ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟImage Credit source: tv9
ನವದೆಹಲಿ, ಮೇ 4: ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ ಮಹಾ ಅಗ್ನಿಪರೀಕ್ಷೆಯ ಫಲಿತಾಂಶದ ಕ್ಷಣಗಳು (Assembly Election Result 2026) ಹತ್ತಿರ ಬಂದಿದ್ದು, ಬಿಜೆಪಿ (BJP) ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಕಳೆದ ಎರಡು ತಿಂಗಳಿಂದ ಗಂಗೆಯ ಮಡಿಲಲ್ಲಿ ನಡೆದಿದ್ದು ಕೇವಲ ಚುನಾವಣೆಯಲ್ಲ, ಅದು ರಕ್ತಸಿಕ್ತ ರಾಜಕೀಯದ ಕುರುಕ್ಷೇತ್ರ. ಮಮತಾ ಬ್ಯಾನರ್ಜಿಯವರ (Mamata Banerjee) 15 ವರ್ಷಗಳ ಭದ್ರಕೋಟೆಯನ್ನು ಭೇದಿಸಲು ಪ್ರಧಾನಿ ಮೋದಿ (Narendra Modi) ಮತ್ತು ಅಮಿತ್ ಶಾ ನಡೆಸಿದ ‘ಚಾಣಕ್ಯ ತಂತ್ರ’ ಹಾಗೂ ಅದಕ್ಕೆ ದೀದಿ ನೀಡಿದ ಪ್ರತಿಪ್ರಹಾರಗಳು ಈ ಬಾರಿಯ ಚುನಾವಣೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತೆ ಮಾಡಿವೆ.
ವೈಯಕ್ತಿಕ ವಾಗ್ದಾಳಿ ಮತ್ತು ವ್ಯಂಗ್ಯಭರಿತ ಡೈಲಾಗ್‌ಗಳು
ಈ ಬಾರಿಯ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ‘ಬೇವಕೂಫ್ ಮತ್ ಬನಾಓ (ಮೂರ್ಖರನ್ನಾಗಿ ಮಾಡಬೇಡಿ)’ ಎಂಬ ಖಡಕ್ ಮಾತು ಭಾರಿ ಸದ್ದು ಮಾಡಿತ್ತು. ಟಿಎಂಸಿ ನಾಯಕರ ಹೇಳಿಕೆಗಳಿಗೆ ಪ್ರತಿಯಾಗಿ ಶಾ ಆಡಿದ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇನ್ನು ಪ್ರಧಾನಿ ಮೋದಿ ಅವರು ನೇರವಾಗಿಯೇ ಮಮತಾ ಬ್ಯಾನರ್ಜಿಯವರನ್ನು ‘ಲಂಚದ ರಾಣಿ’ ಎಂದು ಟೀಕಿಸುವ ಮೂಲಕ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯ ಆರೋಪಗಳನ್ನು ಜನರ ಮುಂದಿಟ್ಟಿದ್ದರು.
ಬಿಜೆಪಿ ಪ್ರಚಾರದ ಪ್ರಧಾನ ಅಸ್ತ್ರಗಳು
ಬಿಜೆಪಿ ಪ್ರಚಾರದ ಉದ್ದಕ್ಕೂ ಮಹಿಳೆಯರ ಸುರಕ್ಷತೆ ಮತ್ತು ಶಿಕ್ಷಕರ ನೇಮಕಾತಿ ಹಗರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿತು. ‘ದೀದಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ’ ಎಂದು ಆರೋಪಿಸಿದ ಅಮಿತ್ ಶಾ, ಬಾಂಗ್ಲಾದೇಶದ ನುಸುಳುಕೋರರಿಗೆ ಟಿಎಂಸಿ ಆಶ್ರಯ ನೀಡುತ್ತಿರುವುದು ದೇಶದ ಭದ್ರತೆಗೆ ಅಪಾಯ ಎಂದು ಎಚ್ಚರಿಸಿದರು. ಅಲ್ಲದೆ, ‘ಬಂಗಾಳದ ಮುಂದಿನ ಸಿಎಂ ಬಂಗಾಳದ ಮಣ್ಣಿನ ಮಗನೇ ಹೊರತು ದೀದಿಯ ಸೋದರ ಸಂಬಂಧಿಯಲ್ಲ’ ಎಂದು ಹೇಳುವ ಮೂಲಕ ಗುಡುಗಿದ್ದರು.
