ಪುಣೆ, ಜೂನ್ 27: ಮಹಾರಾಷ್ಟ್ರದ ಪುಣೆಯಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಕೊಲೆ ಪ್ರಕರಣವೊಂದರ ಆಘಾತಕಾರಿ ರಹಸ್ಯಗಳು ಪೊಲೀಸ್ ತನಿಖೆಯಲ್ಲಿ ಒಂದರ ನಂತರ ಒಂದರಂತೆ ಹೊರಬರುತ್ತಿವೆ. ಉದ್ಯಮಿ ಕೇತನ್ ಅಗರ್ವಾಲ್(Ketan Agarwal) ಎಂಬುವವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಕೇತನ್ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ರಹಸ್ಯ ಗೆಳೆಯ ಚೇತನ್ ಚೌಧರಿ ನಡುವಿನ ಅಕ್ರಮ ಸಂಬಂಧ ಹಾಗೂ ಕೊಲೆಯ ಭೀಕರ ಸತ್ಯಗಳು ಲಭ್ಯವಾಗಿವೆ.
ಯಾರು ಈ ಪ್ರಿಯಕರ ಚೇತನ್ ಚೌಧರಿ
ಪೊಲೀಸ್ ವಿಚಾರಣೆಯ ವೇಳೆ ಸಿಯಾ ಗೋಯಲ್ ನೀಡಿರುವ ತಪ್ಪೊಪ್ಪಿಗೆಯಿಂದ ಇಡೀ ಕೇಸ್ ತಲ್ಲಣ ಸೃಷ್ಟಿಸಿದೆ. ಕೊಲೆಯ ಪ್ರಮುಖ ಆರೋಪಿಯಾದ ಚೇತನ್ ಚೌಧರಿ ಮೂಲತಃ ರಾಜಸ್ಥಾನದ ಜೋಧಪುರ ಜಿಲ್ಲೆಯ ಬಿಲಾರಾ ಪ್ರದೇಶದ ಪಲಸಾನಿ ಗ್ರಾಮದವನು.
ಪುಣೆಗೆ ಬಂದಿದ್ದೇಕೆ?
ಚೇತನ್ ತಂದೆ ಬಾಬುಲಾಲ್ ಸಿರ್ವಿ ಕಳೆದ ಹಲವು ವರ್ಷಗಳಿಂದ ಪುಣೆಯಲ್ಲಿ ದಿನಸಿ (ಗ್ರೋಸರಿ) ಅಂಗಡಿ ನಡೆಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಾರದಲ್ಲಿ ನಷ್ಟ ಉಂಟಾದಾಗ, ತನ್ನ ತಂದೆಗೆ ಆಸರೆಯಾಗಲು ಮತ್ತು ವ್ಯವಹಾರವನ್ನು ನೋಡಿಕೊಳ್ಳಲು ನಾಲ್ಕು ಸಹೋದರಿಯರ ಏಕೈಕ ಸಹೋದರನಾದ ಚೇತನ್ ಜೋಧ್‌ಪುರ ಬಿಟ್ಟು ಪುಣೆಗೆ ಬಂದಿದ್ದನು. ಇಲ್ಲಿಯೇ ಆತನಿಗೆ ಸಿಯಾ ಗೋಯಲ್ ಪರಿಚಯವಾಗಿತ್ತು.
ಮದುವೆಗೆ ಮುನ್ನವೇ ಸೀಕ್ರೆಟ್ ಪ್ರವಾಸ
ಸಿಯಾ ಮತ್ತು ಚೇತನ್ ಕಳೆದ ಹಲವು ತಿಂಗಳುಗಳಿಂದ ನಿರಂತರ ಸಂಪರ್ಕದಲ್ಲಿದ್ದರು. ಕೇತನ್ ಜೊತೆ ನಿಶ್ಚಿತಾರ್ಥವಾಗಿದ್ದರೂ ಸಿಯಾ ತನ್ನ ಗೆಳೆಯನೊಂದಿಗೆ ಗುಟ್ಟಾಗಿ ತಿರುಗಾಡುತ್ತಿದ್ದಳು.
ಮತ್ತಷ್ಟು ಓದಿ: ವಿಗ್ ಧರಿಸಿದ್ದರಿಂದಲೇ ಕೇತನ್‌ನನ್ನು ಕೊಂದಳಾ ಸಿಯಾ?; ಮಹಾರಾಷ್ಟ್ರ ಸಿಎಂ ಭೇಟಿ ಬಳಿಕ ತಂದೆಯ ಶಾಕಿಂಗ್ ಹೇಳಿಕೆ
ಜೋಧ್‌ಪುರ ಟ್ರಿಪ್: ಡಿಸೆಂಬರ್ 2025 ರಲ್ಲಿ, ಚೇತನ್ ಸಿಯಾಳನ್ನು ತನ್ನ ತವರೂರಾದ ಜೋಧ್‌ಪುರಕ್ಕೆ ಪ್ರವಾಸಕ್ಕೆ ಕರೆದೊಯ್ದಿದ್ದನು. ಅಲ್ಲಿನ ಐಷಾರಾಮಿ ಪಂಚತಾರಾ ಹೋಟೆಲ್‌ನಲ್ಲಿ ಇಬ್ಬರೂ ಎರಡು ದಿನ ಕಳೆದು, ಮೆಹ್ರಾನ್‌ಗಢ ಕೋಟೆ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು.
ಉದಯಪುರ ಟ್ರಿಪ್: ಮೇ 2026 ರಲ್ಲಿ ಸಿಯಾ ಮತ್ತು ಚೇತನ್ ಒಟ್ಟಿಗೆ ಉದಯಪುರಕ್ಕೆ ಹೋಗಿದ್ದರು. ವಿಶೇಷವೆಂದರೆ, ಬಲಿಪಶು ಕೇತನ್ ಅಗರ್ವಾಲ್ ಮತ್ತು ಸಿಯಾ ಅವರ ವಿವಾಹವು ಮುಂಬರುವ ನವೆಂಬರ್‌ನಲ್ಲಿ ಇದೇ ಉದಯಪುರದಲ್ಲಿ ನಡೆಯಬೇಕಿತ್ತು. ಮದುವೆ ನಿಗದಿಯಾಗಿದ್ದ ಹೋಟೆಲ್‌ಗೂ ಸಿಯಾ ತನ್ನ ಪ್ರಿಯಕರನೊಂದಿಗೇ ಭೇಟಿ ನೀಡಿದ್ದಳು.
ಲೋಹಗಢ ಕೋಟೆಯಿಂದ ತಳ್ಳಿ ಭೀಕರ ಕೊಲೆ
ಸಿಯಾ ಮತ್ತು ಚೇತನ್ ಇಬ್ಬರೂ ಮದುವೆಯಾಗಲು ಬಯಸಿದ್ದರು. ಆದರೆ ಅದಕ್ಕೆ ಅಡ್ಡಿಯಾಗಿದ್ದ ಕೇತನ್ ಅಗರ್ವಾಲ್‌ನನ್ನು ದಾರಿಯಿಂದ ಮುಳ್ಳಿನಂತೆ ತೆಗೆದುಹಾಕಲು ಇಬ್ಬರೂ ಭೀಕರ ತಂತ್ರ ಹೆಣೆದಿದ್ದರು. ಇದರ ಭಾಗವಾಗಿ ಕೇತನ್‌ನನ್ನು ಪುಣೆಯ ಐತಿಹಾಸಿಕ ಲೋಹಗಢ ಕೋಟೆಯ ಮೇಲಕ್ಕೆ ಕರೆದೊಯ್ದು, ಅಲ್ಲಿಂದ ಕೆಳಗೆ ತಳ್ಳಿ ಕೊಂದಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಕಟ್ಟುನಿಟ್ಟಿನ ತನಿಖೆ ಮುಂದುವರೆಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
