2026ರ ಜೂನ್ 12ರಿಂದ ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯು 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಹಾಲಿ ಚಾಂಪಿಯನ್ ಆಗಿರುವ ನ್ಯೂಝಿಲೆಂಡ್ ತಂಡವನ್ನು ಈ ಬಾರಿ ಸ್ಟಾರ್ ಆಲ್-ರೌಂಡರ್ ಅಮೆಲಿಯಾ ಕೆರ್ (Amelia Kerr) ಮುನ್ನಡೆಸಲಿದ್ದಾರೆ.
ಇನ್ನು ತಂಡದಲ್ಲಿ ಅನುಭವಿ ಆಟಗಾರ್ತಿಯರಾದ ಸೂಝಿ ಬೆಟ್ಸ್, ಸೋಫಿ ಡಿವೈನ್, ಲಿಯಾ ತಹುಹು ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ನೆನ್ಸಿ ಪಟೇಲ್ ಮತ್ತು ಇಸಿ ಶಾರ್ಪ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಟಿ20 ವಿಶ್ವಕಪ್ಗೆ ನ್ಯೂಝಿಲೆಂಡ್ ತಂಡ ಈ ಕೆಳಗಿನಂತಿದೆ…
- ಅಮೆಲಿಯಾ ಕೆರ್ (ನಾಯಕಿ)
- ಸೂಝಿ ಬೇಟ್ಸ್
- ಸೋಫಿ ಡಿವೈನ್
- ಲಿಯಾ ತಹುಹು
- ಮ್ಯಾಡಿ ಗ್ರೀನ್
- ಬ್ರೂಕ್ ಹಾಲಿಡೇ
- ಇಸಿ ಗೇಝ್ (ವಿಕೆಟ್ ಕೀಪರ್)
- ಪಾಲಿ ಇಂಗ್ಲಿಸ್ (ವಿಕೆಟ್ ಕೀಪರ್)
- ಜೆಸ್ ಕೆರ್
- ರೋಸ್ಮೇರಿ ಮೇರ್
- ಜಾರ್ಜಿಯಾ ಪ್ಲಿಮ್ಮರ್
- ಫ್ಲೋರಾ ಡೆವೊನ್‌ಶೈರ್
- ಬ್ರೀ ಇಲ್ಲಿಂಗ್
- ನೆನ್ಸಿ ಪಟೇಲ್
- ಇಸಿ ಶಾರ್ಪ್
ದಿಗ್ಗಜರ ವಿದಾಯ:
ಈ ಬಾರಿಯ ಟಿ20 ವಿಶ್ವಕಪ್ನೊಂದಿಗೆ ನ್ಯೂಝಿಲೆಂಡ್ನ ದಿಗ್ಗಜ ಆಟಗಾರ್ತಿಯರಾದ ಸೋಫಿ ಡಿವೈನ್, ಸೂಝಿ ಬೇಟ್ಸ್ ಮತ್ತು ಲಿಯಾ ತಹುಹು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಲಿದ್ದಾರೆ. ಅಂದರೆ ಈ ಮೂವರು ಅನುಭವಿ ಆಟಗಾರ್ತಿಯರಿಗೆ ಇದು ಕೊನೆಯ ವಿಶ್ವಕಪ್. ಈ ವರ್ಲ್ಡ್ಕಪ್ನೊಂದಿಗೆ ಕಿವೀಸ್ ಪಡೆಯ ತ್ರಿಮೂರ್ತಿಗಳು ಕೆರಿಯರ್ ಅಂತ್ಯಗೊಳಿಸಲಿದ್ದಾರೆ.
ಹೊಸ ಪ್ರತಿಭೆಗಳು:
2024ರಲ್ಲಿ ವಿಶ್ವಕಪ್ ಗೆದ್ದಿದ್ದ ನ್ಯೂಝಿಲೆಂಡ್ ತಂಡದ 10 ಆಟಗಾರ್ತಿಯರನ್ನು ಈ ಬಾರಿಯೂ ಉಳಿಸಿಕೊಳ್ಳಲಾಗಿದೆ. ಇವರ ಜೊತೆ ಇಬ್ಬರು ಯುವ ಪ್ರತಿಭೆಗಳು ಕೂಡ ಆಯ್ಕೆಯಾಗಿದ್ದಾರೆ. ಅದರಂತೆ ನೆನ್ಸಿ ಪಟೇಲ್ ಮತ್ತು ಇಸಿ ಶಾರ್ಪ್ ಚೊಚ್ಚಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಇನ್ನು ತಂಡದ ಪ್ರಮುಖ ಸ್ಪಿನ್ನರ್ ಎಡೆನ್ ಕಾರ್ಸನ್ ಅವರು ಮೊಣಕೈ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ವಿಶ್ವಕಪ್ನಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಕಣಕ್ಕಿಳಿಯದಿರಲು ಇದುವೇ ಅಸಲಿ ಕಾರಣ!
ಗ್ರೂಪ್-ಬಿ ನಲ್ಲಿ ಕಿವೀಸ್ ಪಡೆ:
ನ್ಯೂಝಿಲೆಂಡ್ ತಂಡವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳೊಂದಿಗೆ ಸೆಣಸಲಿದೆ. ಜೂನ್ 13 ರಂದು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದೊಂದಿಗೆ ನ್ಯೂಝಿಲೆಂಡ್ ತನ್ನ ಅಭಿಯಾನವನ್ನು ಆರಂಭಿಸಲಿದೆ.
