ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಸ್ಥಳದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್Image Credit source: tv9
ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಅಮಾಯಕರು ಬಲಿಯಾದ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತವು (Lokayukta) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಘಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಅವರು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ (Suo Motu Case) ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಪರಿಶೀಲನೆ ಬಳಿಕ ಲೋಕಾಯುಕ್ತರು ಹೇಳಿದ್ದೇನು?
ಸ್ಥಳ ಪರಿಶೀಲನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನ್ಯಾಯಮೂರ್ತಿ ಬಿಎಸ್ ಪಾಟೀಲ್, ‘ಕಾಂಪೌಂಡ್‌ನ ಅಡಿಪಾಯ (Foundation) ಅತ್ಯಂತ ದುರ್ಬಲವಾಗಿದ್ದೇ ಈ ದುರಂತಕ್ಕೆ ಪ್ರಮುಖ ಕಾರಣ. ನಗರದಲ್ಲಿ ಪ್ರತಿ ವರ್ಷ ಮಳೆ ಬರುತ್ತದೆ ಎಂಬುದು ಗೊತ್ತಿದ್ದರೂ, ಇಂತಹ ದುರ್ಬಲ ಗೋಡೆಗಳ ಪಕ್ಕದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡಿರುವುದು ಅಧಿಕಾರಿಗಳ ಬೇಜವಾಬ್ದಾರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ಗಂಟೆ ಮಳೆ ಬಂದಿದ್ದಕ್ಕೇ ಗೋಡೆ ಕುಸಿಯುತ್ತಿದೆ ಎಂದರೆ ಕಾಮಗಾರಿಯ ಗುಣಮಟ್ಟ ಎಷ್ಟಿರಬಹುದು ಎಂದು ಅವರು ಪ್ರಶ್ನಿಸಿದ್ದಾರೆ.
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತರು
ಉನ್ನತ ಅಧಿಕಾರಿಗಳ ವಿರುದ್ಧ ತೂಗುಗತ್ತಿ
ಈ ಪ್ರಕರಣದಲ್ಲಿ ಕೇವಲ ಕೆಳಹಂತದ ಸಿಬ್ಬಂದಿಯನ್ನಷ್ಟೇ ಅಲ್ಲದೆ, ಉನ್ನತ ಮಟ್ಟದ ಅಧಿಕಾರಿಗಳನ್ನೂ ಹೊಣೆಗಾರರನ್ನಾಗಿ ಮಾಡಲು ಲೋಕಾಯುಕ್ತರು ಮುಂದಾಗಿದ್ದಾರೆ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
- ಲೋಕಾಯುಕ್ತದಿಂದ ಸ್ವಯಂಪ್ರೇರಿತ ಪ್ರಕರಣ: ಯಾರೆಲ್ಲ ಆರೋಪಿಗಳು?
- ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್
- ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್
- ವೈದ್ಯಕೀಯ ಶಿಕ್ಷಣ ಇಲಾಖೆ ಆಯುಕ್ತ, ಅಪರ ಕಾರ್ಯದರ್ಶಿ
- 5 ಪಾಲಿಕೆಗಳ ವಲಯ ಆಯುಕ್ತರು
ಇವರೆಲ್ಲರನ್ನೂ ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ. ಬೌರಿಂಗ್ ಆಸ್ಪತ್ರೆ ಆವರಣದ ಇನ್ಚಾರ್ಜ್ ಹರೀಶ್ ಕುಮಾರ್ನನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಲು ಲೋಕಾಯುಕ್ತರು ಸೂಚಿಸಿದ್ದಾರೆ.
ಭಾರಿ ಗಾಳಿ, ಮಳೆಗೆ ಸಂಭವಿಸಿತು ಘೋರ ದುರಂತ
ಏಪ್ರಿಲ್ 29ರ ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಭೀಕರ ಆಲಿಕಲ್ಲು ಮಳೆ ಹಾಗೂ ಗಾಳಿ-ಮಳೆಯಿಂದ ರಕ್ಷಣೆ ಪಡೆಯಲು ಪಾದಚಾರಿಗಳು ಮತ್ತು ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಬಳಿ ನಿಂತಿದ್ದರು. ಮಳೆಯ ತೀವ್ರತೆಗೆ ಸುಮಾರು 100 ಅಡಿ ಉದ್ದದ ಗೋಡೆ ಏಕಾಏಕಿ ಕುಸಿದುಬಿದ್ದಿತ್ತು. ಈ ಅವಶೇಷಗಳಡಿ ಸಿಲುಕಿ ಇಬ್ಬರು ಮಹಿಳೆಯರು, ಪುಟ್ಟ ಮಗು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 5 ಲಕ್ಷ ರೂ. ಹಾಗೂ ಪ್ರಧಾನಿ ಕಾರ್ಯಾಲಯ2 ಲಕ್ಷ ರೂ. ಪರಿಹಾರ ಘೋಷಿಸಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 1:04 pm, Thu, 30 April 26
