚರವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 1:19 pm, Mon, 4 May 26
