ಹಿಮಾಚಲದಲ್ಲಿ ಪೆಟ್ರೋಲ್, ಡೀಸಲ್ ಮೇಲೆ ವಿಧವೆ ಅನಾಥರ ಕಲ್ಯಾಣ ಸೆಸ್; ವ್ಯಾಟ್, ಸೆಸ್​ಗಳಿಂದಾಗಿ ಇಂಧನ ದುಬಾರಿ – Kannada News | Himachal govt imposes Widow Orphan cess on Petrol and Diesel, as the state’s economy in crisis

ಶಿಮ್ಲಾ, ಆಗಸ್ಟ್ 12: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಅಲ್ಲಿನ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೊಸದಾಗಿ ‘ವಿಧವೆ ಮತ್ತು ಅನಾಥರ ಕಲ್ಯಾಣ ಸೆಸ್’ ಅನ್ನು ವಿಧಿಸಿದೆ. ಇಂದಿನಿಂದಲೇ (ಆಗಸ್ಟ್ 12) ಜಾರಿಗೆ ಬಂದಿರುವ ಈ ನೂತನ ಸೆಸ್‌ನಿಂದಾಗಿ ಈ ರಾಜ್ಯದಲ್ಲಿ ಇಂಧನ ದರ ಪ್ರತಿ ಲೀಟರ್‌ಗೆ 60 ಪೈಸೆ ಏರಿಕೆಯಾಗಿದೆ. ಈಗಾಗಲೇ ವ್ಯಾಟ್ ಏರಿಕೆಯಿಂದ 14 ರೂಗೂ ಅಧಿಕ ದರ ಹೆಚ್ಚಳ ಕಂಡಿರುವ ಡೀಸಲ್ ಬಳಕೆದಾರರಿಗೆ ಇನ್ನೊಂದು ಆಘಾತ ಸಿಕ್ಕಂತಾಗಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದ ವಿಧವೆಯರು ಮತ್ತು ಅನಾಥ ಮಕ್ಕಳ ಕಲ್ಯಾಣ ಯೋಜನೆಗಳಿಗೆ ನಿರಂತರ ಧನಸಹಾಯ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಮೌಲ್ಯವರ್ಧಿತ ತೆರಿಗೆ (VAT) ಕಾಯ್ದೆಯಡಿ ರಾಜ್ಯ ಅಬಕಾರಿ ಮತ್ತು ತೆರಿಗೆ ಇಲಾಖೆ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಪ್ರಸ್ತುತ 60 ಪೈಸೆ ಸೆಸ್ ವಿಧಿಸಲಾಗಿದ್ದರೂ, ಕಾನೂನಿನ ಪ್ರಕಾರ ಲೀಟರ್‌ಗೆ ₹5 ರವರೆಗೆ ಸೆಸ್ ಹೆಚ್ಚಿಸಲು ಸರ್ಕಾರಕ್ಕೆ ಅಧಿಕಾರವಿದೆ.

ಡೀಸಲ್ ದರ ಗಮನಾರ್ಹ ಏರಿಕೆ: ಇತ್ತೀಚೆಗಷ್ಟೇ ಹಿಮಾಚಲದಲ್ಲಿ ಡೀಸೆಲ್ ಮೇಲಿನ ವ್ಯಾಟ್ ಅನ್ನು ಎರಡು ಹಂತಗಳಲ್ಲಿ ಒಟ್ಟು ₹6 ಹೆಚ್ಚಿಸಲಾಗಿತ್ತು. ಇದೀಗ ಹೊಸ ಸೆಸ್ ಸೇರಿ ಡೀಸೆಲ್ ದರ ಗಮನಾರ್ಹವಾಗಿ ಏರಿಕೆಯಾಗಿದೆ. ವ್ಯಾಟ್ ಮತ್ತು ಸೆಸ್ ಸೇರಿಸಿದರೆ ಹಿಮಾಚಲದಲ್ಲಿ ಡೀಸಲ್ ಬೆಲೆ 15 ರೂಗಳಷ್ಟು ಹೆಚ್ಚಳ ಆದಂತಾಗುತ್ತದೆ.

ಇದನ್ನೂ ಓದಿ: ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ?

ಈ ಸೆಸ್ ಅನಗತ್ಯ ಎಂದು ಇಂಧನ ಮಾರಾಟಗಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ಇಂಧನ ದರ ಹೆಚ್ಚಳದಿಂದಾಗಿ ಗಡಿ ಪ್ರದೇಶದ ಜನರು ನೆರೆಯ ರಾಜ್ಯಗಳಿಗೆ ತೆರಳಿ ಪೆಟ್ರೋಲ್-ಡೀಸೆಲ್ ಖರೀದಿಸುವ ಸಾಧ್ಯತೆಯಿದ್ದು, ಇದರಿಂದ ರಾಜ್ಯಕ್ಕೆ ಬರುವ ಮೂಲ ಆದಾಯವೇ ಕಡಿಮೆಯಾಗಬಹುದು ಎಂದು ಎಚ್ಚರಿಸಿದ್ದಾರೆ.

