‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಅನೌನ್ಸ್ ಆದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿದೆ. ಈಗ ಈ ಚಿತ್ರದ ನಾಯಕಿ ಕಿಯಾರಾ ಅಡ್ವಾಣಿ (Kiara Advani) ಅವರು ತಮ್ಮ ಬಗ್ಗೆ ಹರಿದಾಡುತ್ತಿದ್ದ ದೊಡ್ಡ ಸುಳ್ಳು ಸುದ್ದಿಯೊಂದಕ್ಕೆ ಬ್ರೇಕ್ ಹಾಕಿದ್ದಾರೆ. ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ನಡುವೆ ಬೋಲ್ಡ್ ದೃಶ್ಯಗಳು ಇವೆ. ಅವುಗಳ ಬಗ್ಗೆ ಕಿಯಾರಾ ತಕರಾರು ತೆಗೆಯುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅದು ನಿಜವಲ್ಲ ಎಂದು ಸ್ವತಃ ಕಿಯಾರಾ ಅವರು ಸ್ಪಷ್ಟಪಡಿಸಿದ್ದಾರೆ.
‘ಟಾಕ್ಸಿಕ್’ ಚಿತ್ರದಲ್ಲಿರುವ ತಮ್ಮ ಬೋಲ್ಡ್ ದೃಶ್ಯಗಳನ್ನು ಕತ್ತರಿಸುವಂತೆ ಅಥವಾ ಅವುಗಳ ತೀವ್ರತೆಯನ್ನು ಕಡಿಮೆ ಮಾಡುವಂತೆ ಕಿಯಾರಾ ಅವರು ಚಿತ್ರತಂಡಕ್ಕೆ ಕೇಳಿಕೊಂಡಿದ್ದಾರೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡುತ್ತಿದ್ದವು. ಹಲವು ಮನರಂಜನಾ ಪೋರ್ಟಲ್ಗಳು ಇದನ್ನು ನಿಜವೆಂಬಂತೆ ವರದಿ ಮಾಡಿದ್ದವು.
ಈ ಬಗ್ಗೆ ಮೌನ ಮುರಿದಿರುವ ಕಿಯಾರಾ ಅಡ್ವಾಣಿ ಅವರು, ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಂತಹ ವರದಿಯೊಂದರ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಅದರ ಮೇಲೆ ದೊಡ್ಡ ಅಕ್ಷರಗಳಲ್ಲಿ ‘ಸಂಪೂರ್ಣ ಅಸಂಬದ್ಧ’ ಎಂದು ಬರೆಯುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇದರಿಂದಾಗಿ ಅಭಿಮಾನಿಗಳ ಅನುಮಾನ ಬಗೆಹರಿದಿದೆ.
ಭಾರಿ ನಿರೀಕ್ಷೆ ಮೂಡಿಸಿರುವ ಈ ಚಿತ್ರವು ಸದ್ಯ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಮೊದಲು ಮಾರ್ಚ್ 19ಕ್ಕೆ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ, ಜಾಗತಿಕ ರಾಜಕೀಯ ಉದ್ವಿಗ್ನತೆಗಳ ಕಾರಣದಿಂದ ಜೂನ್ 4ಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ ಏಪ್ರಿಲ್ 29ರಂದು ಚಿತ್ರತಂಡ ಮತ್ತೊಂದು ಅಪ್ಡೇಟ್ ನೀಡಿ, ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇವೆ, ಆದ್ದರಿಂದ ಜೂನ್ 4ರ ಬಿಡುಗಡೆಯನ್ನೂ ಮುಂದೂಡಲಾಗಿದೆ ಎಂದು ತಿಳಿಸಿದೆ. ಸದ್ಯಕ್ಕೆ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಣೆಯಾಗಿಲ್ಲ.
ಇದನ್ನೂ ಓದಿ: ‘ಟಾಕ್ಸಿಕ್’ ಕಥೆ ಏನು ಎಂಬುದನ್ನು ಓಪನ್ ಆಗಿ ಹೇಳಿದ ಯಶ್; ವಿಡಿಯೋ ವೈರಲ್
ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರಂತಹ ದೊಡ್ಡ ತಾರಾಗಣವೇ ಇದೆ. ಟೀಸರ್ ಮೂಲಕವೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿರುವ ಈ ಆ್ಯಕ್ಷನ್-ಥ್ರಿಲ್ಲರ್ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಕಿಯಾರಾ ಅವರ ಈ ಖಡಕ್ ಸ್ಪಷ್ಟನೆಯು ಅಭಿಮಾನಿಗಳಲ್ಲಿನ ಗೊಂದಲವನ್ನು ದೂರ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.