ಟಿ20 ಕ್ರಿಕೆಟ್ನಲ್ಲಿ ಅಫ್ಘಾನಿಸ್ತಾನ್ ಸ್ಪಿನ್ನರ್ ರಶೀದ್ ಖಾನ್ (Rashid Khan) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆಯನ್ನು ಬರೆಯುವ ಮೂಲಕ ಎಂಬುದು ವಿಶೇಷ. ರಶೀದ್ ಖಾನ್ ಬರೆದಿರುವ ಹೊಸ ವಿಶ್ವ ದಾಖಲೆ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ದೆಹಲಿಯಲ್ಲಿ ನಡೆದ ಟಿ20 ವಿಶ್ವಕಪ್ನ 28ನೇ ಪಂದ್ಯದಲ್ಲಿ ಯುಎಇ ವಿರುದ್ಧ ರಶೀದ್ ಖಾನ್ 4 ಓವರ್ಗಳನ್ನು ಎಸೆದಿದ್ದರು. ಈ ವೇಳೆ 24 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಈ ಒಂದು ವಿಕೆಟ್ನೊಂದಿಗೆ ಟಿ20 ಕ್ರಿಕೆಟ್ನಲ್ಲಿ 700 ವಿಕೆಟ್ಗಳ ಸಾಧನೆ ಮಾಡಿದ್ದಾರೆ.
ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಕೂಡ 700 ವಿಕೆಟ್ ಪಡೆದಿರಲಿಲ್ಲ. ಈ ಹಿಂದೆ ಮೂವರು ಬೌಲರ್ಗಳು 600 ಕ್ಕಿಂತ ಹೆಚ್ಚು ವಿಕೆಟ್ ಕಬಳಿಸಿ ಈ ಸಾಧನೆ ಮಾಡಿದ್ದರು. ಇದೀಗ ಆರು ನೂರರ ಪಟ್ಟಿಯಿಂದ ರಶೀದ್ ಖಾನ್ ಏಳು ನೂರರ ಪಟ್ಟಿಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಸಹ ತನ್ನ 27ನೇ ವಯಸ್ಸಿನಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ.
ಟಿ20 ಕ್ರಿಕೆಟ್ನಲ್ಲಿ ಈವರೆಗೆ 513ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ 11794 ಎಸೆತಗಳನ್ನು ಎಸೆದಿದ್ದಾರೆ. ಈ ವೇಳೆ 12961 ರನ್ ನೀಡಿ ಬರೋಬ್ಬರಿ 700 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 700 ವಿಕೆಟ್ ಕಬಳಿಸಿದ ವಿಶ್ವದ ಮೊದಲ ಹಾಗೂ ಏಕೈಕ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಎರಡನೇ ಬೌಲರ್ ದಾಖಲೆ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೊ (631) ಹೆಸರಿನಲ್ಲಿದೆ. ಹಾಗೆಯೇ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ವಿಂಡೀಸ್ನ ಸುನಿಲ್ ನರೈನ್ ಇದ್ದು, ಈವರೆಗೆ 613 ವಿಕೆಟ್ ಕಬಳಿಸಿದ್ದಾರೆ. ಅಂದರೆ ಇಲ್ಲಿ ಸುನಿಲ್ ನರೈನ್ ನಿವೃತ್ತಿಯಂಚಿನಲ್ಲಿರುವ ಕಾರಣ ರಶೀದ್ ಖಾನ್ ಅವರ ಈ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗುವುದಿಲ್ಲ ಎಂದೇ ಹೇಳಬಹುದು.
Published On – 1:53 pm, Mon, 16 February 26
