ತಮಿಳುನಾಡಿಗೆ ಕಾವೇರಿ ನೀರು ಬಿಟ್ಟರೆ 1991ರ ಮಾದರಿ ಕ್ರಾಂತಿ: ಸರ್ಕಾರಕ್ಕೆ ಕರವೇ ಎಚ್ಚರಿಕೆ – Kannada News | Cauvery Water Row: Karnataka Leaders Warn of Conflict Over Tamil Nadu Water Release

ಬೆಂಗಳೂರು, ಜು.28 : ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ (ಒಟ್ಟು 4.5 ಟಿಎಂಸಿ) ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶ ನೀಡಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಹಾಗೂ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಮುಂಗಾರು ಕೈಕೊಟ್ಟು, ಕುಡಿಯುವ ನೀರಿಗೂ ತೊಂದರೆಯಾಗಿರುವಾಗ ತಮಿಳುನಾಡಿಗೆ ನೀರು ಹರಿಸಿದರೆ 1991ರ ಮಾದರಿಯ ಕಾವೇರಿ ಸಂಘರ್ಷ ಎದುರಾಗಲಿದೆ ಹಾಗೂ ರಾಜ್ಯದಲ್ಲಿ ಬೆಂಕಿ ಬೀಳಲಿದೆ ಎಂದು ಹೋರಾಟಗಾರರು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ (ಕಸ್ತೂರಿ ರಂಗನ್ ಬಣ) ಅಧ್ಯಕ್ಷ ಟಿ.ಎ. ನಾರಾಯಣಗೌಡ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ರಾಜ್ಯ ಸರ್ಕಾರ ಜನ ಹಿತ ಬಲಿ ಕೊಟ್ಟು ತಮಿಳುನಾಡಿಗೆ ನೀರು ಬಿಟ್ಟರೆ 1991ರ ಮಾದರಿಯಲ್ಲೇ ಕ್ರಾಂತಿಕಾರಿ ಕಾವೇರಿ ಸಂಘರ್ಷ ನಡೆಯಲಿದೆ. ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ.” ಎಂದು ಹೇಳಿದ್ದಾರೆ.

ಸಿಡಬ್ಲ್ಯುಆರ್‌ಸಿ ನೇರವಾಗಿ ಆದೇಶಿಸುವ ಬದಲು ಕಾವೇರಿ ಜಲಾನಯನ ಪ್ರದೇಶಕ್ಕೆ ಸಮಿತಿ ಕಳುಹಿಸಿ, ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಆದೇಶ ನೀಡಬೇಕಿತ್ತು. ಮಳೆ ಇಲ್ಲದೆ ಮಂಡ್ಯ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡು ಕೇಂದ್ರದ ಮೇಲೆ ಒತ್ತಡ ತಂದು ನೀರು ಪಡೆಯಲು ಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ನೀರು ಹರಿಸಬಾರದು.

ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. “ಕಾವೇರಿ ಕೊಳ ಸಂಪೂರ್ಣ ಬತ್ತಿ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಟ್ಟರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳಲಿದೆ. ತಮಿಳುನಾಡು ಸಿಎಂ ಜೋಸೆಫ್ ವಿಜಯ್‌ ಅವರನ್ನು ಯಾತಕ್ಕಾಗಿ ಕರೆಸುತ್ತಿದ್ದಾರೆ? ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಅಜೆಂಡಾ ಏನು? ಮನೆ ಊಟಕ್ಕೆ ಕರೆಸುತ್ತಿದ್ದಾರೋ ಅಥವಾ ನೀರಿನ ವಿಚಾರಕ್ಕೋ ಸ್ಪಷ್ಟಪಡಿಸಲಿ. ಎಲ್ಲಾ ಕನ್ನಡಪರ ಸಂಘಟನೆಗಳು ಒಟ್ಟಾಗಿ ಸಭೆ ನಡೆಸಿ ಮುಂದಿನ ಕ್ರಾಂತಿಕಾರಿ ನಿರ್ಧಾರ ಕೈಗೊಳ್ಳಲಿದ್ದೇವೆ” ಎಂದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲು CWRC ಆದೇಶ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಮರ

“ನಮ್ಮಲ್ಲೇ ನೀರಿಲ್ಲದಿರುವಾಗ ಒಂದು ಕ್ಯೂಸೆಕ್ ನೀರನ್ನೂ ಬಿಡಬಾರದು. ವಾಟಾಳ್ ನಾಗರಾಜ್, ನಾರಾಯಣ ಗೌಡ, ಸಾ.ರಾ. ಗೋವಿಂದು ಹಾಗೂ ರೈತ ಮುಖಂಡರೆಲ್ಲ ಸೇರಿ ಸಭೆ ನಡೆಸಿ ಕ್ರಾಂತಿಕಾರಿ ಹೋರಾಟ ಹೂಡುತ್ತೇವೆ” ಎಂದು ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಸಿದರು. ಇನ್ನು ಈ ಬಗ್ಗೆ ಮಾತನಾಡಿದ ಕಾಂಗ್ರೆಸ್​​ ಶಾಸಕ ಗಣಿಗ ರವಿಕುಮಾರ್ ಅವರು “ನಮ್ಮ ಜನರಿಗೇ ನೀರಿಲ್ಲ. ನಾನು ಇತ್ತೀಚೆಗೆ ತಮಿಳುನಾಡಿನ ಚಿದಂಬರಂ ಬಳಿ ಪ್ರವಾಸದಲ್ಲಿದ್ದಾಗ ಕಾವೇರಿ ನೀರು ಅಪಾರ ಪ್ರಮಾಣದಲ್ಲಿ ಸಮುದ್ರಕ್ಕೆ ಹರಿದು ಪೋಲಾಗುತ್ತಿರುವುದನ್ನು ಕಂಡಿದ್ದೇನೆ. ಅವರ ಬಳಿ ಇರುವ ನೀರೇ ಸಮುದ್ರಕ್ಕೆ ಹೋಗುತ್ತಿರುವಾಗ ಮತ್ತೆ ನೀರು ಕೇಳುವುದು ಸರಿಯಲ್ಲ. ರಾಜ್ಯ ಸರ್ಕಾರ CWRC ಆದೇಶವನ್ನು ಯಾವುದೇ ಕಾರಣಕ್ಕೂ ಪಾಲಿಸಬಾರದು” ಎಂದು ಹೇಳಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *