ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಮೈದಾನದ ಒಳಗೆ ಹಾಗೂ ಹೊರಗೆ ಸದಾ ಗಂಭೀರ ಮುಖಭಾವದಲ್ಲೇ ಕಾಣಿಸಿಕೊಳ್ಳುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಇದೀಗ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಸಹ ಆಟಗಾರ, ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಬೌಲಿಂಗ್ ಶೈಲಿಯನ್ನು ತಮಾಷೆಯಾಗಿ ಅನುಕರಿಸುವ ಮೂಲಕ, ಸದಾ ಗಂಭೀರವಾಗಿರುವ ಗಂಭೀರ್ ಮುಖದಲ್ಲೂ ದೊಡ್ಡ ನಗು ಮೂಡುವಂತೆ ಮಾಡಿದ್ದಾರೆ!
ಏನಿದು ಘಟನೆ?
ಕೊಲಂಬೊದಲ್ಲಿ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ದಿನದಂದು ಗಂಭೀರ್ ಹಾಗೂ ಜಡೇಜಾ ಡ್ರೆಸ್ಸಿಂಗ ರೂಮ್ ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಜಡೇಜಾ ಅವರು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ವಿಶಿಷ್ಟವಾದ ರನ್-ಅಪ್, ಆಕ್ಷನ್ ಹಾಗೂ ಚೆಂಡನ್ನು ರಿಲೀಸ್ ಮಾಡುವ ವಿಚಿತ್ರ ಶೈಲಿಯನ್ನು ಮೈದಾನದ ಹೊರಗಡೆ ನಿಂತು ಅನುಕರಣೆ ಮಾಡಿದ್ದಾರೆ.
ಕುಲ್ದೀಪ್ ಯಾದವ್ ಬೌಲಿಂಗ್ ಮಾಡುವಾಗ ಕೈಗಳನ್ನು ತಿರುಗಿಸುವ ರೀತಿಯನ್ನು ನೋಡಿ, “ಅವರು ಗಾಳಿಯಲ್ಲಿ ಈಜಿದಂತೆ ಕಾಣುತ್ತದೆ” ಎಂದು ಜಡೇಜಾ ತಮಾಷೆ ಮಾಡಿದ್ದಾರೆ.
ಗಂಭೀರ್ ‘ಪ್ರೈಸ್‌ಲೆಸ್’ ರಿಯಾಕ್ಷನ್:
ಸಾಮಾನ್ಯವಾಗಿ ಸದಾ ಗಂಭೀರವಾಗಿರುವ ಗೌತಮ್ ಗಂಭೀರ್, ಜಡೇಜಾ ಅವರ ಈ ಆಕ್ಟಿಂಗ್ ಮತ್ತು ಮುಖದ ಹಾವಭಾವಗಳನ್ನು ನೋಡಿ ತಡೆದುಕೊಳ್ಳಲಾರದೆ ಜೋರಾಗಿ ನಕ್ಕಿದ್ದಾರೆ. ಗಂಭೀರ್ ಅವರ ಈ ಅಪರೂಪದ ನಗುವಿನ ವಿಡಿಯೋ ತುಣುಕು ಇದೀಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಕೇವಲ ಕೋಚ್ ಮಾತ್ರವಲ್ಲದೆ, ಪಂದ್ಯದ ಕಾಮೆಂಟೇಟರ್‌ಗಳು ಕೂಡ ಜಡೇಜಾ ಅವರ ಈ ಕ್ರಿಯೇಟಿವಿಟಿಗೆ ಮನಸಾರೆ ನಕ್ಕಿದ್ದಾರೆ.
#1 All-rounder for a reason.😂
Ravindra Jadeja can bat, bowl, field, and apparently, crack Gautam Gambhir too. 😆
Watch Day 3 of SLC XI vs #TeamIndia tomorrow, 10 AM onwards, LIVE on Sony Sports Network TV channels & Sony LIV.#SonySportsNetwork #SonyLIV pic.twitter.com/TWbJzVPEed
— Sony Sports Network (@SonySportsNetwk) August 8, 2026
ಆಗಸ್ಟ್ 15 ರಿಂದ ಗಾಲೆನಲ್ಲಿ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ಭಾರತ ತಂಡದ ಆಟಗಾರರು ಸಖತ್ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ದೇವದತ್ ಪಡಿಕ್ಕಲ್ ಅವರ ಭರ್ಜರಿ ಶತಕ (142*) ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 2ನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿದೆ.
ಇದನ್ನೂ ಓದಿ: ಭಾರತ ಟೆಸ್ಟ್ ತಂಡದ ಐವರು ಆಟಗಾರರು ಗಾಯಾಳು!
ಇದು ಮೂರು ದಿನಗಳ ಅಭ್ಯಾಸ ಪಂದ್ಯವಾಗಿರುವುದರಿಂದ ಇಂದು ಟೀಮ್ ಇಂಡಿಯಾ ಕೆಲ ಹೊತ್ತು ಬ್ಯಾಟಿಂಗ್ ಮುಂದುವರೆಸಿ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿದೆ. ಅಲ್ಲದೆ ಬೌಲಿಂಗ್ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬಹುದು. ಈ ಮೂಲಕ ಲಂಕಾ ವಿರುದ್ಧದ ಸರಣಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ.