ಟಿಎಂಸಿ ವಿರುದ್ಧ ಬಿಜೆಪಿ ಮಾಡಿದ ಆರೋಪಗಳೇನೇನು?
- ಬಂಗಾಳದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ
- ದೀದಿ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಪ್ರಚಾರ
- ಶಿಕ್ಷಕರ ನೇಮಕಾತಿ ಹಗರಣ ಮತ್ತು ಕಮಿಷನ್ ದಂಧೆಯ ಆರೋಪ
- ಸಿಎಂ ಮಮತಾ ಬ್ಯಾನರ್ಜಿ ಅವರನ್ನು ‘ಲಂಚದ ರಾಣಿ’ ಎಂದು ಟೀಕಿಸಿದ್ದ ಪ್ರಧಾನಿ ಮೋದಿ
- ಬಾಂಗ್ಲಾದೇಶದ ನುಸುಳುಕೋರರಿಗೆ ಆಶ್ರಯ ನೀಡ್ತಿದ್ದಾರೆಂದು ಅಮಿತ್ ಶಾ ಆರೋಪ
2026ನೇ ವರ್ಷವು ಟಿಎಂಸಿಗೆ ‘ಬೈ-ಬೈ’ ಹೇಳುವ ವರ್ಷವಾಗಲಿದೆ ಎಂದು ಸಿನಿಮಾ ಶೈಲಿಯಲ್ಲಿ ಗುಡುಗಿದ್ದ ಅಮಿತ್ ಶಾ.
ದೀದಿಯ ಪ್ರತಿಪ್ರಹಾರ
ಮೋದಿಯವರ ಆರೋಪಗಳಿಗೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ‘ಸಿಬಿಐ, ಇಡಿ ಮತ್ತು ಚುನಾವಣಾ ಆಯೋಗ ಬಿಜೆಪಿಯ ಜೇಬಿನಲ್ಲಿವೆ’ ಎಂದು ಕಿಡಿಕಾರಿದ್ದರು. 91 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟಿರುವುದು ಮತ್ತು ಕೇಂದ್ರ ಸರ್ಕಾರ ಅನುದಾನ ತಡೆಹಿಡಿದಿರುವುದನ್ನು ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿದ್ದರು.
ಮೋದಿ ಮೇಲೆ ದೀದಿ ಪ್ರಹಾರ ಹೇಗಿತ್ತು?
- ಚುನಾವಣೆ ಗೆಲ್ಲಲು ಮೋದಿ ತನಿಖಾ ಸಂಸ್ಥೆಗಳನ್ನು ಬಳಸಿದ್ದಾರೆ ಎಂಬ ಆರೋಪ
- ಸಿಬಿಐ, ಇಡಿ, ಚುನಾವಣಾ ಆಯೋಗ ಬಿಜೆಪಿ ಜೇಬಿನಲ್ಲಿವೆ ಎಂದು ಮಮತಾ ಕಿಡಿ
- SIR ನಂತಹ ಕ್ರಮಗಳನ್ನ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿ ವಾದ ಮಂಡನೆ
- 91 ಲಕ್ಷ ಮತದಾರರ ಹೆಸರನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿದ್ದ ಮಮತಾ
- ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಅನುದಾನ ತಡೆ ಹಿಡಿದಿದೆ ಎಂದು ಆರೋಪ
ಇದನ್ನೂ ಓದಿ: ಪಂಚ ರಾಜ್ಯ ಚುನಾವಣಾ ಫಲಿತಾಂಶ; ಎಲ್ಲಿ ಹೇಗಿದೆ ಸ್ಥಿತಿ? ಇಲ್ಲಿದೆ ವಿವರ
ಒಟ್ಟಾರೆಯಾಗಿ, ಶೇ 93ರಷ್ಟು ದಾಖಲೆ ಮತದಾನ ಕಂಡಿರುವ ಬಂಗಾಳದಲ್ಲಿ ಈ ಮಾತಿನ ಯುದ್ಧ ಬಿಜೆಪಿಗೆ ವರವಾಗಿ ಪರಿಣಮಿಸಿರುವುದು ಈಗ ಸಾಬೀತಾದಂತಾಗಿದೆ.
ಚುನಾವಣಾ ಫಲಿತಾಂಶದ ಲೈವ್ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
