ತಮಿಳುನಾಡಿನಲ್ಲಿ ವಿಜಯ್ ಸರ್ಕಾರದ ಪತನಕ್ಕೆ ಸಂಚು; ಟಿವಿಕೆ ಶಾಸಕನಿಗೆ 35 ಕೋಟಿ ಆಫರ್ – Kannada News | 3 people arrested for offering TVK MLA Rs 35 crore Plot To Topple Vijay Government

ಚೆನ್ನೈ, ಜುಲೈ 1: ತಮಿಳುನಾಡಿನಲ್ಲಿ ಸಿನಿಮಾ ನಟ ವಿಜಯ್ (Vijay) ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಎರಡೇ ತಿಂಗಳಲ್ಲಿ ಆ ಸರ್ಕಾರವನ್ನು ಅಸ್ಥಿರಗೊಳಿಸಲು ನಡೆದಿದ್ದ ಭಾರಿ ಪಿತೂರಿಯನ್ನು ರಾಜ್ಯ ಗುಪ್ತಚರ ಇಲಾಖೆ ಭೇದಿಸಿದೆ. ವಿಧಾನಸಭಾ ಸ್ಪೀಕರ್ ವಿರುದ್ಧ ಮಂಡಿಸಲು ಉದ್ದೇಶಿಸಲಾಗಿದ್ದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ನಿರ್ದಿಷ್ಟವಾಗಿ ವೋಟ್ ಮಾಡಲು ಟಿವಿಕೆ ಶಾಸಕರೊಬ್ಬರಿಗೆ ಬರೋಬ್ಬರಿ 35 ಕೋಟಿ ರೂ. ಆಮಿಷ ಒಡ್ಡಿದ ಆರೋಪದ ಮೇಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಈ ಇಡೀ ಸಂಚಿನ ಹಿಂದೆ ಆಡಳಿತಾರೂಢ ಡಿಎಂಕೆ (DMK) ಪಕ್ಷದ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ವಿ. ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರನ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಟಿವಿಕೆ ಪಕ್ಷದ 15 ಶಾಸಕರಿಂದ ಏಕಕಾಲಕ್ಕೆ ರಾಜೀನಾಮೆ ಕೊಡಿಸಿ ಸರ್ಕಾರವನ್ನು ಉರುಳಿಸುವುದು ಈ ಸಂಚಿನ ಮುಖ್ಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.

35 ಕೋಟಿ ರೂ. ಆಫರ್ ಕೊಟ್ಟಿದ್ದು ಹೇಗೆ?:

ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈ ಕ್ಷೇತ್ರದ ಟಿವಿಕೆ ಶಾಸಕ ಡಾ. ಎನ್. ಇಳಯರಾಜ ಚೆನ್ನೈ ಪೊಲೀಸ್ ಕಮಿಷನರ್‌ಗೆ ನೀಡಿದ ದೂರಿನಿಂದ ಈ ಹಗರಣ ಬೆಳಕಿಗೆ ಬಂದಿದೆ. ‘ಇಂಡಿಯನ್ ಪೊಲಿಟಿಕಲ್ ಡೆಮಾಕ್ರಟಿಕ್ ಸ್ಟ್ರೇಟಜೀಸ್’ (IPDS) ಎಂಬ ರಾಜಕೀಯ ಸಲಹಾ ಸಂಸ್ಥೆಯ ಉದ್ಯೋಗಿ ತಿರುನಾವಕ್ಕರಸು ಎಂಬಾತ ತಮಗೆ ಕರೆ ಮಾಡಿದ್ದಾಗಿ ಶಾಸಕರು ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ಹೆಸರು ಬಳಸಿಕೊಳ್ಳುತ್ತೇನೆ: ಸಿಎಂ ವಿಜಯ್​ಗೆ ನೇರವಾಗಿ ಹೇಳಿದ ನಟ ವಿಶಾಲ್

ದೂರಿನ ಪ್ರಕಾರ, ಟಿವಿಕೆ ನಾಯಕರಾದ ಅಸೆಂಬ್ಲಿ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರ ವಿರುದ್ಧ ಮಂಡಿಸಲು ಉದ್ದೇಶಿಸಲಾಗಿದ್ದ ಅವಿಶ್ವಾಸ ನಿರ್ಣಯದ ವೇಳೆ ಸರ್ಕಾರದ ವಿರುದ್ಧ ಮತ ಚಲಾಯಿಸಲು ಶಾಸಕ ಇಳಯರಾಜ ಅವರಿಗೆ 35 ಕೋಟಿ ರೂ. ಆಫರ್ ನೀಡಲಾಗಿತ್ತು. ಆದರೆ, ಇಳಯರಾಜ ಅವರು ಈ ಆಫರ್ ಅನ್ನು ತಿರಸ್ಕರಿಸಿದರು. ಇದಾದ ನಂತರ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟಿವಿಕೆ ಶಾಸಕ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಲಾಗಿತ್ತು.

