ಬೆಂಗಳೂರು, (ಜುಲೈ 05): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಂದು ಮತ್ತೊಂದು ಬಿಎಂಟಿಸಿ (BMTC) ಬಸ್ ಅಪಘಾತ ಸಂಭವಿಸಿದೆ. ಲಗ್ಗೆರೆ (Laggere ) ಸಮೀಪ, ಗೊರಗುಂಟೆಪಾಳ್ಯ ಕಡೆಗೆ ಹೋಗುವ ಮಾರ್ಗದಲ್ಲಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಡಿಕ್ಕಿಯಾಗಿದ್ದು, ಮೂವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬಿಎಂಟಿಸಿ ಡೀಸೆಲ್ ಬಸ್ ಮುಂದೆ ಚಲಿಸುತ್ತಿದ್ದ ಕಾರು ಚಾಲಕನೊಬ್ಬ ಹಠಾತ್ತನೆ ಬ್ರೇಕ್ ಹಾಕಿದ್ದಾನೆ. ಈ ವೇಳೆ ಬಸ್ ಚಾಲಕ ಕೂಡ ತಕ್ಷಣವೇ ಬ್ರೇಕ್ ತುಳಿದಿದ್ದಾನೆ. ಅದೇ ಸಮಯದಲ್ಲಿ ಹಿಂಬದಿಯಿಂದ ಓವರ್‌ಟೇಕ್ ಮಾಡಲು ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್, ಮುಂಭಾಗದಲ್ಲಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ.
16ನೇ ಡಿಪೋ ಎಲೆಕ್ಟ್ರಿಕ್ ಬಸ್ (ದೀಪಾಂಜಲಿ ನಗರ ) 26ನೇ ಡಿಪೋಗೆ ಸೇರಿದ ಡಿಸೇಲ್ (ಯಶವಂತಪುರ) ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಮತ್ತು ಸಹ ಪ್ರಯಾಣಿಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಗಾಯಾಳುಗಳನ್ನು ಹತ್ತಿರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿಯಲ್ಲ ಸಾಕ್ಷಾತ್ ಯಮ!: 17 ವರ್ಷಗಳಲ್ಲಿ 1,142 ಜನರ ಬಲಿ ಪಡೆದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಗಳು!
ಕೆ.ಆರ್ ಸರ್ಕಲ್ ಬಳಿಯೂ ನಡೆದಿತ್ತು ಅಪಘಾತ
ಇನ್ನು ನಿನ್ನೆ (ಜುಲೈ 04) ಅಷ್ಟೇ ಬೆಂಗಳೂರಿನ ಕೆ.ಆರ್ ಸರ್ಕಲ್ (KR Circle) ಬಳಿ ಎರಡು ಬಿಎಂಟಿಸಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬಸ್ ಚಾಲಕನ (Driver) ಸ್ಥಿತಿ ಚಿಂತಾಜನಕವಾಗಿದೆ. 13ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಯುವತಿಯೊಬ್ಬರು ಬಸ್‌ನ ಒಳಗಡೆ ಸಿಲುಕಿಕೊಂಡು ಗೋಳಾಡಿದ್ದಯ, ಗಾಯಗೊಂಡವರನ್ನು ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
EV ಬಸ್‌ಗಳಿಂದ ಸಾಲು ಸಾಲು ಅಪಘಾತ
ಇವಿ ಬಸ್ ಚಾಲಕರ ಯಡವಟ್ಟಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಹಿಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇವಿ ಬಸ್ ಅವಾಂತರದ ಬಗ್ಗೆ ದಾಖಲೆ ಸಮೇತ ಕೇಂದ್ರದ ಗಮನಕ್ಕೆ ತಂದಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಸಾರಿಗೆ ಇಲಾಖೆ, ಸದ್ಯಕ್ಕೆ ಹೊಸ ಇವಿ ಬಸ್ ಖರೀದಿ ಬೇಡ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಪದೇ ಪದೇ ಮರುಕಳಿಸುತ್ತಿರೋ ಇವಿ ಬಸ್ ಅಪಘಾತದ ಬಗ್ಗೆ ಅಧ್ಯಯನಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಸಾರಿಗೆ ಸಚಿವರ ಸೂಚನೆ ಮೇರೆಗೆ ನಗರದ ಇವಿ ಬಸ್ ಕಾರ್ಯಕ್ಷಮತೆ ಅಧ್ಯಯನ ನಡೆಸಲಿದೆ. ಈ ಬಗ್ಗೆ ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ.
