ವಯಸ್ಸು 75 ದಾಟಿದ್ದರೂ ಈಗಲೂ ಒಂದರ ಹಿಂದೊಂದು ನಟಿಸುತ್ತಿದ್ದಾರೆ ಸೂಪರ್ ಸ್ಟಾರ್ ರಜನೀಕಾಂತ್ (Rajinikanth). ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. 2023 ರಲ್ಲಿ ಬಿಡುಗಡೆ ಆಗಿದ್ದ ರಜನೀಕಾಂತ್ ನಟನೆಯ ‘ಜೈಲರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾದ ಹಾಡುಗಳು ಸಹ ಬ್ಲಾಕ್ ಬಸ್ಟರ್ ಎನಿಸಿಕೊಂಡಿದ್ದವು. ಇದೀಗ ಅದೇ ನಿರ್ದೇಶಕನೊಟ್ಟಿಗೆ ‘ಜೈಲರ್ 2’ ಸಿನಿಮಾ ಆರಂಭಿಸಿದ್ದ ರಜನೀಕಾಂತ್ ಇದೀಗ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ.
ಕಳೆದ ವರ್ಷ ಆರಂಭವಾಗಿದ್ದ ‘ಜೈಲರ್ 2’ ಸಿನಿಮಾದ ಶೂಟಿಂಗ್ ನಿನ್ನೆಯಷ್ಟೆ ಮುಗಿದಿದೆ. ರಜನೀಕಾಂತ್, ನಿರ್ದೇಶಕ ನೆಲ್ಸನ್ ಸೇರಿದಂತೆ ಇಡೀ ಚಿತ್ರತಂಡ ಕೇಕ್ ಕತ್ತರಿಸಿ ಶೂಟಿಂಗ್ ಮುಗಿದಿದ್ದನ್ನು ಸಂಭ್ರಮಿಸಿದ್ದಾರೆ. ಸಿನಿಮಾದ ಚಿತ್ರೀಕರಣ, ಕೇರಳ, ಹೈದರಾಬಾದ್, ಚೆನ್ನೈಗಳಲ್ಲಿ ನಡೆದಿದ್ದು, ಕರ್ನಾಟಕದಲ್ಲಿಯೂ ಕೆಲ ದೃಶ್ಯಗಳ ಚಿತ್ರೀಕರಣವನ್ನು ಮಾಡಲಾಗಿದೆ. ರಜನೀಕಾಂತ್ ಜೊತೆಗೆ ಹೊರಾಂಗಣ ಚಿತ್ರೀಕರಣ ಕಷ್ಟ ಎಂದು ಹಲವು ನಿರ್ದೇಶಕರುಗಳು ಸೆಟ್ಗಳಲ್ಲಿಯೇ ಚಿತ್ರೀಕರಿಸುತ್ತಾರೆ. ಆದರೆ ನೆಲ್ಸನ್, ‘ಜೈಲರ್ 2’ ಸಿನಿಮಾದ ಬಹುಭಾಗವನ್ನು ಹೊರಾಂಗಣದಲ್ಲಿಯೇ ಚಿತ್ರೀಕರಿಸಿದ್ದಾರೆ ಎನ್ನಲಾಗುತ್ತಿದೆ.
‘ಜೈಲರ್’ ಸಿನಿಮಾ ತನ್ನ ಅದ್ಧೂರಿ ಕ್ಯಾಮಿಯೋಗಳಿಂದ, ಅತಿಥಿ ಪಾತ್ರಗಳಿಂದ ಭಾರಿ ದೊಡ್ಡ ಹಿಟ್ ಆಗಿತ್ತು. ಶಿವರಾಜ್ ಕುಮಾರ್, ಮೋಹನ್ಲಾಲ್, ತಮನ್ನಾ ಇನ್ನೂ ಹಲವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ‘ಜೈಲರ್ 2’ನಲ್ಲೂ ಸಹ ಹಲವು ಅತಿಥಿ ಪಾತ್ರಗಳು ಇದ್ದು, ಅವುಗಳಲ್ಲಿ ಖ್ಯಾತ ನಟರುಗಳು ನಟಿಸಿದ್ದಾರೆ ಎನ್ನಲಾಗುತ್ತಿದೆ. ಶಿವರಾಜ್ ಕುಮಾರ್, ಮೋಹನ್ಲಾಲ್ ಜೊತೆಗೆ ಬಾಲಿವುಡ್ನ ಶಾರುಖ್ ಖಾನ್ ಸಹ ನಟಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದಿನ್ನೂ ಖಾತ್ರಿ ಆಗಿಲ್ಲ. ತೆಲುಗಿನ ನಟ ಬಾಲಕೃಷ್ಣ ಸಹ ನಟಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.
ಇದನ್ನೂ ಓದಿ:ರಜನೀಕಾಂತ್ಗೆ ಕೈಕೊಟ್ಟ ಶಾರುಖ್ ಖಾನ್, ‘ಜೈಲರ್ 2’ಗೆ ನೋ?
‘ಜೈಲರ್ 2’ ಸಿನಿಮಾನಲ್ಲಿ ರಜನೀಕಾಂತ್ ಜೊತೆಗೆ ರಮ್ಯಾಕೃಷ್ಣ, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಇನ್ನೂ ಕೆಲವರಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್, ಸಿನಿಮಾಕ್ಕೆ ಸನ್ ನೆಟ್ವರ್ಕ್ಸ್ನ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಸಿನಿಮಾ ಆಗಸ್ಟ್ ತಿಂಗಳಲ್ಲಿ ಬಿಡಗುಡೆ ಆಗುವ ಸಾಧ್ಯತೆ ಇದೆ.
‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿಸಿರುವ ರಜನೀಕಾಂತ್ ಅವರು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದರೆ ಆ ಸಿನಿಮಾದ ನಿರ್ದೇಶಕ ಇನ್ನೂ ಖಾತ್ರಿ ಆಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದಾದ ಬಳಿಕ ಕಮಲ್ ಮತ್ತು ರಜನೀಕಾಂತ್ ಒಟ್ಟಿಗೆ ಮತ್ತೊಂದು ಸಿನಿಮಾನಲ್ಲಿ ನಟಿಸಲಿದ್ದಾರಂತೆ. ಆ ಸಿನಿಮಾವನ್ನು ನೆಲ್ಸನ್ ಅವರೇ ನಿರ್ದೇಶನ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
