ಭುವನಾ, ಡಿಸಿಎಂ ಡಾ.ಜಿ.ಪರಮೇಶ್ವರ್Image Credit source: tv9 kannada
ತುಮಕೂರು, ಜುಲೈ 05: SIR ಕರ್ತವ್ಯಕ್ಕಾಗಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತದಲ್ಲಿ ಗಾಯಗೊಂಡ ಬಳಿಕ ಚಿಕಿತ್ಸೆ ಫಲಿಸದೇ ಗ್ರಾಮ ಲೆಕ್ಕಾಧಿಕಾರಿ ಭುವನಾ (VAO Bhuvana) ಮೃತಪಟ್ಟಿದ್ದಾರೆ. ಇದು ನೂರಾರು ಗ್ರಾಮ ಲೆಕ್ಕಾಧಿಕಾರಿಗಳನ್ನ ಕೆರಳುವಂತೆ ಮಾಡಿತ್ತು. ನಿನ್ನೆಯಿಂದ ಕಂದಾಯ ಇಲಾಖೆಯ ನೂರಾರು ಸಿಬ್ಬಂದಿ ಡಿಸಿ ಕಚೇರಿ ಎದುರು ಪ್ರತಿಭಟಿಸಿದ್ದರು. ಈ ಮಧ್ಯೆ ಹೋರಾಟಗಾರರೊಂದಿಗೆ ಡಿಸಿಎಂ ಪರಮೇಶ್ವರ್ ಸಂಧಾನ ಯಶಸ್ವಿ ಆಗಿದೆ.
ಘಟನೆ ಕುರಿತು ಸಿಎಸ್ಗೆ ಪತ್ರ ಬರೆದ ಡಿಸಿ
ಭುವನಾ ಸಾವು ಇದೀಗ ಕಂದಾಯ ಇಲಾಖೆ ಸಿಬ್ಬಂದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ, ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹೋರಾಟಗಾರರೊಂದಿಗಿನ ಎರಡನೇ ಸಂಧಾನ ಸಭೆಯೂ ಸಂಪೂರ್ಣ ವಿಫಲವಾಗಿದೆ. ಸಭೆಯ ಬಳಿಕ ಡಿಸಿ ನೀಡಿದ ಪತ್ರದ ಸಮೇತ ಪ್ರತಿಭಟನಾ ಸ್ಥಳಕ್ಕೆ ಬಂದ ಮುಖಂಡರು, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿಸಿ ಬರೆದಿರುವ ಪತ್ರದ ವಿವರಗಳನ್ನು ಓದಿ ಧರಣಿನಿರತರಿಗೆ ತಿಳಿಸಿದರು.
ಸಿಎಸ್ಗೆ ಡಿಸಿ ಬರೆದ ಪತ್ರದಲ್ಲೇನಿದೆ?
ಮುಖ್ಯ ಕಾರ್ಯದರ್ಶಿಗೆ ಜಿಲ್ಲಾಧಿಕಾರಿಗಳು ಬರೆದಿರುವ ಪತ್ರದಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಮೃತ ಭುವನಾ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಒಂದು ತಿಂಗಳು ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರತಿದಿನದಂತೆ ಬಸ್ನಲ್ಲಿ ತುಮಕೂರಿಗೆ ಬಂದು, ಅಲ್ಲಿಂದ ಬೈಕ್‌ನಲ್ಲಿ ತೆರಳುತಿದ್ದರು ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತದಲ್ಲಿ ಅಧಿಕಾರಿ ಸಾವು: ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ!
ಇನ್ನು ಭುವನಾ ಅವರ ಕುಟುಂಬಕ್ಕೆ 30 ಲಕ್ಷ ರೂ ಪರಿಹಾರ ಮಂಜೂರು ಮಾಡುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಹಾಗೂ ಅನುಕಂಪದ ಆಧಾರದಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡುವ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಇದರೊಂದಿಗೆ, ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 150 ರಿಂದ 200 ಜನ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಡಿಸಿ ಪತ್ರದಲ್ಲಿ ಮುಖ್ಯ ಕಾರ್ಯದರ್ಶಿಗೆ ಕೋರಿದ್ದಾರೆ.
ಡಿಸಿ ಬರೆದ ಪತ್ರ ಒಪ್ಪಲ್ಲ ಎಂದ ಪ್ರತಿಭಟನಾಕಾರರು
ಆದರೆ, ಡಿಸಿ ಬರೆದಿರುವ ಪತ್ರದ ಅಂಶಗಳನ್ನು ಒಪ್ಪಲು ಪ್ರತಿಭಟನಾ ನಿರತ ವಿಎಒಗಳು ಹಾಗೂ ಕಂದಾಯ ನೌಕರರು ಜಂಟಿಯಾಗಿ ನಿರಾಕರಿಸಿದ್ದಾರೆ. ಡಿಸಿ ಪತ್ರದಲ್ಲೇನೋ ಅಂಶಗಳನ್ನು ಉಲ್ಲೇಖಿಸಿದ್ದಾರೆ, ಆದರೆ ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ ಎಂದು ಮುಖಂಡರು ಪ್ರಶ್ನಿಸಿದಾಗ, ಧರಣಿನಿರತರು ಯಾವುದೇ ಕಾರಣಕ್ಕೂ ಈ ಪತ್ರ ಒಪ್ಪಲ್ಲ ಎಂದು ಒಕ್ಕೊರಲಿನಿಂದ ಪಟ್ಟು ಹಿಡಿದರು. ಸಬಂಧಪಟ್ಟ ಅಧಿಕಾರಿಗಳ ಅಮಾನತು ಆದೇಶದ ಪತ್ರ ಬಿಡುಗಡೆಯಾಗುವವರೆಗೂ ನಾವು ಧರಣಿ ಸ್ಥಳದಿಂದ ಕದಲುವುದಿಲ್ಲ ಎಂದು ನೌಕರರು ಎಚ್ಚರಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಡಿಸಿಎಂ ಪರಮೇಶ್ವರ್ ಭೇಟಿ
ಇನ್ನು ಸ್ಥಳಕ್ಕೆ ಪ್ರತಿಭಟನಾಕಾರರ ಒತ್ತಾಯ ಬೆನ್ನಲ್ಲೇ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಖುದ್ದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಮೊದಲಿಗೆ ಭುವನಾ ಫೋಟೊಗೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಡಿಸಿಎಂಗೆ ಕರ್ನಾಟಕ ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಸಂಘ ಮನವಿ ಪತ್ರ ಸಲ್ಲಿಸಿದೆ. ಮೃತ ಭುವನಾ ಕುಟುಂಬಕ್ಕೆ ಎರಡು ಕೋಟಿ ರೂ ಪರಿಹಾರ, ಜೊತೆಗೆ ಈ ಪ್ರಕರಣ ಸಂಬಂಧ ತುಮಕೂರು ತಹಶೀಲ್ದಾರ್ ರಾಜೇಶ್ವರಿ ಅಮಾನತುಗೊಳಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಇನ್ನು ತಿಪಟೂರು ತಾಲೂಕಿನ ನೊಣವಿನಕೆರೆ ಹೋಬಳಿಯ ಹುಣಸೆಘಟ್ಟ ವೃತ್ತದಲ್ಲಿ ನಡೆದ ವಿಎ ಯಶಸ್ವಿನಿಗೆ ಅಪಘಾತ ಪ್ರಕರಣ ಸಂಬಂಧ ನೊಣವಿನಕೆರೆ ಉಪ ತಹಶೀಲ್ದಾರ್ ಮತ್ತು ಪ್ರಭಾರ ಹಕ್ಕು ದಾಖಲೆ ಶಿರಸ್ತೇದಾರ್ ಲೋಕೇಶ್ ಕುಮಾರ್ ಕಾರಣಿಕರ್ತರು. ಇವರನ್ನು ಸಹ ಅಮಾನತು ಮಾಡುವಂತೆ ಸಂಘ ಆಗ್ರಹಿಸಿದೆ.
ಡಿಸಿಎಂ ಮನವಿ ಮೇರೆಗೆ ಪ್ರತಿಭಟನೆ ಹಿಂಪಡೆದ ಪ್ರತಿಭಟನಾಕಾರರು
ಈ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್, ನನ್ನ ಆರೋಗ್ಯದಲ್ಲಿ ವ್ಯತ್ಯಾಸ ಆಗಿತ್ತು, ಹಾಗಾಗಿ ಬರಲು ಆಗಿಲ್ಲ. ನಿಮ್ಮನ್ನು ನಿರ್ಲಕ್ಷ್ಯ ಮಾಡಲು ನಾನು ಬಿಡಲ್ಲ. 8 ವರ್ಷದಿಂದ ಆಗದ ಗ್ರೇಡ್ 2 ತಹಶೀಲ್ದಾರ್ ಬಡ್ತಿ ಆಗಿರಲಿಲ್ಲ. ನಾನು ಬಂದ ಒಂದೇ ವಾರದಲ್ಲಿ ಆ ಪ್ರಕ್ರಿಯೆ ಆರಂಭಿಸಿದ್ದೇನೆ. ನಾನು ನೌಕರರ ಪರವಾಗಿ ಇದ್ದವನು. ಅದು ನನ್ನ ಜವಾಬ್ದಾರಿ. ಹಾಗಾಗಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಎಸ್ಐಆರ್ ಭೂತ ನಮ್ಮ ಮುಂದಿದೆ. ಎರಡು ತಿಂಗಳು ಸಮಯಾವಕಾಶ ಕೊಡಬಹುದಿತ್ತು. ಆದರೆ ಒಂದು ತಿಂಗಳು ನೀಡಿ ಭಯದ ವಾತಾವರಣ ತಂದಿಟ್ಟಿದ್ದಾರೆ. ಮೃತರ ಕುಟುಂಬಕ್ಕೆ 1 ಕೋಟಿ ರೂ ಇನ್ಶೂರೆನ್ಸ್ ಹಣ 15 ದಿನದಲ್ಲಿ ಬರುತ್ತದೆ. ಚುನಾವಣಾ ಆಯೋಗದಿಂದ 30 ಲಕ್ಷ ರೂ ಮಂಜೂರು ಮಾಡಲಾಗುವುದು. ಅವರ ಕುಟುಂಬದವರಿಗೆ ಸರ್ಕಾರಿ ಕೆಲಸ ಕೊಡುತ್ತೇವೆ ಎಂದು ಹೇಳಿದರು. ಬಳಿಕ ಪ್ರತಿಭಟನಾಕಾರರ ಪ್ರತಿಭಟನೆ ಹಿಂಪಡೆದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
