
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ನ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ನಾಯಕನಾಗಿ ಜೇಕಬ್ ಬೆಥೆಲ್ (Jacob Bethell) ಆಯ್ಕೆಯಾಗಿದ್ದಾರೆ. ಕಳೆದ ಬಾರಿ ತಂಡದ ನಾಯಕನಾಗಿ ಲಿಯಮ್ ಲಿವಿಂಗ್ಸ್ಟೋನ್ ಈ ಬಾರಿ ಲಂಡನ್ ಸ್ಪಿರಿಟ್ ಪರ ಕಣಕ್ಕಿಳಿಯಲಿದ್ದು, ಹೀಗಾಗಿ ಹೊಸ ನಾಯಕನಾಗಿ ಬೆಥೆಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಕಳೆದ ಬಾರಿ ಕೂಡ ಜೇಕಬ್ ಬೆಥೆಲ್ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಈ ಬಾರಿಯ ಹರಾಜಿಗೂ ಮುನ್ನ ಅವರನ್ನು ಫೀನಿಕ್ಸ್ ಫ್ರಾಂಚೈಸಿ ಸುಮಾರು ₹11 ಕೋಟಿಗೂ ಅಧಿಕ (3 ವರ್ಷಕ್ಕೆ £1.02m) ಮೊತ್ತಕ್ಕೆ ರಿಟೈನ್ ಮಾಡಿಕೊಂಡಿದೆ.
ಇದೀಗ ರಿಟೈನ್ ಆಗಿರುವ 22 ವರ್ಷದ ಜೇಕಬ್ ಬೆಥೆಲ್ಗೆ ಕ್ಯಾಪ್ಟನ್ ಪಟ್ಟ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಫ್ರಾಂಚೈಸಿ ಮುಂದಾಗಿದೆ. ಇನ್ನು ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಮಹಿಳಾ ತಂಡದ ನಾಯಕಿಯಾಗಿ ಆಸ್ಟ್ರೇಲಿಯನ್ ಆಟಗಾರ್ತಿ ಎಲಿಸ್ ಪೆರ್ರಿ ಮುಂದುವರಿಯಲಿದ್ದಾರೆ.
ಏನಿದು ಹಂಡ್ರೆಡ್ ಲೀಗ್?
ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.
ದಿ ಹಂಡ್ರೆಡ್ ಲೀಗ್ನ ನಿಯಮಗಳು:
- – ದಿ ಹಂಡ್ರೆಡ್ ಲೀಗ್ನಲ್ಲಿ ಒಂದು ಇನ್ನಿಂಗ್ಸ್ನಲ್ಲಿ 100 ಎಸೆತಗಳನ್ನು ಬೌಲಿಂಗ್ ಮಾಡಲಾಗುತ್ತದೆ. ಅಂದರೆ ಟಿ20 ಕ್ರಿಕೆಟ್ನಲ್ಲಿ 20 ಓವರ್ನಂತೆ 120 ಎಸೆತಗಳಾದರೆ ಇಲ್ಲಿ ತಲಾ 100 ಎಸೆತಗಳಿರಲಿವೆ.
- – ಈ ಲೀಗ್ನಲ್ಲಿ ಬೌಲರ್ ಸತತ 5 ಅಥವಾ 10 ಬೌಲ್ಗಳನ್ನು ಮಾಡಬಹುದು. ಅಂದರೆ ಇಲ್ಲಿ ಓವರ್ ಲೆಕ್ಕಚಾರವು 5 ಎಸೆತಗಳಿಗೆ ಸೀಮಿತವಾಗಿರುತ್ತದೆ. ಆದರೆ ಇಲ್ಲಿ ಸತತ 10 ಎಸೆತಗಳನ್ನು ಎಸೆಯುವ ಅವಕಾಶ ಇರುವುದು ವಿಶೇಷ.
- – ಒಂದು ಇನಿಂಗ್ಸ್ನಲ್ಲಿ ಒಬ್ಬ ಬೌಲರ್ಗೆ 20 ಎಸೆತಗಳು ಮಾತ್ರ ಇರಲಿದೆ.
- – ಈ ಇಪ್ಪತ್ತು ಎಸೆತಗಳನ್ನು 2 ಬಾರಿ ಬೌಲಿಂಗ್ ಮಾಡಿ ಮುಗಿಸಬಹುದು. ಅಂದರೆ ಮೊದಲ ಓವರ್ನಲ್ಲಿ ಸತತ 10 ಎಸೆತ ಹಾಗೂ 2ನೇ ಓವರ್ನಲ್ಲಿ ಸತತ 10 ಎಸೆತ ಎಸೆಯಬಹುದು. ಇದರ ಹೊರತಾಗಿ ಓವರ್ ಲೆಕ್ಕಚಾರದಲ್ಲಿ 5 ಎಸೆತಗಳಂತೆ ನಾಲ್ಕು ಓವರ್ ಮಾಡಬಹುದು.
- – ಸಾಮಾನ್ಯವಾಗಿ ಕ್ರಿಕೆಟ್ನಲ್ಲಿ ಒಂದು ಓವರ್ ಬಳಿಕ ಬ್ಯಾಟ್ಸ್ಮನ್ ಸ್ಟ್ರೈಕ್ ಬದಲಿಸಬೇಕು. ಆದರೆ ದಿ ಹಂಡ್ರೆಡ್ ಲೀಗ್ನಲ್ಲಿ 10 ಎಸೆತಗಳ ಬಳಿಕ ಸ್ಟ್ರೈಕ್ ಬದಲಿಸಿಕೊಳ್ಳಲಾಗುತ್ತದೆ.
- – ಪ್ರತಿ ತಂಡಕ್ಕೆ ಪ್ರಾರಂಭದಲ್ಲಿ 25 ಎಸೆತಗಳ ಪವರ್ಪ್ಲೇ ನೀಡಲಾಗುತ್ತದೆ. ಈ ವೇಳೆ 30 ಯಾರ್ಡ್ ಹೊರಗೆ ಇಬ್ಬರು ಫೀಲ್ಡರ್ಗಳಿಗೆ ಮಾತ್ರ ಅವಕಾಶ ಇರಲಿದೆ.
- – ದಿ ಹಂಡ್ರೆಡ್ ಲೀಗ್ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳುತ್ತಿದ್ದು, ಒಂದು ತಂಡದಲ್ಲಿ 15 ಮಂದಿಗೆ ಮಾತ್ರ ಅವಕಾಶ ಇರಲಿದೆ.
- – 8 ತಂಡಗಳಲ್ಲಿ ಟಾಪ್ 3 ಬರುವ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಅಂದರೆ ಟಾಪ್ 1 ತಂಡದ ಜೊತೆ ಆಡಲು 2ನೇ ಮತ್ತು 3ನೇ ತಂಡ ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಇದರಲ್ಲಿ ಗೆದ್ದ ತಂಡ ಫೈನಲ್ ಆಡಲಿದೆ.
ಇದನ್ನೂ ಓದಿ: T20 World Cup 2026: ಕಾರ್ ಸಿಕ್ಕಿದ್ದು ಯಾರಿಗೆ?
ದಿ ಹಂಡ್ರೆಡ್ ಲೀಗ್ನಲ್ಲಿರುವ ಐಪಿಎಲ್ ಫ್ರಾಂಚೈಸಿಗಳು:
- ಎಂಐ ಲಂಡನ್ (ಮುಂಬೈ ಇಂಡಿಯನ್ಸ್)
- ಸನ್ರೈಸರ್ಸ್ ಲೀಡ್ಸ್ (ಸನ್ರೈಸರ್ಸ್ ಹೈದರಾಬಾದ್)
- ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಲಕ್ನೋ ಸೂಪರ್ ಜೈಂಟ್ಸ್)
- ಸದರ್ನ್ ಬ್ರೇವ್ (ಡೆಲ್ಲಿ ಕ್ಯಾಪಿಟಲ್ಸ್)
- ಬರ್ಮಿಂಗ್ಹ್ಯಾಮ್ ಫೀನಿಕ್ಸ್
- ಲಂಡನ್ ಸ್ಪಿರಿಟ್
- ಟ್ರೆಂಟ್ ರಾಕೆಟ್ಸ್
- ವೆಲ್ಷ್ ಫೈರ್