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿಮಾಚಲಪ್ರದೇಶ

  • ಬೃಹತ್ ಸಾಲ: ರಾಜ್ಯದ ಒಟ್ಟು ಸಾಲ ₹1.04 ಲಕ್ಷ ಕೋಟಿ ದಾಟಿದೆ.
  • ಸಾಲ ಮರುಪಾವತಿ ಕೊರತೆ: 2026-27 ಸಾಲಿನಲ್ಲಿ ₹13,000 ಕೋಟಿ ಸಾಲ ಮರುಪಾವತಿ ಮಾಡಬೇಕಿದ್ದು, ಸರ್ಕಾರ ಕೇವಲ ₹10,000 ಕೋಟಿ ಸಾಲ ಎತ್ತುವಳಿ ಮಾಡಲು ಯೋಜಿಸಿದೆ. ಅಂದರೆ, ಸಾಲ ಮರುಪಾವತಿಯಲ್ಲೇ ₹3,000 ಕೋಟಿ ಕೊರತೆ ಎದುರಾಗಿದೆ.
  • ಕೇಂದ್ರದ ಅನುದಾನ ಕಡಿತ ಭೀತಿ: 16ನೇ ಹಣಕಾಸು ಆಯೋಗವು ಕಂದಾಯ ಕೊರತೆ ಅನುದಾನಗಳನ್ನು (Revenue Deficit Grants) ಹಂತ ಹಂತವಾಗಿ ಬಂದ್ ಮಾಡಲು ಶಿಫಾರಸು ಮಾಡಿದ್ದು, ಮುಂದಿನ 5 ವರ್ಷಗಳಲ್ಲಿ ರಾಜ್ಯವು ₹35,000 ಕೋಟಿಗೂ ಹೆಚ್ಚು ನಷ್ಟ ಅನುಭವಿಸುವ ಭೀತಿಯಲ್ಲಿದೆ.

ಇದನ್ನೂ ಓದಿ: ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್​ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು…

ಯಾವುದಕ್ಕೆ ಬಳಕೆ ಈ ವಿಧವೆ, ಅನಾಥರ ಸೆಸ್?

ಆರ್ಥಿಕ ಸಂಕಷ್ಟದಲ್ಲೂ ಹಿಮಾಚಲಪ್ರದೇಶ ಸರ್ಕಾರವು ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ನಡೆಸುತ್ತದೆ. ಅನಾಥರು ಮತ್ತು ವಿಧವೆಯರ ಕಲ್ಯಾಣ ಕಾರ್ಯಕ್ರಮಗಳೂ ಇವೆ. ಇವುಗಳಿಗೆ ಫಂಡಿಂಗ್ ಹೊಂದಿಸಲು ಈ ಸೆಸ್ ಬಳಸಲಾಗುವುದು ಎನ್ನಲಾಗಿದೆ. ಆದರೆ, ಆ ರಾಜ್ಯದಲ್ಲಿ ವಿಧವೆಯರು ಮತ್ತು ಅನಾಥ ಮಕ್ಕಳು ಎಷ್ಟು ಸಂಖ್ಯೆಯಲ್ಲಿದ್ದಾರೆ? ಅವರಿಗೆ ಸರ್ಕಾರ ಎಷ್ಟು ವ್ಯಯಿಸುತ್ತದೆ ಎನ್ನುವ ಪ್ರಶ್ನೆಯನ್ನು ಪೆಟ್ರೋಲಿಯಂ ಡೀಲರ್​ಗಳ ಸಂಸ್ಥೆ ಎತ್ತಿದೆ.

ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿಗೆ ಸೆಸ್, ಹಿಮಾಚಲದಲ್ಲಿ ಮಾತ್ರ ಭಿನ್ನ

ಭಾರತದ ವಿವಿಧ ರಾಜ್ಯಗಳೂ ಕೂಡ ಪೆಟ್ರೋಲ್ ಮತ್ತು ಡೀಸಲ್​ಗೆ ಸೆಸ್ ಹಾಕುತ್ತವೆ. ಆದರೆ, ಅವೆಲ್ಲವೂ ಬಹುತೇಕ ಅಭಿವೃದ್ಧಿ ಯೋಜನೆಗಳಿಗೆ ಫಂಡಿಂಗ್ ಮಾಡುವ ಹೆಸರಲ್ಲಿ ವಿಧಿಸುವ ಸೆಸ್. ಆದರೆ, ಹಿಮಾಚಲಪ್ರದೇಶ ಮಾತ್ರವೇ ವಿಧವೆ ಮತ್ತು ಅನಾಥ ಮಕ್ಕಳ ಸೆಸ್ ವಿಧಿಸುತ್ತಿರುವ ಏಕೈಕ ರಾಜ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *