ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮರ್ಮಾಘಾತ: ಅಚ್ಚರಿ ಮೂಡಿಸಿದ ಅಣ್ಣಾಮಲೈ ನಡೆ! – Kannada News | Former Tamil Nadu BJP chief K Annamalai steps down as election in charge for six constituencies, here is Why

ಚೆನ್ನೈ, (ಫೆಬ್ರವರಿ 03): ತಮಿಳುನಾಡು ವಿಧಾನಸಭೆ ಚುನಾವಣೆಯ (Tamil Nadu Assembly Elections 2026) ಹೊಸ್ತಿಲಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (Annamalai) ಬಿಜೆಪಿಗೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನ ಆರು ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ಕೆಲವೇ ದಿನಗಳಲ್ಲಿ ಅಣ್ಣಾಮಲೈ ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಹೌದು…ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮ್ಮ ತಂದೆ ಅನಾರೋಗ್ಯ ಕಾರಣ ನೀಡಿ ಇಂದು (ಫೆಬ್ರವರಿ 03) ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರಿಂದ ಚುನಾವಣೆ ಹೊಸ್ತಿಲಲ್ಲೇ ಬಿಜೆಪಿಗೆ ಆರಂಭಿಕ ಆಘಾತವಾದಂತಾಗಿದ್ದು, ಇನ್ನೊಂದೆಡೆ ಅಣ್ಣಾಮಲೈ ಅವರು ಈ ನಿರ್ಧಾರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

 ರಾಜೀನಾಮೆಗೆ ಅಣ್ಣಾಮಲೈ ನೀಡಿದ ಕಾರಣ ಹೀಗಿದೆ

ರಾಜೀನಾಮೆ ಕುರಿತು ಸುದ್ದಿಗೋಷ್ಠಿ ನಡೆಸಿದ ಅಣ್ಣಾಮಲೈ, 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳ ಉಸ್ತುವಾರಿ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಆದರೆ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇದಕ್ಕೆ ಮುಖ್ಯ ಕಾರಣ ನನ್ನ ತಂದೆಯ ಅನಾರೋಗ್ಯ. ಹೀಗಾಗಿ ತಂದೆಯ ಆರೈಕೆ, ಆರೋಗ್ಯ ಕಾಳಜಿ ಪ್ರಮುಖ ಆದ್ಯತೆಯಾಗಿರುವ ಕಾರಣ ಕೊಯಂಬತ್ತೂರಿನಲ್ಲಿ ಉಳಿಯಬೇಕಾಗಿದೆ. ಆದ್ದರಿಂದ ನನಗೆ ನೀಡಲಾಗಿದ್ದ 6 ಕ್ಷೇತ್ರಗಳಿಗೆ ಪ್ರವಾಸ ಮಾಡುವುದು, ಅಲ್ಲಿನ ಜವಾಬ್ದಾರಿಗಳನ್ನು ನಿರ್ವಹಿಸುವುದು ಅಸಾಧ್ಯವಾಗಿದೆ. ಈ ಕಾರಣದಿಂದ ರಾಜೀನಾಮೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ ಮೋದಿಗೆ ಹೇಳಿ; ಹಿಂದಿ ವಿವಾದದ ಬಗ್ಗೆ ಉದಯನಿಧಿ ಸ್ಟಾಲಿನ್‌ಗೆ ಅಣ್ಣಾಮಲೈ ನೇರ ಸವಾಲು

ವಿಧಾನಸಭೆ ಎಲೆಕ್ಷನ್​​ಗೆ ಅಣ್ಣಾಮಲೈ ಸ್ಪರ್ಧಿಸಲ್ವಾ?

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಕಂಡಿರುವ ಅಣ್ಣಾಮಲೈ ಈ ಬಾರಿ ವಿಧಾನಸಭಾ ಚುನಾವಣೆಗೆ ಅಣ್ಣಾಮಲೈ ಸ್ಪರ್ಧಿಸುತ್ತಾರಾ? ಇಲ್ವಾ ಎನ್ನುವ ಬಗ್ಗೆ ಚರ್ಚೆಗಳು ನಡೆದಿದ್ದವು. ಕೆಲವರು ಸ್ಪರ್ಧೆ ಮಾಡುತ್ತಾರೆ, ಇನ್ನೂ ಕೆಲವರು ಸ್ಪರ್ಧೆ ಮಾಡಲ್ಲ ಎನ್ನುವ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಇದೀಗ ಅದಕ್ಕೂ ಸಹ ಅಣ್ಣಾಮಲೈ ಸ್ಪಷ್ಟನೆ ನೀಡಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇದೇ ವೇಳೆ ಪಕ್ಷದ ನಿರ್ಧಾರ ನೋಡಿಕೊಂಡು ಘೋಷಿಸುವುದಾಗಿ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೊಯಂಬತ್ತೂರು ಜನತೆಗೆ ಯಾವುದ ಮನವಿಗೆ ನಾನು ಸಿಗುವಂತಿರಬೇಕು. ಹೀಗಾಗಿ ಸದ್ಯ ಬಾಡಿಗೆ ಮನೆ ಮಾಡಿದ್ದೇನೆ. ಜನರ ಮನವಿಗಳು, ದೂರುಗಳಿಗೆ ಸ್ಪಂದಿಸಲು ಅನೂಕೂಲವಾಗುವಂತೆ ಬಾಡಿಗೆ ಮನೆ ಮಾಡಿದ್ದೇನೆ. ಪಕ್ಷದ ನಿರ್ಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಣ್ಣಾಮಲೈ ರಾಜೀನಾಮೆ ಹಿಂದೆ ನಾನಾ ಚರ್ಚೆ

ಇನ್ನು ಅಣ್ಣಾಮಲೈ ಅವರ ಈ ದಿಢೀರ್ ನಿರ್ಧಾರ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ತಂದೆ ಅವರ ಅನಾರೋಗ್ಯದ ಬಗ್ಗೆ ನೀಡಿದ್ದ ಕಾರಣ ಕೇವಲ ನೆಪ ಅಷ್ಟೇ. ಆದ್ರೆ ಅವರ ರಾಜೀನಾಮೆಯಿಂದ ಬೇರೆನೇ ಇದೆ. ಈ ಹಿಂದೆ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯ್ತು.  ಬಳಿಕ ಯಾವುದೇ ಹುದ್ದೆ ನೀಡಿಲ್ಲ. ಆದ್ರೆ, ಇದೀಗ 234  ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 6 ಕ್ಷೇತ್ರಗಳ ಉಸ್ತುವಾರಿ ನೀಡಿರುವುದು ಅವರಿಗೆ ಬೇಸರ ತರಿಸಿದೆ ಎನ್ನಲಾಗಿದೆ. ಅಲ್ಲದೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಬಳಿಕ ಯಾವುದೇ ಜವಾಬ್ದಾರಿ ನೀಡದಿರುವುದು. ಹೀಗೆ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಯಿಂದ ಅಸಮಾಧಾನಗೊಂಡು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ  ಅಣ್ಣಾಮಲೈ ತಂದೆಯ ಅನಾರೋಗ್ಯದ ಕಾರಣ ನೀಡಿ ಪಕ್ಷ ನೀಡಿದ್ದ ಜವಾಬ್ದಾರಿಯಿಂದ ಹಿಂದೆ ಸರಿದಿರುವುದರಿಂದ ನಾನಾ ಚರ್ಚೆಗಳು ನಡೆಯುತ್ತಿದ್ದು, ಅವರ ಮುಂದಿನ ನಡೆ ಏನು ಎನ್ನುವುದೇ ನಿಗೂಢವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:02 pm, Tue, 3 February 26

Source link

Leave a Reply

Your email address will not be published. Required fields are marked *