ತಮಿಳುನಾಡು ಸಿಎಂ, ನಟ ದಳಪತಿ ವಿಜಯ್ ಅವರ ಮಗ ಜೇಸನ್ ಸಂಜಯ್ ಈಗ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಅವರು ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸುತ್ತಿದ್ದಾರೆ. ಸುದೀಪ್ ಕಿಶನ್ ನಾಯಕನಾಗಿ ನಟಿಸುತ್ತಿರುವ ‘ಸಿಗ್ಮಾ’ ಚಿತ್ರದ ಮೂಲಕ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಈ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಜೇಸನ್ ಸಂಜಯ್ ತಮ್ಮ ಮೊದಲ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ತಮ್ಮ ತಂದೆಯ ಬಗ್ಗೆ ಒಂದು ದೊಡ್ಡ ಆಸೆಯನ್ನು ಹಂಚಿಕೊಂಡಿದ್ದಾರೆ.
ಹಾಲಿವುಡ್ ನಟ ಜೇಸನ್ ಸ್ಟೇಥಮ್ ಮತ್ತು ವಿಜಯ್ ಕಾಂಬಿನೇಷನ್
ಸಂದರ್ಶನದಲ್ಲಿ ಜೇಸನ್ ಸಂಜಯ್ ಅವರಿಗೆ ಒಂದು ಆಸಕ್ತಿದಾಯಕ ಪ್ರಶ್ನೆ ಕೇಳಲಾಗಿತ್ತು. ಹಾಲಿವುಡ್‌ನ ಖ್ಯಾತ ಆಕ್ಷನ್ ನಟ ಜೇಸನ್ ಸ್ಟೇಥಮ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ತಮಿಳು ಚಿತ್ರರಂಗದ ಯಾವ ನಟನನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಲಾಗಿತ್ತು. ಇದಕ್ಕೆ ಜೇಸನ್ ಸಂಜಯ್ ತಕ್ಷಣವೇ ನನ್ನ ತಂದೆ ವಿಜಯ್ ಅವರನ್ನು ಆಯ್ಕೆ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಅದ್ಭುತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಈ ಉತ್ತರ ಕೇಳಿ ಜನರು ಸೋಶಿಯಲ್ ಮೀಡಿಯಾದಲ್ಲಿ ಮೀಮ್ಸ್ ಮಾಡಬಹುದು ಎಂದು ಅವರು ತಮಾಷೆಯಾಗಿ ನಕ್ಕಿದ್ದಾರೆ.
ನಟನೆಯ ಬದಲು ನಿರ್ದೇಶನ ಆಯ್ಕೆ ಮಾಡಿದ್ದೇಕೆ?
ದಳಪತಿ ವಿಜಯ್ ಅವರಂತಹ ಬಿಗ್ ಸ್ಟಾರ್ ಮಗನಾಗಿದ್ದರೂ ಜೇಸನ್ ನಟನೆಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ಇದಕ್ಕೆ ಕಾರಣ ಅವರ ಬಾಲ್ಯದ ದಿನಗಳು ಎಂದು ಅವರು ವಿವರಿಸಿದ್ದಾರೆ. ಜೇಸನ್ ಅವರಿಗೆ ಚಿಕ್ಕ ವಯಸ್ಸಿನಿಂದಲೇ ಶೂಟಿಂಗ್ ಸೆಟ್‌ಗಳಿಗೆ ಹೋಗುವ ಅವಕಾಶ ಇತ್ತು. ಅಲ್ಲಿನ ವಾತಾವರಣ ನೋಡಿ ಅವರಿಗೆ ಸಿನಿಮಾದ ಮೇಲೆ ಆಸಕ್ತಿ ಮೂಡಿತು. ಆದರೆ ಆರಂಭದಲ್ಲಿ ಅವರಿಗೆ ಪೈಲಟ್ ಅಥವಾ ಕ್ರಿಕೆಟರ್ ಆಗಬೇಕು ಎಂಬ ಆಸೆ ಇತ್ತು. 11 ಮತ್ತು 12 ನೇ ತರಗತಿಯಲ್ಲಿದ್ದಾಗ ಅವರಿಗೆ ಚಿತ್ರಕಥೆ ಬರೆಯುವ ಹವ್ಯಾಸ ಶುರುವಾಯಿತು. ಆ ಬಳಿಕ ಅವರು ಕೆನಡಾಕ್ಕೆ ಹೋಗಿ ಸಿನಿಮಾ ನಿರ್ದೇಶನ ಕೋರ್ಸ್ ಮುಗಿಸಿದರು.
ಇದನ್ನೂ ಓದಿ: ಚಿತ್ರರಂಗದಲ್ಲಿ ನಾಯಕನಾಗಿ ಹತ್ತು ವರ್ಷ; ವಿಜಯ್ ದೇವರಕೊಂಡ ಭಾವುಕ ಪೋಸ್ಟ್ ವೈರಲ್
ಕೆನಡಾದಲ್ಲಿ ಕಲಿತ ಸಿನಿಮಾ ಪಾಠಗಳು
ಕೆನಡಾದಲ್ಲಿ ಓದುತ್ತಿದ್ದಾಗ ಜೇಸನ್ ಸಂಜಯ್ ಅವರಿಗೆ ಸಾಕಷ್ಟು ಅನುಭವ ಸಿಕ್ಕಿತು. ಅಲ್ಲಿನ ಪ್ರೊಫೆಸರ್‌ಗಳು ಇವರನ್ನು ಜಾಹೀರಾತು ಏಜೆನ್ಸಿಗಳಿಗೆ ಕಳುಹಿಸುತ್ತಿದ್ದರು. ಅಲ್ಲಿ ಸ್ಟಾರ್ಟಪ್ ಕಂಪನಿಗಳಿಗೆ ಆಡ್ ಶೂಟ್ ಮಾಡುವ ಮೂಲಕ ಜೇಸನ್ ಆತ್ಮವಿಶ್ವಾಸ ಗಳಿಸಿಕೊಂಡರು. ಇದರ ಜೊತೆಗೆ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಾಲಂಟಿಯರ್ ಆಗಿ ಕೆಲಸ ಮಾಡಿದ್ದರು. ಅಲ್ಲಿ ಜಗತ್ತಿನ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುವ ಸುವರ್ಣ ಅವಕಾಶ ಸಿಕ್ಕಿತು. ಇದೇ ಸಮಯದಲ್ಲಿ ಅವರು ಮಲಯಾಳಂ ನಟ ನಿವಿನ್ ಪೌಲಿ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
