ಜೈಲಿನಲ್ಲಿದ್ದ ಲವರ್​​ ಭೇಟಿಯಾಗಲು 10 ಜೀವಂತ ಗುಂಡುಗಳ ಸಮೇತ ಬಂದ ಅಪ್ರಾಪ್ತೆ: ಮುಂದಾಗಿದ್ದೇನು? – Kannada News | Minor Girl Caught with 10 Live Bullets and Fake Aadhaar While Visiting Jailed Boyfriend

ಜೈಲಿನಲ್ಲಿದ್ದ ಲವರ್​​ ಭೇಟಿಯಾಗಲು 10 ಜೀವಂತ ಗುಂಡುಗಳ ಸಮೇತ ಬಂದ ಅಪ್ರಾಪ್ತೆImage Credit source: NDTV

ಲಖನೌ, ಆಗಸ್ಟ್​​ 09: ಜೈಲಿನಲ್ಲಿದ್ದ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಬಳಿ 10 ಜೀವಂತ ಗುಂಡುಗಳು ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಗೋಂಡಾದಲ್ಲಿ ನಡೆದಿದೆ. ಬಾಲಕಿಯ ಬಳಿ ನಕಲಿ ಆಧಾರ್‌ ಕಾರ್ಡ್‌ ಹಾಗೂ ನಗದು ಹಣವೂ ಪತ್ತೆಯಾಗಿದ್ದು, ಆಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಗೋಂಡಾ ವಿಭಾಗೀಯ ಜೈಲಿನಲ್ಲಿರುವ ಹರಷು ಕಶ್ಯಪ್‌ ಎಂಬ ಕೈದಿಯನ್ನು ಭೇಟಿಯಾಗಲು ಬಾಲಕಿ ಬಂದಿದ್ದಳು ಎಂದು ಜೈಲರ್‌ ಅಫ್ತಾಬ್‌ ಆಲಂ ಅನ್ಸಾರಿ ತಿಳಿಸಿದ್ದಾರೆ.

ಬಾಲಕಿ, ಮತ್ತೋರ್ವ ವಶಕ್ಕೆ

ಜೈಲಿನ ಮುಖ್ಯ ದ್ವಾರದಲ್ಲಿ ಕಡ್ಡಾಯ ಭದ್ರತಾ ತಪಾಸಣೆ ನಡೆಸುವ ವೇಳೆ ಬಾಲಕಿ ನೀಡಿದ ಗುರುತಿನ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಆಕೆ ತನ್ನ ಆಧಾರ್‌ ಕಾರ್ಡ್‌ನಲ್ಲಿದ್ದ ಹೆಸರಿಗಿಂತ ಭಿನ್ನವಾದ ಹೆಸರನ್ನು ಅಧಿಕಾರಿಗಳಿಗೆ ತಿಳಿಸಿದ್ದಳು. ಇದರಿಂದ ಅನುಮಾನಗೊಂಡ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಜೇಬಿನಲ್ಲಿ 10 ಜೀವಂತ ಗುಂಡುಗಳು ಪತ್ತೆಯಾಗಿವೆ ಎಂದು ಜೈಲರ್‌ ತಿಳಿಸಿದ್ದಾರೆ. ಬಳಿಕ ಜೈಲು ಪೊಲೀಸ್‌ ಹೊರಠಾಣೆಯ ಉಸ್ತುವಾರಿಯನ್ನು ಸ್ಥಳಕ್ಕೆ ಕರೆಸಲಾಗಿದ್ದು, ಬಾಲಕಿ ಹಾಗೂ ಆಕೆಯೊಂದಿಗೆ ಬಂದಿದ್ದ ವ್ಯಕ್ತಿಯನ್ನು ವಶಪಡಿಸಿಕೊಂಡ ವಸ್ತುಗಳ ಸಮೇತ ಪೊಲೀಸರಿಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ: ವಿದೇಶಿ ಉದ್ಯೋಗದ ಆಮಿಷ; ಪೋರ್ಚುಗಲ್‌ನಲ್ಲಿ ಭಾರತೀಯ ಯುವತಿಯನ್ನು ಬಿಯರ್ ಶಾಪ್ ಮಾಲೀಕನಿಗೆ ಮಾರಿದ ಏಜೆನ್ಸಿ!

ವಿಚಾರಣೆ ವೇಳೆ ಬಾಲಕಿ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿದ್ದಾಳೆ. ಪತ್ತೆಯಾದ ಗುಂಡುಗಳು ತನ್ನ ತಂದೆಯ ಪರವಾನಗಿ ಹೊಂದಿರುವ ಪಿಸ್ತೂಲ್‌ಗೆ ಸೇರಿದ್ದವು ಎಂದು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ತಂದೆಗೆ ಬೇಗ ಕೋಪ ಬರುತ್ತದೆ. ತಾನು ಜೈಲಿನಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಬಂದಿರುವ ವಿಷಯ ತಿಳಿದರೆ ಅವರು ಯಾವುದಾದರೂ ಅಪಾಯಕಾರಿ ನಿರ್ಧಾರ ಕೈಗೊಳ್ಳಬಹುದು ಎಂಬ ಭಯದಿಂದ ಪಿಸ್ತೂಲ್‌ನಲ್ಲಿದ್ದ ಗುಂಡುಗಳನ್ನು ತೆಗೆದುಕೊಂಡು ಬಂದಿದ್ದಾಗಿ ಬಾಲಕಿ ಹೇಳಿದ್ದಾಳೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜೈಲರ್‌ ತಿಳಿಸಿದ್ದಾರೆ. ಗುಂಡುಗಳು ನಿಜವಾಗಿಯೂ ಆಕೆಯ ತಂದೆಯ ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಕ್ಕೆ ಸೇರಿದ್ದವೇ ಹಾಗೂ ನಕಲಿ ಗುರುತಿನ ದಾಖಲೆ ಆಕೆಗೆ ಹೇಗೆ ದೊರೆಯಿತು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ (Arms Act) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 8:45 am, Sun, 9 August 26

Source link

Leave a Reply

Your email address will not be published. Required fields are marked *