ಜೂ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ನ ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಕೆಲವೇ ಕೆಲವು ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾಕ್ಕೆ ಇನ್ನೂ ಅಧಿಕೃತವಾಗಿ ಯಾವುದೇ ಹೆಸರಿಟ್ಟಿಲ್ಲವಾದರೂ ಅಭಿಮಾನಿಗಳು ಸಿನಿಮಾವನ್ನು ‘ಡ್ರ್ಯಾಗನ್’ ಎಂದು ಕರೆಯುತ್ತಿದ್ದಾರೆ. ಪ್ರಶಾಂತ್ ನೀಲ್, ತಮ್ಮ ಸಿನಿಮಾಗಳಲ್ಲಿ ಎಲ್ಲ ಭಾಷೆಯ ಕಲಾವಿದರನ್ನು ಬಳಸಿಕೊಳ್ಳುತ್ತಾರೆ. ‘ಕೆಜಿಎಫ್’ ಸಿನಿಮಾಕ್ಕೂ ಅವರು ಕನ್ನಡದ ಮಾತ್ರವಲ್ಲದೆ ಪರ ಭಾಷೆ ಕಲಾವಿದರನ್ನೂ ಬಳಸಿಕೊಂಡಿದ್ದರು. ‘ಸಲಾರ್’ನಲ್ಲಿ ಕನ್ನಡದ ನಟ ನವೀನ್ ಶಂಕರ್ ನಟಿಸಿದ್ದರು. ಇದೀಗ ಈ ಸಿನಿಮಾನಲ್ಲಿಯೂ ಕನ್ನಡದ ನಟ-ನಟಿಯರಿಗೆ ಸಾಕಷ್ಟು ಅವಕಾಶ ನೀಡಿದ್ದಾರೆ.
ಜೂ ಎನ್ಟಿಆರ್ ಅವರ ಸಿನಿಮಾನಲ್ಲಿ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಲಾಗಿದೆ. ಅವರ ಹೊರತಾಗಿ ಇನ್ನೂ ಕೆಲವು ಕನ್ನಡದ ನಟರು ಮತ್ತು ತಂತ್ರಜ್ಞರು ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಮಲಯಾಳಂನ ಸ್ಟಾರ್ ನಟರಲ್ಲಿ ಒಬ್ಬರಾದ ಟೊವಿನೋ ಥಾಮಸ್ ಅವರನ್ನು ಪ್ರಶಾಂತ್ ನೀಲ್ ಸಂಪರ್ಕಿಸಿ, ಪಾತ್ರವೊಂದರಲ್ಲಿ ನಟಿಸುವಂತೆ ಕೇಳಿದ್ದರು. ಆದರೆ ಟೊವಿನೋ ಆಫರ್ ಅನ್ನು ನಿರಾಕರಿಸಿದ್ದರು. ಅದರ ಬೆನ್ನಲ್ಲೆ ಇದೀಗ ಕನ್ನಡ ಮೂಲದ ನಟರೊಬ್ಬರು ಈ ಸಿನಿಮಾ ತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿ:ಹಾರರ್ ಚಿತ್ರಕ್ಕಾಗಿ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್
ನಟ ಪ್ರಕಾಶ್ ರಾಜ್ ಅವರು ಇದೀಗ ಜೂ ಎನ್ಟಿಆರ್-ಪ್ರಶಾಂತ್ ನೀಲ್ ಸಿನಿಮಾ ತಂಡ ಸೇರಿಕೊಂಡಿದ್ದು, ಒಂದು ಪವರ್ಫುಲ್ ಪಾತ್ರದಲ್ಲಿ ಪ್ರಕಾಶ್ ರಾಜ್ ನಟಿಸಲಿದ್ದಾರೆ. ಪ್ರಕಾಶ್ ಅವರು ಕನ್ನಡದ ನಟರಾದರೂ ಹಲವು ಭಾಷೆಗಳ ಸಿನಿಮಾಗಳಲ್ಲಿ ದಶಕಗಳಿಂದಲೂ ಅವರು ನಟಿಸುತ್ತಲೇ ಬಂದಿದ್ದಾರೆ. ಯಾವುದೇ ಪಾತ್ರವಿದ್ದರೂ ಅದನ್ನು ಲೀಲಾಜಾಲವಾಗಿ ನಿರ್ವಹಿಸುವುದು ಅವರ ಪ್ರತಿಭೆ. ಈ ಹಿಂದೆ ಪ್ರಶಾಂತ್ ನೀಲ್ ಅವರ ‘ಕೆಜಿಎಫ್ 2’ ಸಿನಿಮಾನಲ್ಲಿ ಪ್ರಕಾಶ್ ನಟಿಸಿದ್ದರು. ಈಗ ಈ ಹೊಸ ಸಿನಿಮಾನಲ್ಲೂ ನಟಿಸಲಿದ್ದಾರೆ.
ಇನ್ನು ಜೂ ಎನ್ಟಿಆರ್ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ನಟಿಸಿದ್ದಾರೆ. ‘ಸಾಂಬಾ’, ‘ಅಶೋಕ್’, ‘ಊಸರವಲ್ಲಿ’, ‘ಟೆಂಪರ್’, ‘ಬೃಂದಾವನಂ’ ಇನ್ನೂ ಕೆಲ ಸಿನಿಮಾಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಿದೆ. ಅದರಲ್ಲೂ ‘ಟೆಂಪರ್’ ಸಿನಿಮಾನಲ್ಲಿ ಇವರಿಬ್ಬರ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿತ್ತು. ಇದೀಗ ‘ಡ್ರ್ಯಾಗನ್’ ಸಿನಿಮಾನಲ್ಲೂ ಅದೇ ಮ್ಯಾಜಿಕ್ ಮುಂದುವರೆಯುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