ಜೂನ್ 29ರಂದು ಶಾಸಕರು ನೀಡಿದ ದೂರಿನ ಆಧಾರದ ಮೇಲೆ ಟ್ರಿಪ್ಲಿಕೇನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅರುಂಬಾಕ್ಕಂನ ತಿರುನಾವಕ್ಕರಸು, ತಿರುಚಿಯ ನರೇಶ್ ಮತ್ತು ಮೇಡವಾಕ್ಕಂನ ತ್ಯಾಗರಾಜನ್ ಎಂಬ ಮೂವರನ್ನು ಬಂಧಿಸಿದ್ದಾರೆ. ಇವರು ಮಾಜಿ ಸಚಿವ ಸೆಂಥಿಲ್ ಬಾಲಾಜಿ ಮತ್ತು ಅವರ ಸಹೋದರ ವಿ. ಅಶೋಕ್ ಕುಮಾರ್ ಅವರ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

ಡಿಎಂಕೆ ವಿರುದ್ಧ ಟಿವಿಕೆ ಸಚಿವರ ತೀವ್ರ ವಾಗ್ದಾಳಿ:

ಈ ಬೆಳವಣಿಗೆಯ ಬೆನ್ನಲ್ಲೇ ತಮಿಳುನಾಡು ಸಚಿವ ಸಿ.ಟಿ. ನಿರ್ಮಲ್ ಕುಮಾರ್ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸೆಂಥಿಲ್ ಬಾಲಾಜಿ ಮತ್ತು ಅವರ ‘ಕರೂರ್ ಗ್ಯಾಂಗ್’ ಜೊತೆ ನೇರ ಸಂಪರ್ಕ ಹೊಂದಿರುವ ವ್ಯಕ್ತಿಗಳು ಈ ಸಂಚಿನಲ್ಲಿ ಭಾಗಿಯಾಗಿದ್ದಾರೆ. ಎಂ.ಕೆ. ಸ್ಟಾಲಿನ್ ಮತ್ತು ಉದಯನಿಧಿ ಸ್ಟಾಲಿನ್ ಅವರ ಆದೇಶದ ಮೇರೆಗೆ ಸೆಂಥಿಲ್ ಬಾಲಾಜಿ ಅವರು ನಮ್ಮ ಹಲವು ಶಾಸಕರನ್ನು ಸಂಪರ್ಕಿಸಿ 10 ಕೋಟಿ, 20 ಕೋಟಿ ಹಾಗೂ 50 ಕೋಟಿ ರೂ.ಗಳವರೆಗೆ ಆಮಿಷ ಒಡ್ಡುತ್ತಿದ್ದಾರೆ. ಇವರೊಂದಿಗೆ ಎಡಪ್ಪಾಡಿ ಪಳನಿಸ್ವಾಮಿ (AIADMK) ಕೂಡ ಸೇರಿಕೊಂಡು ಹಿಂಬಾಗಿಲಿನಿಂದ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ನಟ ವಿಜಯ್ ಮತ್ತು ಸೆಂಥಿಲ್ ಬಾಲಾಜಿ ನಡುವೆ ಮೊದಲಿನಿಂದಲೂ ರಾಜಕೀಯ ವೈಷಮ್ಯವಿದ್ದು, ಈ ಹಿಂದೆ ಕರೂರ್‌ನಲ್ಲಿ ನಡೆದಿದ್ದ ವಿಜಯ್ ಅವರ ಚುನಾವಣಾ ರ‍್ಯಾಲಿಯ ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿತ್ತು. ತಮ್ಮ ಇಮೇಜ್ ಹಾಳು ಮಾಡಲು ಸೆಂಥಿಲ್ ಬಾಲಾಜಿ ಅವರೇ ಈ ಕಾಲ್ತುಳಿತವನ್ನು ಸಂಚು ರೂಪಿಸಿ ಮಾಡಿಸಿದ್ದಾರೆ ಎಂದು ವಿಜಯ್ ಈ ಹಿಂದೆ ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *