ಭಾರತದ ಕೈಗಾರಿಕಾ ಉತ್ಪಾದನೆಗೆ ಭರ್ಜರಿ ಬೂಸ್ಟ್: ಜೂನ್‌ನಲ್ಲಿ ಶೇ 7.3ಕ್ಕೆ ಏರಿಕೆ – Kannada News | India Industrial Output Rises 7.3 percent in June 2026 on Strong Manufacturing and Electricity Growth

ನವದೆಹಲಿ, ಆಗಸ್ಟ್ 1: ಭಾರತದ ಕೈಗಾರಿಕಾ ವಲಯ ಜೂನ್‌ನಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿದ್ದು, ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ಆಧಾರಿತ ಉತ್ಪಾದನೆ ಶೇ ಸ7.3ರಷ್ಟು ಹೆಚ್ಚಾಗಿದೆ. ಮೇ ತಿಂಗಳಲ್ಲಿ ದಾಖಲಾಗಿದ್ದ ಪರಿಷ್ಕೃತ ಶೇ 5.1ರ ಬೆಳವಣಿಗೆಗೆ ಹೋಲಿಸಿದರೆ ಜೂನ್‌ನ ಅಂಕಿ ಗಮನಾರ್ಹ ಏರಿಕೆ ಕಂಡಿದೆ. ಉತ್ಪಾದನಾ ವಲಯದ ಚೇತರಿಕೆ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿನ ಹೆಚ್ಚಳ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಕೇಂದ್ರ ಸಾಂಖ್ಯಿಕ ಹಾಗೂ ಯೋಜನಾನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.

ಉತ್ಪಾದನಾ ವಲಯದ ಕೊಡುಗೆ

ಜೂನ್‌ನಲ್ಲಿ ಉತ್ಪಾದನಾ ವಲಯ ಶೇ 7.8ರಷ್ಟು ಬೆಳವಣಿಗೆ ದಾಖಲಿಸಿದೆ. ವಿದ್ಯುತ್ ಮತ್ತು ಅನಿಲ ಪೂರೈಕೆ ವಲಯದಲ್ಲಿ ಶೇ 10.6ರಷ್ಟು ಏರಿಕೆಯಾಗಿದ್ದು, ಒಟ್ಟಾರೆ ಕೈಗಾರಿಕಾ ಉತ್ಪಾದನೆಗೆ ಹೆಚ್ಚಿನ ಬೆಂಬಲ ನೀಡಿದೆ. ಇನ್ನು ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆ ವಲಯದಲ್ಲಿ ಶೇ 1ರಷ್ಟು ಮಾತ್ರ ಬೆಳವಣಿಗೆಯಾಗಿದ್ದರೆ, ನೀರು ಪೂರೈಕೆ, ಒಳಚರಂಡಿ ಹಾಗೂ ತ್ಯಾಜ್ಯ ನಿರ್ವಹಣಾ ವಲಯವು ಶೇ 6.1ರಷ್ಟು ಏರಿಕೆ ದಾಖಲಿಸಿದೆ.

ಜೂನ್ 2026ರ IIP ತ್ವರಿತ ಅಂದಾಜು 123.1ರಷ್ಟಿದೆ. ಕಳೆದ ವರ್ಷದ ಜೂನ್‌ನಲ್ಲಿ ಇದು 114.7ರಷ್ಟಿತ್ತು.

