ಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ದೊಡ್ಡ ಬದಲಾವಣೆಯಾಗಿದೆ. ಇದರಲ್ಲಿ ಟೀಂ ಇಂಡಿಯಾದ ಡ್ಯಾಶಿಂಗ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ನಿರಂತರವಾಗಿ ವಿಶ್ವದ ನಂಬರ್-1 ಸ್ಥಾನದಲ್ಲಿದ್ದ ತಂಡದ ಸಹ ಆಟಗಾರ ಅಭಿಷೇಕ್ ಶರ್ಮಾಗೆ ಇಶಾನ್ ಕಿಶನ್ ಅನಿರೀಕ್ಷಿತ ಆಘಾತ ನೀಡಿದ್ದಾರೆ (PC-PTI).
ವರ್ಷದಿಂದ ಅಗ್ರಸ್ಥಾನದಲ್ಲಿದ್ದ ಅಭಿಷೇಕ್ ಶರ್ಮಾರನ್ನು ಹಿಂದಿಕ್ಕಿರುವ ಇಶಾನ್ ಕಿಶನ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಇಬ್ಬರು ಯುವ ಬ್ಯಾಟ್ಸ್‌ಮನ್‌ಗಳ ನಡುವೆ ಪ್ರಸ್ತುತ ಕೇವಲ 7 ರೇಟಿಂಗ್ ಪಾಯಿಂಟ್‌ಗಳ ಸ್ವಲ್ಪ ವ್ಯತ್ಯಾಸವಿದೆ ಎಂಬುದು ಗಮನಾರ್ಹ. ಈ ಅದ್ಭುತ ಸಾಧನೆಯೊಂದಿಗೆ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಅಭಿಷೇಕ್ ಶರ್ಮಾ ನಂತರ ಅಂತರರಾಷ್ಟ್ರೀಯ ಟಿ20ಗಳಲ್ಲಿ ವಿಶ್ವದ ನಂಬರ್-1 ಸ್ಥಾನವನ್ನು ಗಳಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಆಗಿದ್ದಾರೆ (PC-PTI).
ಇತ್ತೀಚೆಗೆ ಮುಕ್ತಾಯಗೊಂಡ 2026 ರ ಟಿ20 ವಿಶ್ವಕಪ್ನಲ್ಲಿ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿದ್ದರು. ಸುಮಾರು 200 ಸ್ಟ್ರೈಕ್ ರೇಟ್‌ನಲ್ಲಿ 317 ರನ್ ಬಾರಿಸಿದ್ದರು. ಈ ಮೂಲಕ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಫಲವಾಗಿ ಕಿಶನ್ಗೆ ನಂಬರ್ 1 ಬ್ಯಾಟ್ಸ್‌ಮನ್ ಎಂಬ ಪಟ್ಟ ಸಿಕ್ಕಿದೆ. ಇಶಾನ್ ಈಗ 876 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದರೆ, ಅಭಿಷೇಕ್ ಪ್ರಸ್ತುತ 869 ಅಂಕಗಳನ್ನು ಹೊಂದಿದ್ದಾರೆ (PC-PTI).
ಈ ನೂತನ ಶ್ರೇಯಾಂಕದಲ್ಲಿ ಇಶಾನ್ ಮತ್ತು ಅಭಿಷೇಕ್ ಸೇರಿದಂತೆ ನಾಲ್ವರು ಭಾರತೀಯರು ಅಗ್ರ 10 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಶಾನ್ ಮತ್ತು ಅಭಿಷೇಕ್ ಜೊತೆಗೆ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಟಾಪ್ 10ರೊಳಗೆ ಇದ್ದಾರೆ. ಐರ್ಲೆಂಡ್ ವಿರುದ್ಧದ ಎರಡನೇ ಟಿ20ಐನಲ್ಲಿ ಅರ್ಧಶತಕ ಗಳಿಸಿದ ತಿಲಕ್ ವರ್ಮಾ, 747 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇತ್ತೀಚಿನ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ (PC-PTI).
ಆದರೆ ಭಾರತ ಟಿ20 ತಂಡದಿಂದ ಹೊರಬಿದ್ದಿರುವ ಸೂರ್ಯಕುಮಾರ್ ಯಾದವ್ ಒಂದು ಸ್ಥಾನ ಕಳೆದುಕೊಂಡು 7 ರಿಂದ 8 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಉಳಿದಂತೆ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ 848 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ ಈ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆ ಕಂಡಿದ್ದು, 716 ರೇಟಿಂಗ್ ಅಂಕಗಳೊಂದಿಗೆ 8 ರಿಂದ 7 ನೇ ಸ್ಥಾನಕ್ಕೆ ಏರಿದ್ದಾರೆ (PC-PTI).
Published On – 5:26 pm, Wed, 1 July 26
