ಝಹೀರ್ ಖಾನ್ ಎಂಟ್ರಿ: ಅರ್ಧದಲ್ಲೇ LPL ತಂಡದ ಹೆಸರು ಬದಲು! – Kannada News | Zaheer Khan Buys Jaffna Franchise; Rebranded as Anchor Jaffna Kings

ಲಂಕಾ ಪ್ರೀಮಿಯರ್ ಲೀಗ್ (LPL) ಇತಿಹಾಸದಲ್ಲೇ ಅತ್ಯಂತ ರೋಚಕ ಟ್ವಿಸ್ಟ್ ಸಿಕ್ಕಿದೆ. ಮ್ಯಾಚ್ ಫಿಕ್ಸಿಂಗ್ ಆರೋಪ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದ್ದ ಜಾಫ್ನಾ ಫ್ರಾಂಚೈಸಿಯನ್ನು ಭಾರತದ ಮಾಜಿ ವೇಗಿ ಝಹೀರ್ ಖಾನ್ ಖರೀದಿ ಮಾಡಿದ್ದಾರೆ. ಝಹೀರ್ ಖಾನ್ ಅವರ ಒಡೆತನದ ‘ಆಂಕರ್ ಸ್ಪೋರ್ಟ್ಸ್ AB’ ಸಂಸ್ಥೆಯು ಜಾಫ್ನಾ ತಂಡದ ಹೊಸ ಮಾಲೀಕತ್ವವನ್ನು ಪಡೆದುಕೊಂಡಿದ್ದು, ತಂಡಕ್ಕೆ ಈಗ ‘ಆಂಕರ್ ಜಾಫ್ನಾ ಕಿಂಗ್ಸ್’ ಎಂದು ಮರುನಾಮಕರಣ ಮಾಡಲಾಗಿದೆ.

ಝಹೀರ್ ಎಂಟ್ರಿಗೆ ಕಾರಣವೇನು?

ಕೆಲವು ದಿನಗಳ ಹಿಂದಷ್ಟೇ ಜಾಫ್ನಾ ಕಿಂಗ್ಸ್ ತಂಡದ ಸಹ-ಮಾಲೀಕ ಹಾಗೂ ಭಾರತದ ಮಾಜಿ ಅಂಡರ್-19 ಆಟಗಾರ ಮಂಜೋತ್ ಕಲ್ರಾ ಅವರನ್ನು ಶ್ರೀಲಂಕಾದ ಕ್ರೀಡಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಕೊಲಂಬೊದಲ್ಲಿ ಬಂಧಿಸಿದ್ದರು. ತಮ್ಮದೇ ತಂಡದ ಆಟಗಾರರಿಗೆ ಪಂದ್ಯ ಫಿಕ್ಸ್ ಮಾಡಲು ಲಂಚದ ಆಮಿಷ ಒಡ್ಡಿದ ಗಂಭೀರ ಆರೋಪ ಕಲ್ರಾ ಮೇಲಿತ್ತು.

ಈ ಹಗರಣದ ಬೆನ್ನಲ್ಲೇ ಜಾಫ್ನಾ ತಂಡದ ಹಿಂದಿನ ಮಾಲೀಕತ್ವ ಸಂಸ್ಥೆಯಾದ ‘ಸ್ಪೋರ್ಟ್ಸ್ ಕಮ್ಯೂನ್’ ಆರ್ಥಿಕವಾಗಿ ದಿವಾಳಿಯಾಯಿತು. ಆಟಗಾರರಿಗೆ ಸಂಬಳ ನೀಡಲು ವಿಫಲವಾದ ಕಾರಣ, ಆಟಗಾರರು ಜೆರ್ಸಿ ಮೇಲಿದ್ದ ಪ್ರಾಯೋಜಕರ ಲೋಗೋಗಳಿಗೆ ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದು ಪ್ರತಿಭಟನೆ ನಡೆಸಿದ್ದರು.

ಪರಿಸ್ಥಿತಿ ಕೈಮೀರುತ್ತಿದ್ದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ (SLC) ಹಳೆಯ ಒಪ್ಪಂದವನ್ನು ರದ್ದುಗೊಳಿಸಿ, ಝಹೀರ್ ಖಾನ್ ಅವರ ಸಂಸ್ಥೆಗೆ ಮಾಲೀಕತ್ವ ಹಸ್ತಾಂತರಿಸಿದೆ.

‘ಆಂಕರ್ ಜಾಫ್ನಾ ಕಿಂಗ್ಸ್’ ಕಣಕ್ಕೆ:|

ಸ್ವೀಡನ್‌ನ ಸ್ಟಾಕ್‌ಹೋಮ್ ಮೂಲದ ಕ್ರೀಡಾ ಹೂಡಿಕೆ ಸಂಸ್ಥೆಯಾದ ‘ಆಂಕರ್ ಸ್ಪೋರ್ಟ್ಸ್ AB’ ಮೂಲಕ ಝಹೀರ್ ಖಾನ್ ಮತ್ತು ಉದ್ಯಮಿ ನಾಗೇಂದ್ರ ಸಿದ್ದೂಟಮ್ ಈ ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ವಿವಾದಗಳಿಂದ ಕಂಗೆಟ್ಟಿದ್ದ ಲಂಕಾ ಲೀಗ್‌ಗೆ ಝಹೀರ್ ಖಾನ್ ಅವರಂತಹ ದಿಗ್ಗಜ ಕ್ರಿಕೆಟಿಗನ ಎಂಟ್ರಿಯು ಹೊಸ ಕಳೆ ಹಾಗೂ ವಿಶ್ವಾಸಾರ್ಹತೆಯನ್ನು ತಂದುಕೊಟ್ಟಿದೆ.

ಆಫ್-ಫೀಲ್ಡ್ ವಿವಾದಗಳ ನಡುವೆಯೂ ಜಾಫ್ನಾ ಕಿಂಗ್ಸ್ ತಂಡವು ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿದೆ. ಆಡಿದ 8 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 11 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಬಾಬರ್ ಆಝಂ

ಇದೀಗ ಜಾಫ್ನಾ ಕಿಂಗ್ಸ್ ತಂಡವು ಹೊಸ ಹೆಸರಿನೊಂದಿಗೆ ಅಂದರೆ, ‘ಆಂಕರ್ ಜಾಫ್ನಾ ಕಿಂಗ್ಸ್’ ಹೆಸರಿನಲ್ಲಿ ಮುಂಬರುವ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

Source link

Leave a Reply

Your email address will not be published. Required fields are marked *