ಎಲೆಕ್ಟ್ರಿಕಲ್ ಉಪಕರಣ, ವಾಹನ ತಯಾರಿಕೆಗೆ ಭರ್ಜರಿ ಬೇಡಿಕೆ

ಉತ್ಪಾದನಾ ವಲಯದ 23 ಇಂಡಸ್ಟ್ರೀ ಗ್ರೂಪ್​ಗಳ ಪೈಕಿ 19 ಗುಂಪುಗಳು ಜೂನ್‌ನಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿವೆ. ಇವುಗಳಲ್ಲಿ ವಿದ್ಯುತ್ ಉಪಕರಣಗಳ ತಯಾರಿಕೆ ವಲಯವು ಶೇ 34ರಷ್ಟು ಬೆಳವಣಿಗೆಯೊಂದಿಗೆ ಮುಂಚೂಣಿಯಲ್ಲಿದೆ. ಮೋಟಾರು ವಾಹನಗಳು, ಟ್ರೇಲರ್‌ಗಳು ಮತ್ತು ಸೆಮಿ-ಟ್ರೇಲರ್‌ಗಳ ತಯಾರಿಕೆ ಶೇ 17.5ರಷ್ಟು ಹಾಗೂ ಆಹಾರ ಉತ್ಪನ್ನಗಳ ತಯಾರಿಕೆ ಶೇ 10.8ರಷ್ಟು ಬೆಳವಣಿಗೆ ದಾಖಲಿಸಿದೆ.

ವಿದ್ಯುತ್ ಉಪಕರಣಗಳ ವಿಭಾಗದಲ್ಲಿ ವಿದ್ಯುತ್ ಸರ್ಕ್ಯೂಟ್‌ಗಳ ಸ್ವಿಚಿಂಗ್ ಅಥವಾ ರಕ್ಷಣಾ ಸಾಧನಗಳು, ಯುಪಿಎಸ್ ಹಾಗೂ ಆಪ್ಟಿಕಲ್ ಫೈಬರ್ ಮತ್ತು ಕೇಬಲ್‌ಗಳಿಗೆ ಸಂಬಂಧಿಸಿದ ಉತ್ಪನ್ನಗಳು ಪ್ರಮುಖ ಕೊಡುಗೆ ನೀಡಿವೆ.

ವಾಹನ ವಲಯದಲ್ಲಿ ಆಟೋ ಬಿಡಿಭಾಗಗಳು, ಸ್ಪೇರ್‌ಗಳು, ಪ್ರಯಾಣಿಕ ಕಾರುಗಳು ಮತ್ತು ವಾಣಿಜ್ಯ ವಾಹನಗಳ ಉತ್ಪಾದನೆ ಬೆಳವಣಿಗೆಗೆ ಪ್ರಮುಖ ಕಾರಣವಾಗಿವೆ. ಆಹಾರ ಉತ್ಪನ್ನಗಳ ವಿಭಾಗದಲ್ಲಿ ಚಹಾ, ಬಾಸುಮತಿ ಹೊರತುಪಡಿಸಿದ ಅಕ್ಕಿ ಮತ್ತು ಪಿಷ್ಟ ಉತ್ಪನ್ನಗಳು ಪ್ರಮುಖ ಪಾತ್ರ ವಹಿಸಿವೆ.

ಬಂಡವಾಳ ಸರಕುಗಳ ಉತ್ಪಾದನೆ ಶೇ 14.2ರಷ್ಟು ಏರಿಕೆ

ಬಳಕೆ ಆಧಾರಿತ ವರ್ಗೀಕರಣದಲ್ಲೂ ಕೈಗಾರಿಕಾ ವಲಯದ ಚೇತರಿಕೆ ಸ್ಪಷ್ಟವಾಗಿದೆ. ಬಂಡವಾಳ ಸರಕುಗಳ ಉತ್ಪಾದನೆ ಶೇ 14.2ರಷ್ಟು ಏರಿಕೆಯಾಗಿದ್ದು, ಹೂಡಿಕೆ ಚಟುವಟಿಕೆಗಳು ಮುಂದುವರಿದಿರುವ ಸೂಚನೆ ನೀಡಿದೆ.

ಮಧ್ಯಂತರ ಸರಕುಗಳ ಉತ್ಪಾದನೆ ಶೇ 9.3, ಮೂಲಸೌಕರ್ಯ ಮತ್ತು ನಿರ್ಮಾಣ ಸಂಬಂಧಿತ ಸರಕುಗಳು ಶೇ 7.5 ಹಾಗೂ ಗ್ರಾಹಕ ಬಾಳಿಕೆ ಬರುವ ಸರಕುಗಳು ಶೇ 7.7ರಷ್ಟು ಬೆಳವಣಿಗೆ ಕಂಡಿವೆ. ಪ್ರಾಥಮಿಕ ಸರಕುಗಳು ಮತ್ತು ಗ್ರಾಹಕ ಬಾಳಿಕೆ ಬಾರದ ಸರಕುಗಳು ತಲಾ ಶೇ 4.9ರಷ್ಟು ಏರಿಕೆ ದಾಖಲಿಸಿವೆ.

