ಹೆಚ್ಚಿನ ಬಡ್ಡಿ ಆಸೆ ತೋರಿಸಿ ಕೋಟಿ ಕೋಟಿ ವಂಚನೆ: ಮಹಿಳಾ ಸಂಘದ ಹೆಸರಲ್ಲಿ ಲೂಟಿ ಹೊಡೆದ ಮಹಿಳೆಯರು – Kannada News | Crores Duped in Alleged Fraud Using Women’s Association Name

ಬಾಗಲಕೋಟೆ, ಜುಲೈ 13: ಮಹಿಳಾ ಸಂಘದ ಹೆಸರಿನಲ್ಲಿ ಸಾವಿರಾರು ಅಮಾಯಕ ಮಹಿಳೆಯರಿಂದ ಕೋಟ್ಯಂತರ ರೂ ವಂಚಿಸಿರುವ (fraud) ಪ್ರಕರಣವೊಂದು ಬಾಗಲಕೋಟೆ (bagalkot) ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಬೀಳಗಿ ಪಟ್ಟಣದ ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ವಿದ್ಯಾ ಹಳ್ಳೂರು ಹಾಗೂ ಕಾರ್ಯದರ್ಶಿ ರಚನಾ ಬಂಟನೂರು ಎಂಬುವವರು ಕೋಟ್ಯಂತರ ರೂ ವಂಚಿಸಿದ್ದಾರೆ. ಸದ್ಯ ಹಣ ಕಳೆದುಕೊಂಡ ಮಹಿಳೆಯರು ಬೀಳಗಿ ಪೊಲೀಸರಿಗೆ ದೂರು ಕೊಡಲು ಮುಂದಾಗಿದ್ದಾರೆ.

ನಡೆದಿದ್ದೇನು?

ವಿದ್ಯಾ ಹಳ್ಳೂರು ಮತ್ತು ರಚನಾ ಬಂಟನೂರು ದುರ್ಗಾದೇವಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಬೀಳಗಿ ತಾಲೂಕಿನಾದ್ಯಂತ 170ಕ್ಕೂ ಹೆಚ್ಚು ಮಹಿಳಾ ಸಂಘಗಳನ್ನು ತೆರೆದಿದ್ದಾರೆ. ಆ ಮೂಲಕ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಮಹಿಳೆಯರಿಂದ ಪ್ರತಿ ವಾರ 100, 500 ಹಾಗೂ 1000 ರೂ.ರಂತೆ ಹಣ ಸಂಗ್ರಹಿಸುತ್ತಿದ್ದರು.

ಮಹಿಳೆಯರಿಗೆ ಧಮ್ಕಿ

ಮೂರು ವರ್ಷಗಳ ಬಳಿಕ ಹೆಚ್ಚಿನ ಬಡ್ಡಿ ಸೇರಿಸಿ ಹಣ ಕೊಡುವುದಾಗಿ ನಂಬಿಸಿದ್ದ ಇವರು, ಅವಧಿ ಮುಗಿದರೂ ಹಣ ಹಿಂತಿರುಗಿಸದೆ ಒಂದೊಂದು ಸಂಘಕ್ಕೆ 15 ರಿಂದ 20 ಲಕ್ಷ ರೂ.ವರೆಗೆ ವಂಚಿಸಿದ್ದಾರೆ. ಹಣ ವಾಪಸ್ ಕೇಳಿದವರಿಗೆ ಖಾತೆಯಲ್ಲಿ ಹಣವೇ ಇಲ್ಲದೆ ಬೌನ್ಸ್​ ಆಗಿರುವ ಚೆಕ್​ಗಳ ವಿತರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ‘ಬೀಳಗಿ ಠಾಣೆಯ ಸಿಪಿಐ ಹಾಗೂ ಕೆಲ ಪೊಲೀಸರು ನಮ್ಮ ಸಂಬಂಧಿಕರು, ನೀವು ಏನು ಮಾಡಿಕೊಳ್ಳಲು ಆಗೋದಿಲ್ಲ’ ಎಂದು ಮಹಿಳೆಯರಿಗೆ ಧಮ್ಕಿ ಹಾಕಿದ್ದಾರೆ.

ಇದನ್ನೂ ಓದಿ: ಬೇಲೂರು ಚನ್ನಕೇಶವಸ್ವಾಮಿ ದೇಗಲದ ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿ ಸಿಕ್ಕಿಬಿದ್ದ ಆಸಾಮಿ

ಇನ್ನು ಇತ್ತ ಆಕ್ರೋಶಗೊಂಡ ನೊಂದ ಮಹಿಳೆಯರು ಬೀಳಗಿಯಲ್ಲಿರುವ ಮಹಿಳಾ ಸಂಘದ ಕಚೇರಿಗೆ ಮುತ್ತಿಗೆ ಹಾಕಿ, ಇಬ್ಬರನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಕಾರ್ಯದರ್ಶಿ ರಚನಾಳನ್ನು ಮಹಿಳೆಯರು ಹಿಡಿದು ಎಳೆದಾಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ತಪ್ಪೊಪ್ಪಿಕೊಂಡ ಆರೋಪಿಗಳು

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ವಿದ್ಯಾ ಹಳ್ಳೂರು ಹಾಗೂ ರಚನಾಳನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ಮತ್ತು ಮಹಿಳಾ ಸದಸ್ಯರ ಮುಂದೆ ತಪ್ಪು ಒಪ್ಪಿಕೊಂಡಿರುವ ಇಬ್ಬರು ಆರೋಪಿಗಳು, “ಮಹಿಳೆಯರ ಬಳಿ ಸಂಗ್ರಹಿಸಿದ್ದ ಹಣವನ್ನು ಬೇರೆಡೆ ಹೂಡಿಕೆ ಮಾಡಿದ್ದೇವೆ. ಹೀಗಾಗಿ ಹಣ ವಾಪಸ್ ಕೊಡುವುದು ತಡವಾಗಿದೆ. ನಾವಿಬ್ಬರು ಕ್ಷಮೆ ಕೋರುತ್ತೇವೆ, ಆದಷ್ಟು ಬೇಗ ಹಣ ಹಿಂತಿರುಗಿಸುತ್ತೇವೆ” ಎಂದು ಸಬೂಬು ನೀಡಿ ಜಾರಿಕೊಳ್ಳಲು ಯತ್ನಿಸಿದ್ದಾರೆ. ಕೂಲಿ ಮಾಡಿ ಹಣ ತುಂಬಿದ್ದ ಸಾವಿರಾರು ಮಹಿಳೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *