ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಮತ್ತೆ ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗಿರುವ ಯುವ ಹಿಂದೂ (Hindu) ಮಹಿಳೆಯರನ್ನು ‘ಗಟಾರ ತಲೆಮಾರು’ ಎಂದು ಕರೆದಿದ್ದಾರೆ. ಅವರ ಈ ರೀತಿಯ ಹೇಳಿಕೆಗೆ ಜಿನ್ ಜಿ (Gen Z) ಯುವಕ-ಯುವತಿಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಜೆನ್ ಜಿ ಯುವತಿಯರ ಬಗ್ಗೆ ಕಂಗನಾ ಹೇಳಿಕೆ:
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, ‘ಯುವ ಹಿಂದೂ ಮಹಿಳೆಯರ ನಡವಳಿಕೆ ಅತ್ಯಂತ ಆಘಾತಕಾರಿಯಾಗಿದೆ. ಸ್ವತಂತ್ರ ವೃತ್ತಿಪರ ಮಹಿಳೆಯರ ಜೀವನವನ್ನು ಅನುಕರಿಸಲು ಬಯಸುವ ಇವರು, ಆ ಸ್ವಾತಂತ್ರ್ಯವನ್ನು ಗಳಿಸಲು ಯಾವುದೇ ಶ್ರಮ ವಹಿಸುವುದಿಲ್ಲ. ನಿಜವಾದ ಸ್ವತಂತ್ರ ಮಹಿಳೆಯರು ಬಂಡಾಯದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ, ಅಸಂಪ್ರದಾಯಿಕ ವೃತ್ತಿಜೀವನವನ್ನು ಆಯ್ದುಕೊಳ್ಳುತ್ತಾರೆ ಮತ್ತು ತಮ್ಮ ಕ್ರಿಯೆಗಳಿಗೆ ತಾವೇ ಜವಾಬ್ದಾರರಾಗುತ್ತಾರೆ. ಅವರು ತಮ್ಮ ಹೆತ್ತವರ ಅಥವಾ ಕುಟುಂಬದ ವೆಚ್ಚದಲ್ಲಿ ಇದನ್ನು ಮಾಡುವುದಿಲ್ಲ’ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ಖಾರದ ಮಾತುಗಳು:
ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾದ ಭಾರತೀಯ ಮಹಿಳೆಯರನ್ನು ‘ಜೆನೆರೇಷನ್ ಗಟಾರ್’ ಎಂದು ಕಂಗನಾ ಕರೆದಿದ್ದಾರೆ. ‘ಅವರಿಂದ ಸಮಾಜಕ್ಕೆ ಅಥವಾ ವ್ಯವಸ್ಥೆಗೆ ಯಾವುದೇ ಕೊಡುಗೆಯಿಲ್ಲ. ಅವರು ಓದಿನಲ್ಲೂ ಉತ್ತಮರಲ್ಲ, ಅಷ್ಟು ಕನಿಷ್ಠ ಮಟ್ಟದಲ್ಲಿದ್ದಾರೆ ಹಾಗೂ ಭ್ರಷ್ಟರಾಗಿದ್ದಾರೆ. ಅವರಿಗೆ ಗೃಹಿಣಿಯರಾಗಲೂ ಅರ್ಹತೆಯಿಲ್ಲ. ಆದರೂ ಡ್ರಗ್ಸ್, ಮದ್ಯಪಾನ ಮತ್ತು ಹಲವರ ಜೊತೆಗಿನ ಲೈಂಗಿಕ ಸಂಬಂಧಗಳ ಸ್ವಾತಂತ್ರ್ಯವನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾರೆ. ಹೆತ್ತವರ ಗಳಿಕೆಯಲ್ಲೇ ನಾಚಿಕೆಯಿಲ್ಲದೆ ಜೀವನ ನಡೆಸುತ್ತಾ, ನಿಜವಾಗಿ ಸ್ವತಂತ್ರರಾಗದೆ ಸ್ವತಂತ್ರ ಜೀವನಕ್ಕಾಗಿ ನಿರಂತರವಾಗಿ ಜಗಳವಾಡುತ್ತಾರೆ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸ್ವತಂತ್ರ ಜೀವನವನ್ನು ಕಷ್ಟಪಟ್ಟು ಗಳಿಸಿಕೊಳ್ಳಬೇಕು. ಯಾವುದೇ ಹೊಣೆಗಾರಿಕೆಯಿಲ್ಲದೆ ಸ್ವತಂತ್ರವಾಗಿ ಜೀವಿಸಲು ಯತ್ನಿಸಿದರೆ ನೀವು ಕೇವಲ ವಿಕೃತ ಜೀವಿಯಷ್ಟೇ. ಗಟಾರ್ ಚಾಪ್’ ಎಂದು ಕಂಗನಾ ರಣಾವತ್ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸೋನಾಕ್ಷಿ ಸಿನ್ಹಾ ಸಂಭ್ರಮ: ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ ನಟಿ
ಯುವಜನರ ವಿರುದ್ಧ ಕಂಗನಾ ಟೀಕೆ:
ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೋಗಳನ್ನು ನೋಡಿದ ನಂತರ ತಮಗೆ ಡಿಜಿಟಲ್ ಡಿಟಾಕ್ಸ್ ಬೇಕಿದೆ ಎಂದು ಕಂಗನಾ ಇತ್ತೀಚೆಗಷ್ಟೇ ಹೇಳಿದ್ದರು. ಯುವಜನರ ಭಾಷೆ ಹಾಗೂ ವರ್ತನೆ ಕುರಿತು ಆಕ್ಷೇಪ ಎತ್ತಿದ್ದ ಅವರು, ‘ನೀವು ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತೀರಿ ಮತ್ತು ಅವುಗಳಂತೆಯೇ ವರ್ತಿಸುತ್ತೀರಿ’ ಎಂದಿದ್ದರು. ಕಂಗನಾ ಅವರ ಈ ಸರಣಿ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
