ಟ್ಯಾಟೂ ಪ್ರಿಯರಿಗೆ ಶಾಕ್: ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ – Kannada News | Dangerous Tattoos? India Proposes Strict Laws for Parlors and Inks to Protect Health

ಬೆಂಗಳೂರು, ಆ.12: ಯುವಜನತೆಯಲ್ಲಿ ಟ್ಯಾಟೂ (Tattoo) ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೊಂದೆಡೆ ಅಸುರಕ್ಷಿತ ಹಾಗೂ ರಾಸಾಯನಿಕಯುಕ್ತ ಟ್ಯಾಟೂಗಳಿಂದ ಗಂಭೀರ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ. ಹೀಗಾಗಿ ರಾಜ್ಯದಲ್ಲಿ ಮತ್ತು ದೇಶಾದ್ಯಂತ ಟ್ಯಾಟೂ ಪಾರ್ಲರ್‌ಗಳು ಹಾಗೂ ಕೆಮಿಕಲ್‌ ಬಳಕೆಯ ಮೇಲೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಹಾಗೂ ಡ್ರಗ್ ಕಂಟ್ರೋಲ್ ಬೋರ್ಡ್ ಹೊಸ ಕಾನೂನು ಮತ್ತು ಮಾರ್ಗಸೂಚಿ ತರಲು ಮುಂದಾಗಿದೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಅನುಸರಿಸುವ ಅಶುಚಿತ್ವ ಹಾಗೂ ಅಪಾಯಕಾರಿ ಕೆಮಿಕಲ್‌ಗಳ ಬಳಕೆಯಿಂದಾಗಿ ಹಲವು ಮಾರಣಾಂತಿಕ ರೋಗಗಳು ಹರಡುತ್ತಿರುವುದು ತಜ್ಞರ ಪರಿಶೀಲನೆಯಲ್ಲಿ ತಿಳಿದುಬಂದಿದೆ. ಒಂದೇ ಸೂಜಿ ಅಥವಾ ಸರಿಪಡಿಸದ ಉಪಕರಣಗಳ ಬಳಕೆಯಿಂದ ಎಚ್‌ಐವಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ ಹಾಗೂ ಸ್ಟ್ಯಾಫಿಲೋಕೊಕಸ್ ಔರೆಸ್‌ನಂತಹ ಬ್ಯಾಕ್ಟೀರಿಯಾ ಸೋಂಕುಗಳು ಹರಡುತ್ತಿವೆ. ಟ್ಯಾಟೂ ಶಾಯಿಯಲ್ಲಿರುವ ಕನ್ಸ್ಟ್ರಕ್ಷನ್ ಕೆಮಿಕಲ್ಸ್ ಹಾಗೂ ಭಾರಲೋಹಗಳಿಂದ ಚರ್ಮದ ಕ್ಯಾನ್ಸರ್, ಅಲರ್ಜಿ ಹಾಗೂ ವಿವಿಧ ಚರ್ಮರೋಗಗಳು ಕಾಣಿಸಿಕೊಳ್ಳುತ್ತಿವೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ಔಷಧ ನಿಯಂತ್ರಣ ಇಲಾಖೆಯ ಆಯುಕ್ತ ಶ್ರೀನಿವಾಸ್ ಅವರು ನೀಡಿರುವ ಹೇಳಿಕೆ ಪ್ರಕಾರ “ನಾವು ಮಾರುಕಟ್ಟೆಯಲ್ಲಿ ಲಭ್ಯವಿರುವ ಟ್ಯಾಟೂ ಇಂಕ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅತಿಯಾದ ಕೆಮಿಕಲ್ಸ್ ಹಾಗೂ ಸೀಸ, ಕ್ರೋಮಿಯಂನಂತಹ ಅಪಾಯಕಾರಿ ಮೆಟಲ್ ಅಂಶಗಳು ಪತ್ತೆಯಾಗಿವೆ. ದೇಶದಲ್ಲಿ ಟ್ಯಾಟೂಗೆ ಯಾವುದೇ ನಿರ್ದಿಷ್ಟ ನಿಯಂತ್ರಣ ಕಾನೂನುಗಳಿರಲಿಲ್ಲ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಟ್ಯಾಟೂ ತಯಾರಕರಿಗೆ ಹಾಗೂ ಹಾಕುವವರಿಗೂ ಸೂಕ್ತ ಮಾನದಂಡಗಳು ಅತಿ ಅಗತ್ಯವಿದೆ.” ಎಂದು ಹೇಳಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *