ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್ (Devdutt Padikkal) ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಉತ್ತರಾಖಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಉತ್ತಮ ಆರಂಭ ಪಡೆದಿರಲಿಲ್ಲ. ಕೆಎಲ್ ರಾಹುಲ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಕ್ರೀಸ್ ಗೆ ಆಗಮಿಸಿದ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಕೆಎಲ್ ರಾಹುಲ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ದೇವದತ್ ಪಡಿಕ್ಕಲ್ 2ನೇ ವಿಕೆಟ್ಗೆ 278 ರನ್ ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ 211 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 11 ಫೋರ್ ಗಳೊಂದಿಗೆ 141 ರನ್ ಬಾರಿಸಿದ್ದ ಕೆಎಲ್ ರಾಹುಲ್ ಔಟಾದರು.
ಮತ್ತೊಂದೆಡೆ ಜವಾಬ್ದಾರಿಯುತ ಇನಿಂಗ್ಸ್ ಮುಂದುವರೆಸಿದ ದೇವದತ್ ಪಡಿಕ್ಕಲ್ 288 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ದ್ವಿಶತಕದ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಗೆ ಮುಂದಾದ ಪಡಿಕ್ಕಲ್ 330 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 29 ಫೋರ್ ಗಳೊಂದಿಗೆ 232 ರನ್ ಬಾರಿಸಿ ಔಟಾದರು.
ದೇವದತ್ ಪಡಿಕ್ಕಲ್ ಅವರ ಈ ಭರ್ಜರಿ ಡಬಲ್ ಸೆಂಚುರಿ ನೆರವಿನೊಂದಿಗೆ ಕರ್ನಾಟಕ ತಂಡ 121 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 501 ರನ್ ಕಲೆಹಾಕಿದೆ. ಇದೀಗ ಸ್ಮರಣ್ ರವಿಚಂದ್ರನ್ ಹಾಗೂ ಕೃತಿಕ್ ಕೃಷ್ಣ ಬ್ಯಾಟಿಂಗ್ ಮುಂದುವರೆಸಿದ್ದು, ಕರ್ನಾಟಕ ಬೃಹತ್ ಮೊತ್ರ ಪೇರಿಸಿ ದ್ವಿತೀಯ ದಿನದಾಟದಲ್ಲೇ ಡಿಕ್ಲೇರ್ ಘೋಷಿಸುವ ಸಾಧ್ಯತೆಯಿದೆ.
