ವಾಷಿಂಗ್ಟನ್, ಫೆಬ್ರವರಿ 21: ಭಾರತ ಸೇರದಂತೆ ಅನೇಕ ದೇಶಗಳ ಉತ್ಪನ್ನಗಳ ಮೇಲೆ ಮನಬಂದಂತೆ ಸುಂಕ ಹೆಚ್ಚಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ (Donald Trump) ಅಲ್ಲಿನ ಸುಪ್ರೀಂ ಕೋರ್ಟ್ (US Supreme Court) ಕಡಿವಾಣ ಹಾಕಿದೆ. ಪರಿಣಾಮವಾಗಿ ಟ್ರಂಪ್ ಸುಂಕ ನೀತಿಗೆ ದೊಡ್ಡ ಹಿನ್ನಡೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಭಾರತವೂ ಸೇರಿದಂತೆ ಅಮೆರಿಕದೊಂದಿಗೆ ಸುಂಕ ಒಪ್ಪಂದ ಮಾಡಿಕೊಂಡಿರುವ ದೇಶಗಳು ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ 10 ರ ಸಾಮಾನ್ಯ ಸುಂಕವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಈ ತೀರ್ಪು ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಶೇ 10 ರ ಸಾಮಾನ್ಯ ಸುಂಕ ಜಾರಿ
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಆಡಳಿತ ಹೊಸ ಆದೇಶ ಹೊರಡಿಸಿದ್ದು, ಅಮೆರಿಕಕ್ಕೆ ಆಮದು ಆಗುವ ವಸ್ತುಗಳ ಮೇಲೆ ಶೇ 10 ರ ಸುಂಕ ವಿಧಿಸಿದೆ. ಈ ಹೊಸ ಸುಂಕ ಫೆಬ್ರವರಿ 24 ರಿಂದ 150 ದಿನಗಳ ಕಾಲ ಜಾರಿಯಲ್ಲಿರಲಿದೆ ಎಂದು ಶ್ವೇತ ಭವನ ಮಾಹಿತಿ ನೀಡಿದೆ. ಆದರೆ ಔಷಧಿ ಸೇರಿದಂತೆ ಕೆಲವು ವಲಯಗಳಿಗೆ ವಿನಾಯಿತಿ ಮುಂದುವರಿಯಲಿದೆ.
ಭಾರತಕ್ಕೆ ಆದ ಲಾಭವೇನು?
ಇತ್ತೀಚೆಗೆ ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ಒಪ್ಪಂದ ಘೋಷಿಸಿವೆ. ಅದರ ಪರಿಣಾಮವಾಗಿ, ಈ ಮೊದಲು ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತಕ್ಕೆ ವಿಧಿಸಿದ್ದ ಶೇ 25 ಸುಂಕವನ್ನು ಅಮೆರಿಕ ರದ್ದುಪಡಿಸಿತ್ತು. ಜೊತೆಗೆ, ಪರಸ್ಪರ ಸುಂಕವನ್ನು ಶೇ 25 ರಿಂದ 18 ಕ್ಕೆ ಇಳಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಹಿಂದಿನ ಒಪ್ಪಂದಗಳಲ್ಲಿ ಒಪ್ಪಿಕೊಂಡಿದ್ದ ಹೆಚ್ಚುವರಿ ಸುಂಕಗಳ ಬದಲಿಗೆ ಈಗ ಶೇ 10 ರ ಸಾಮಾನ್ಯ ಸುಂಕ ಅನ್ವಯವಾಗಲಿದೆ ಎಂದು ಅಮೆರಿಕ ಹೇಳಿದೆ. ಇದರಿಂದ ಭಾರತಕ್ಕೆ ತಾತ್ಕಾಲಿಕವಾಗಿ ಸ್ವಲ್ಪ ವಿನಾಯಿತಿ ದೊರೆಯುವ ಸಾಧ್ಯತೆ ಇದೆ ಎಂದು ವಾಣಿಜ್ಯ ವಲಯ ವಿಶ್ಲೇಷಿಸಿದೆ.
ಏತನ್ಮಧ್ಯೆ, ಶ್ವೇತ ಭವನದ ಒಬ್ಬರು ಹಿರಿಯ ಅಧಿಕಾರಿಯ ಪ್ರಕಾರ, ಮುಂದಿನ ದಿನಗಳಲ್ಲಿ ಪೂರ್ವ ನಿರ್ಧರಿತ ಅಥವಾ ಸೂಕ್ತವಾದ ಸುಂಕ ದರಗಳನ್ನು ಜಾರಿಗೆ ತರಲು ಆಡಳಿತ ಪ್ರಯತ್ನಿಸಲಿದೆ ಎನ್ನಲಾಗಿದೆ.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಮಾತನಾಡಿದ ಟ್ರಂಪ್, ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದೊಂದಿಗೆ ನಮ್ಮ ಸಂಬಂಧ ಉತ್ತಮವಾಗಿದೆ. ನಾವು ವ್ಯಾಪಾರ ಮುಂದುವರಿಸುತ್ತಿದ್ದೇವೆ. ಯಾವುದೂ ಬದಲಾಗಿಲ್ಲ ಎಂದು ಅವರು ಹೇಳಿದ್ದಾರೆ.
ಈ ಬೆಳವಣಿಗೆ ಭಾರತಕ್ಕೆ ಎರಡು ರೀತಿಯ ಪರಿಣಾಮ ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ಕಡೆ ಶೇ 25 ರ ಸುಂಕದ ಭಾರದಿಂದ ಮುಕ್ತಿ ಸಿಕ್ಕಿರುವುದು ಅನುಕೂಲಕರ. ಮತ್ತೊಂದೆಡೆ, ಶೇ 10 ಸಾಮಾನ್ಯ ಸುಂಕ ಮುಂದುವರಿದರೆ ರಫ್ತುಗಾರರಿಗೆ ಕೆಲವು ಒತ್ತಡಗಳು ಎದುರಾಗಬಹುದು. ವಿಶೇಷವಾಗಿ ಉಕ್ಕು, ಅಲ್ಯೂಮಿನಿಯಂ ಮತ್ತು ಇತರೆ ಕೈಗಾರಿಕಾ ವಲಯಗಳು ಪರಿಸ್ಥಿತಿಯ ಮೇಲೆ ವಿಶೇಷ ನಿಗಾ ವಹಿಸಬೇಕಾಗಬಹುದು ಎನ್ನಲಾಗಿದೆ.
ಇದನ್ನೂ ಓದಿ: ಮನಬಂದಂತೆ ಸುಂಕ ಹೇರಿದ ಟ್ರಂಪ್ಗೆ ಶಾಕ್ ಕೊಟ್ಟ ಅಮೆರಿಕದ ಸುಪ್ರೀಂ ಕೋರ್ಟ್
ಒಟ್ಟಿನಲ್ಲಿ, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಆಡಳಿತದ ಹೊಸ ಸುಂಕ ನೀತಿ ಜಾರಿಯಾಗಿದ್ದರೂ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ತಕ್ಷಣದ ಅಸ್ಥಿರತೆ ಕಾಣಿಸುತ್ತಿಲ್ಲ. ಇದು ಧನಾತ್ಮಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವಣ ಮಾತುಕತೆ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
