ನವದೆಹಲಿ, ಜುಲೈ 8: ಭಾರತದ ಷೇರು ಮಾರುಕಟ್ಟೆಯ (Stock Market) ಇವತ್ತು ಶೇ. 2ರಷ್ಟು ಕುಸಿದಿದೆ. ಸೆನ್ಸೆಕ್ಸ್, ನಿಫ್ಟಿ ಸೇರಿದಂತೆ ಹೆಚ್ಚಿನ ಸೂಚ್ಯಂಕಗಳು ಬಹಳ ಸ್ಪಷ್ಟವಾಗಿ ಕೆಂಪು ಬಣ್ಣಕ್ಕೆ ತಿರುಗಿವೆ. ಸೆನ್ಸೆಕ್ಸ್ 1,677 ಅಂಕಗಳ ನಷ್ಟ ಮಾಡಿಕೊಂಡಿದೆ. ನಿಫ್ಟಿ 515 ಅಂಕಗಳನ್ನು ಕಳೆದುಕೊಂಡಿದೆ. ಒಟ್ಟಾರೆ ಹೂಡಿಕೆದಾರರು ಬುಧವಾರ ಒಂದೇ ದಿನ 10 ಲಕ್ಷ ಕೋಟಿ ರೂನಷ್ಟು ನಷ್ಟ ಮಾಡಿಕೊಂಡಿದ್ದಾರೆ. ಸೆನ್ಸೆಕ್ಸ್ ಒಂದು ಹಂತದಲ್ಲಿ ಕಳೆದುಕೊಂಡ ಅಂಕಗಳು 1,810 ದಾಟಿತ್ತು. ನಿಫ್ಟಿ 551 ಅಂಕಗಳವರೆಗೆ ಕುಸಿದಿತ್ತು. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಕುಸಿತ ಕಂಡ ದಿನಗಳಲ್ಲಿ ಇವತ್ತಿನದ್ದೂ ಸೇರಿದೆ.
ಮುಗಿದಿಲ್ಲ ಇರಾನ್-ಅಮೆರಿಕ ಯುದ್ಧಭೀತಿ
ಅಮೆರಿಕ ಮತ್ತು ಇರಾನ್ ಮಧ್ಯೆ ಸಂಧಾನ ಯಶಸ್ವಿಯಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಪುನಃಸ್ಥಾಪನೆಯಾಗಬಹುದು ಎಂದು ಎಲ್ಲರೂ ನಿರೀಕ್ಷಿಸುತ್ತಿರುವಾಗಲೇ ಯುದ್ಧದ ಕಾರ್ಮೋಡ ದಟ್ಟವಾಗಿದೆ. ಇರಾನ್ ಮೇಲೆ ಟ್ರಂಪ್ ದಾಳಿ ಘೋಷಿಸಿದ್ದಾರೆ. ಹಾಗೆಯೆ ವ್ಯಾಪಕ ದಾಳಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದಾಳಿ ಮಾಡುತ್ತಿದೆ. ಇರಾನ್ ಜೊತೆ ಮತ್ತೆಂದೂ ಮಾತುಕತೆ ನಡೆಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಉತ್ಸಾಹ ಕರಗಿ ಹೋಗಲು ಕಾರಣವಾಗಿದೆ.
ಇದನ್ನೂ ಓದಿ: ಭಾರತ್ ಟ್ಯಾಕ್ಸಿ ಮಾದರಿಯಲ್ಲಿ ಸಹಕಾರಿ ಸಂಸ್ಥೆಗಳಿಂದಲೂ ಇನ್ಷೂರೆನ್ಸ್ ಸೇವೆ; ಸರ್ಕಾರ ಯೋಚನೆ
ಕಚ್ಚಾ ತೈಲ ಬೆಲೆಗಳ ಏರಿಕೆ
ಇರಾನ್ ಯುದ್ಧ ಪುನಾರಂಭಗೊಂಡ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರತೊಡಗಿವೆ. ಬ್ರೆಂಟ್ ಕ್ರೂಡ್ ಶೇ. 5.66ರಷ್ಟು ಏರಿದೆ. ತೈಲ ಬೆಲೆ ಒಂದು ಬ್ಯಾಲ್ಗೆ 78 ಡಾಲರ್ ಗಡಿ ದಾಟಿದೆ. ಹೆಚ್ಚಿನ ತೈಲ ಬೆಲೆ ಎಂದರೆ ಹಣದುಬ್ಬರದ ಮೇಲೆ ಹೆಚ್ಚಿನ ಒತ್ತಡವಾಗುತ್ತದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಕುಸಿತ ಆಗುತ್ತಿರುವುದು ಎದ್ದು ಕಾಣುತ್ತಿದೆ.
ರುಪಾಯಿ ಮೌಲ್ಯ ಕುಸಿತದ ಪ್ರಭಾವ ಷೇರು ಮಾರುಕಟ್ಟೆ ಮೇಲೆ
ಭಾರತದ ರುಪಾಯಿ ಮೌಲ್ಯ ಬುಧವಾರ 20 ಪೈಸೆಯಷ್ಟು ಕುಸಿದಿದೆ. ತೈಲ ಬೆಲೆ ಏರಿದ್ದರ ಪೆಟ್ಟು ಇದು. ಇದೂ ಕೂಡ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಹಾಕಿದೆ.
ಇದನ್ನೂ ಓದಿ: ಎಸ್ಸೆಮ್ಮೆಸ್ ಅಲರ್ಟ್ಗಳಿಗೆ ಗ್ರಾಹಕರಿಂದ ಹಣ ಪಡೆಯುವಂತಿಲ್ಲ; ಆರ್ಬಿಐ ನಿಯಮದಿಂದ ಬ್ಯಾಂಕುಗಳಿಗೆ 300 ಕೋಟಿ ರೂ ಆದಾಯನಷ್ಟ?
ಇದೇ ವೇಳೆ, ಭಾರತ ಮಾತ್ರವಲ್ಲ, ಹೆಚ್ಚಿನ ಜಾಗತಿಕ ಷೇರು ಮಾರುಕಟ್ಟೆಗಳೂ ಕೂಡ ಹಿನ್ನಡೆ ಅನುಭವಿಸುತ್ತಿವೆ. ಸೌತ್ ಕೊರಿಯಾ, ಜಪಾನ್, ಅಮೆರಿಕ, ಚೀನಾ ಮೊದಲಾದ ದೇಶಗಳ ಮಾರುಕಟ್ಟೆಗಳು ಹಿನ್ನಡೆ ಕಾಣುತ್ತಿವೆ. ಕೊರಿಯಾದ ಕೋಸ್ಪಿಯಂತೂ ಶೇ. 5ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಹ್ಯಾಂಗ್ ಸೆಂಗ್ ಮೊದಲಾದ ಮೂರ್ನಾಲ್ಕು ಮಾರುಕಟ್ಟೆಗಳು ಮಾತ್ರ ಹಸಿರುಬಣ್ಣದಲ್ಲಿವೆ. ಹೆಚ್ಚಿನ ಮಾರುಕಟ್ಟೆಗಳು ಹಿನ್ನಡೆ ಅನುಭವಿಸುತ್ತಿರುವುದರ ಪ್ರಭಾವ ಭಾರತದ ಮಾರುಕಟ್ಟೆ ಮೇಲೂ ಆಗುತ್ತಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