ಜೂನ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಒಟ್ಟಾರೆ ಬೆಳವಣಿಗೆಗೆ ಮಧ್ಯಂತರ ಸರಕುಗಳು, ಪ್ರಾಥಮಿಕ ಸರಕುಗಳು ಮತ್ತು ಬಂಡವಾಳ ಸರಕುಗಳು ಪ್ರಮುಖ ಕೊಡುಗೆ ನೀಡಿವೆ ಎಂದು ಸಚಿವಾಲಯ ತಿಳಿಸಿದೆ.

ಐಐಪಿ ಲೆಕ್ಕಾಚಾರದಲ್ಲೂ ಮಹತ್ವದ ಬದಲಾವಣೆ

ಜೂನ್‌ನ ಅಂಕಿಅಂಶಗಳ ಜೊತೆಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕವನ್ನು ಲೆಕ್ಕ ಹಾಕುವ ವಿಧಾನದಲ್ಲೂ ಮಹತ್ವದ ಬದಲಾವಣೆ ಮಾಡಲಾಗಿದೆ. ಹೊಸ IIP ಸರಣಿಗೆ 2022-23 ಅನ್ನು ಮೂಲ ವರ್ಷವಾಗಿ ಪರಿಗಣಿಸಲಾಗಿದ್ದು, ಬೆಲೆ ಬದಲಾವಣೆಗಳನ್ನು ಲೆಕ್ಕಾಚಾರ ಮಾಡಲು ಈ ಹಿಂದೆ ಬಳಸುತ್ತಿದ್ದ WPI ಬದಲಿಗೆ ಔಟ್​ಪುಟ್ ಪ್ರೊಡ್ಯೂಸರ್ ಪ್ರೈಸ್ ಇಂಡೆಕ್ಸ್ (Output PPI) ಅನ್ನು ಡಿಫ್ಲೇಟರ್ ಆಗಿ ಅಳವಡಿಸಲಾಗಿದೆ. IIPನಲ್ಲಿರುವ 463 ಉತ್ಪನ್ನ ಗುಂಪುಗಳ ಪೈಕಿ 234 ಗುಂಪುಗಳಿಗೆ ಈ ಬದಲಾವಣೆ ಅನ್ವಯಿಸಲಿದ್ದು, ಒಟ್ಟಾರೆ ಸೂಚ್ಯಂಕದಲ್ಲಿ ಇವುಗಳ ತೂಕ ಶೇ 36.02ರಷ್ಟಿದೆ.

ಇದನ್ನೂ ಓದಿ: ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ದರ ₹200ಕ್ಕೂ ಹೆಚ್ಚು ಇಳಿಕೆ

ಉತ್ಪಾದನೆಯ ಮೌಲ್ಯವನ್ನು ಆಧರಿಸಿ ಮಾಹಿತಿ ನೀಡುವ ಉತ್ಪನ್ನಗಳ ನೈಜ ಉತ್ಪಾದನೆಯನ್ನು ಇನ್ನಷ್ಟು ನಿಖರವಾಗಿ ಅಳೆಯಲು ಹೊಸ ವಿಧಾನ ನೆರವಾಗಲಿದೆ ಎಂದು ಸಚಿವಾಲಯ ತಿಳಿಸಿದೆ. ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳು ಹಾಗೂ IIP ಮೂಲ ವರ್ಷ ಪರಿಷ್ಕರಣೆಗೆ ಸಂಬಂಧಿಸಿದ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳಿಗೂ ಈ ಬದಲಾವಣೆ ಹೊಂದಿಕೆಯಾಗುತ್ತದೆ ಎಂದು ಸಚಿವಾಲಯ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *