ನವದೆಹಲಿ, ಆಗಸ್ಟ್ 5: ಆಗಸ್ಟ್ 6ರಂದು ಜೆನ್ ಜಿ (Gen Z) ಮತ್ತು ಜೆನ್ ಅಲ್ಫಾ (Gen Alpha) ಯುವಜನರೊಂದಿಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮಕ್ಕೆ ಅವರು ಖುದ್ದಾಗಿ ಹಾಜರಾಗಲಿದ್ದು, ಯುವಜನರ ಜತೆ ಚರ್ಚೆ, ಸಂವಾದ ನಡೆಸಿದ್ದಾರೆ. ಈ ಮೂಲಕ ಭಾರತೀಯತೆಯ ವಿಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಉದ್ದೇಶವಿದೆ ಎಂದು IIMUN (India’s International Movement to Unite Nations) ಸಂಸ್ಥಾಪಕ ರಿಷಭ್ ಶಾ ತಿಳಿಸಿದ್ದಾರೆ. ಯುವಜನರಿಗಾಗಿ ಇಂತಹ ಕಾರ್ಯಕ್ರಮಗಳನ್ನು ತಮ್ಮ ಸಂಸ್ಥೆ ಕಳೆದ 15 ವರ್ಷಗಳಿಂದ ಆಯೋಜಿಸುತ್ತಿದೆ ಎಂದು ರಿಷಭ್ ಶಾ ತಿಳಿಸಿದ್ದಾರೆ.
ಪ್ರತಿ ವರ್ಷ ಆಗಸ್ಟ್‌ನಲ್ಲಿ ಕಾರ್ಯಕ್ರಮ
ಪ್ರತಿ ವರ್ಷ ಆಗಸ್ಟ್ 1ರಿಂದ 15ರ ನಡುವಿನ ಅವಧಿಯಲ್ಲಿ ಸಂಸ್ಥೆಯ ಪ್ರಮುಖ ಕಾರ್ಯಕ್ರಮ ನಡೆಯುತ್ತದೆ. ವರ್ಷವಿಡೀ ಭಾರತ ಸೇರಿದಂತೆ ಹಲವು ದೇಶಗಳಲ್ಲಿ 11ರಿಂದ 19 ವರ್ಷದ ಮಕ್ಕಳು ಮತ್ತು ಯುವಜನರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇಂದಿನ ಸಂದರ್ಭದಲ್ಲಿ ಈ ವಯೋಮಾನದವರನ್ನು Gen Z ಮತ್ತು Gen Alpha ಎಂದು ಕರೆಯಲಾಗುತ್ತದೆ ಎಂದು ರಿಷಭ್ ಶಾ ವಿವರಿಸಿದ್ದಾರೆ.
ಒಟ್ಟು ನಾಲ್ಕು ದಿನಗಳ ಕಾರ್ಯಕ್ರಮ
ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ Gen Z ಮತ್ತು Gen Alpha ಪೀಳಿಗೆಯವರು ವಿವಿಧ ವಿಚಾರಗಳ ಕುರಿತು ಚರ್ಚೆ ಹಾಗೂ ಸಂವಾದಗಳಲ್ಲಿ ಭಾಗವಹಿಸುತ್ತಾರೆ. ಮೊದಲ ದಿನ ಪ್ರಮುಖ ಗಣ್ಯರ ಭಾಷಣಗಳು ನಡೆಯಲಿದ್ದು, ಎರಡನೇ, ಮೂರನೇ ಮತ್ತು ನಾಲ್ಕನೇ ದಿನಗಳಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆ ಮತ್ತು ಡಿಬೇಟ್‌ಗಳು ನಡೆಯಲಿವೆ ಎಂದು ರಿಷಭ್ ಶಾ ಮಾಹಿತಿ ನೀಡಿದ್ದಾರೆ.
ರಿಷಭ್ ಶಾ ಮಾತಿನ ವಿಡಿಯೋ
VIDEO | On RSS chief Mohan Bhagwat’s August 6 interaction with Gen Z and Gen Alpha, I.I.M.U.N Founder Rishabh Shah says, “This may be new for many people, but our organisation has been working for the past 15 years. Every year, our culmination event is held in August, between… pic.twitter.com/Jnsk6LIFZR
— Press Trust of India (@PTI_News) August 4, 2026
ಇದೇ ಮಾದರಿಯ ಕಾರ್ಯಕ್ರಮಗಳನ್ನು ದೇಶದ 108 ನಗರಗಳು ಹಾಗೂ 15 ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಆಗಸ್ಟ್‌ನಲ್ಲಿ ನಡೆಯುವ ಕಾರ್ಯಕ್ರಮವು ಈ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವಾಗಿದೆ ಎಂದು ರಿಷಭ್ ಶಾ ಹೇಳಿದ್ದಾರೆ.
2000 ಮಂದಿ ಭಾಗವಹಿಸುವ ಕಾರ್ಯಕ್ರಮ
ಈ ಬಾರಿಯ ಕಾರ್ಯಕ್ರಮದಲ್ಲಿ ಒಟ್ಟು 2,000 ಮಂದಿ ಭಾಗವಹಿಸಲಿದ್ದು, ಅವರೆಲ್ಲರೂ Gen Z ಪೀಳಿಗೆಗೆ ಸೇರಿದವರು ಎಂದು ಅವರು ತಿಳಿಸಿದ್ದಾರೆ. Gen Z ಕೇಂದ್ರಿತ ಚರ್ಚೆಯಾಗಿರುವುದರಿಂದ ಈ ಕಾರ್ಯಕ್ರಮ ಇದೀಗ ಹೆಚ್ಚಿನ ಗಮನ ಸೆಳೆಯುತ್ತಿದೆ ಎಂದು ರಿಷಭ್ ಶಾ ಹೇಳಿದ್ದಾರೆ.
ಖುದ್ದಾಗಿ ಭಾಗವಹಿಸಲಿರುವ ಮೋಹನ್ ಭಾಗವತ್
ಮೋಹನ್ ಭಾಗವತ್ ಅವರು ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸುತ್ತಾರೆಯೇ ಅಥವಾ ನೇರವಾಗಿ ಹಾಜರಾಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರಿಷಭ್ ಶಾ, ಖುದ್ದಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
2016ರಲ್ಲೂ ಯುವಜನತೆ ಜತೆ ಸಂವಾದ ನಡೆಸಿದ್ದ ಭಾಗವತ್
ಈ ಹಿಂದೆ 2016 ಮತ್ತು 2020ರಲ್ಲಿಯೂ ಯುವಜನರೊಂದಿಗೆ ಸಂವಾದ ನಡೆಸಲು ಮೋಹನ್ ಭಾಗವತ್ ಅವರನ್ನು ಆಹ್ವಾನಿಸಲಾಗಿತ್ತು. ಆ ಸಂದರ್ಭಗಳಲ್ಲಿಯೂ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಯುವಜನರಿಗೆ ಮಾರ್ಗದರ್ಶನ ನೀಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು ಎಂದು ರಿಷಭ್ ಶಾ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಜತೆಗೂ ನಡೆದಿತ್ತು ಸಂವಾದ
ವಿವಿಧ ಕ್ಷೇತ್ರಗಳ ಹಲವು ಪ್ರಮುಖ ವ್ಯಕ್ತಿಗಳು ಈ ವೇದಿಕೆಯಲ್ಲಿ ಈ ಹಿಂದೆ ಭಾಗವಹಿಸಿ ಯುವಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ IIMUN ನಾಯಕತ್ವ ತಂಡದೊಂದಿಗೆ ಸಂವಾದ ನಡೆಸಿದ್ದಾರೆ ಎಂದು ರಿಷಭ್ ಶಾ ಹೇಳಿದ್ದಾರೆ. ಮುಂದಿನ ಪೀಳಿಗೆಗೆ ‘ಭಾರತೀಯತೆ’ಯ ಮನೋಭಾವವನ್ನು ಕೊಂಡೊಯ್ಯುವುದು ಈ ವೇದಿಕೆಯ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
