ಹಾಲಿವುಡ್‌ನ ಸಾರ್ವಕಾಲಿಕ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಜುರಾಸಿಕ್ ಪಾರ್ಕ್’ (Jurassic Park) ಚಿತ್ರದ ಮೂಲಕ ವಿಶ್ವಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದ ನ್ಯೂಜಿಲೆಂಡ್ ಮೂಲದ ಖ್ಯಾತ ನಟ ಸ್ಯಾಮ್ ನೀಲ್ (Sam Neill) ಸೋಮವಾರ (ಜುಲೈ 13) ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸ್ಯಾಮ್ ನೀಲ್ ಅವರು ಕೊನೆಯುಸಿರೆಳೆದಿದ್ದು, ಈ ಆಘಾತಕಾರಿ ಸುದ್ದಿಯನ್ನು ಅವರ ಕುಟುಂಬಸ್ಥರು ನಟನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪ್ರಕಟಣೆಯ ಮೂಲಕ ಖಚಿತಪಡಿಸಿದ್ದಾರೆ.
‘ಅತ್ಯಂತ ತೀವ್ರವಾದ ದುಃಖದೊಂದಿಗೆ ನಾವು ಸ್ಯಾಮ್ ನೀಲ್ ಅವರ ಅಗಲಿಕೆಯ ಸುದ್ದಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಜುಲೈ 13ರಂದು ಸಿಡ್ನಿಯಲ್ಲಿ ಅವರು ಕೊನೆಯುಸಿರೆಳೆದರು. ತಮ್ಮ ಇಡೀ ಜೀವನದುದ್ದಕ್ಕೂ ಅವರು ಕಾಪಾಡಿಕೊಂಡು ಬಂದಿದ್ದ ಘನತೆಯೊಂದಿಗೇ, ಕುಟುಂಬದವರ ಸಮ್ಮುಖದಲ್ಲಿ ಅವರು ಶಾಂತಿಯುತವಾಗಿ ಕಣ್ಣುಮುಚ್ಚಿದರು’ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತರಾಗಿದ್ದರು:
‘ಈ ಸಾವು ಅತ್ಯಂತ ಹಠಾತ್ ಹಾಗೂ ಅನಿರೀಕ್ಷಿತವಾಗಿತ್ತು. ಆದರೆ ಅವರು ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತರಾಗಿದ್ದರು ಎಂಬುದು ನಮಗೆ ಸಮಾಧಾನದ ಸಂಗತಿಯಾಗಿದೆ. ಅವರಿಗೆ ಅದ್ಭುತವಾದ ಆರೈಕೆ ನೀಡಿದ ಸೇಂಟ್ ವಿನ್ಸೆಂಟ್ಸ್ ಪ್ರೈವೇಟ್ ಆಸ್ಪತ್ರೆಯ ಸಿಬ್ಬಂದಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಈ ಅಪಾರ ನಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸಬೇಕಾಗಿ ವಿನಂತಿಸುತ್ತೇವೆ’ ಎಂದು ಹೇಳಿಕೆಯಲ್ಲಿ ಕೋರಲಾಗಿದೆ.
ಅನಿರೀಕ್ಷಿತವಾಗಿ ಕೊನೆಯುಸಿರೆಳೆದ ನಟ:
ಸ್ಯಾಮ್ ನೀಲ್ ಅವರು ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ತೀವ್ರ ಸ್ವರೂಪದ ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಒಂದು ಹಂತದಲ್ಲಿ ಅವರಿಗೆ ಕಿಮೋಥೆರಪಿ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಆದರೆ, ಇಮ್ಯೂನ್ ಸಿಸ್ಟಮ್ ಮಾರ್ಪಡಿಸುವ ವಿಶೇಷವಾದ ಜೆನೆಟಿಕ್ ಚಿಕಿತ್ಸೆಯ ಮೂಲಕ ತಾವು ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಈ ವರ್ಷದ ಏಪ್ರಿಲ್‌ನಲ್ಲಿ ನೀಡಿದ್ದ ಸಂದರ್ಶನದಲ್ಲಿ ಸ್ಯಾಮ್ ಬಹಿರಂಗಪಡಿಸಿದ್ದರು. ಆದರೆ ಈಗ ಅನಿರೀಕ್ಷಿತವಾಗಿ ಅವರು ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ನಿಧನ, ಸಂತಾಪ ಸೂಚಿಸಿದ ಸಿಎಂ; ನಿಖರವಾಗಿ ತಿಳಿಯಲೇ ಇಲ್ಲ ಸಾವಿಗೆ ಕಾರಣ
ಕೋಟಿ ಕೋಟಿ ಆಸ್ತಿಯ ಒಡೆಯ:
‘ಸೆಲೆಬ್ರಿಟಿ ನೆಟ್ ವರ್ತ್’ ವರದಿಗಳ ಪ್ರಕಾರ, ಸ್ಯಾಮ್ ನೀಲ್ ಅವರು ಸುಮಾರು 18 ಮಿಲಿಯನ್ ಡಾಲರ್ (ಅಂದಾಜು 150 ಕೋಟಿ ರೂಪಾಯಿಗೂ ಹೆಚ್ಚು) ಮೌಲ್ಯದ ಆಸ್ತಿಯನ್ನು ಹೊಂದಿದ್ದರು. ‘ಜುರಾಸಿಕ್ ಪಾರ್ಕ್’ ಸಿನಿಮಾದಲ್ಲಿ ಡಾ. ಅಲಾನ್ ಗ್ರಾಂಟ್ ಪಾತ್ರದ ಮೂಲಕ ಜಗತ್ತಿನಾದ್ಯಂತ ಮನೆಮಾತಾಗಿದ್ದ ಅವರು, ‘ದಿ ಹಂಟ್ ಫಾರ್ ರೆಡ್ ಅಕ್ಟೋಬರ್’, ‘ದಿ ಪಿಯಾನೋ’ ಹಾಗೂ ‘ಪೊಸೆಷನ್’ ಸೇರಿದಂತೆ ಹಲವು ಪ್ರಸಿದ್ಧ ಸಿನಿಮಾಗಳಲ್ಲಿ ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
