
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಕ್ಸಿಟ್ ಪೋಲ್‌ಗಳ ಪ್ರಕಾರ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಈ ಬಾರಿ ನಿರ್ಣಾಯಕ ಪಾತ್ರ ವಹಿಸಲಿದೆ. ಡಿಎಂಕೆ ಮತ್ತು ಎಐಎಡಿಎಂಕ ನಡುವಿನ ತೀವ್ರ ಪೈಪೋಟಿಯಲ್ಲಿ ವಿಜಯ್ ಕಿಂಗ್ ಮೇಕರ್ ಆಗುವ ಅಥವಾ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ತಾರೆಯರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ ದೀರ್ಘ ಇತಿಹಾಸವೇ ಇದೆ. ಈ ಹಿಂದೆ ನಟ ಮತ್ತು ನಿರ್ದೇಶಕರಾಗಿದ್ದ ಎಂ.ಜಿ. ರಾಮಚಂದ್ರನ್ (MGR) ಅವರು ಎಐಎಡಿಎಂಕ ಪಕ್ಷವನ್ನು ಸ್ಥಾಪಿಸಿ ಹತ್ತು ವರ್ಷಗಳ ಕಾಲ ರಾಜ್ಯವನ್ನು ಆಳುವ ಮೂಲಕ ಸಿನಿಮಾ ತಾರೆಯರಿಗೆ ರಾಜಕೀಯ ಹಾದಿ ನಿರ್ಮಿಸಿಕೊಟ್ಟಿದ್ದರು. ಅವರನ್ನು ಅನುಸರಿಸಿದ ಜಯಲಲಿತಾ ಅವರು ಚಿತ್ರರಂಗದ ಖ್ಯಾತ ನಟಿಯಾಗಿ ಮಿಂಚಿ, ನಂತರ 14 ವರ್ಷಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ದೇಶದ ಪ್ರಭಾವಿ ನಾಯಕಿಯಾಗಿ ಹೊರಹೊಮ್ಮಿದ್ದರು.
ಕೇವಲ ನಟರಷ್ಟೇ ಅಲ್ಲದೆ, ಚಿತ್ರಕಥೆಗಾರರಾಗಿದ್ದ ಎಂ. ಕರುಣಾನಿಧಿ ಅವರು ಕೂಡ ಐದು ಬಾರಿ ಮುಖ್ಯಮಂತ್ರಿಯಾಗಿ ತಮಿಳುನಾಡಿನ ಮೇಲೆ ಸಿನಿಮಾ ಪ್ರಭಾವ ಎಷ್ಟಿದೆ ಎಂಬುದನ್ನು ಸಾಬೀತುಪಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಮಲ್ ಹಾಸನ್ ಅವರು 2018ರಲ್ಲಿ ‘ಮಕ್ಕಳ್ ನೀಧಿ ಮೈಯಂ’ ಪಕ್ಷವನ್ನು ಸ್ಥಾಪಿಸಿ, 2024ರಲ್ಲಿ ಡಿಎಂಕೆ ಮೈತ್ರಿಕೂಟದ ಬೆಂಬಲದೊಂದಿಗೆ 2025ರಲ್ಲಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ ಫಲಿತಾಂಶಕ್ಕೂ ಮುನ್ನ ಶಿರಡಿ ಸಾಯಿಬಾಬಾ ದರ್ಶನ ಪಡೆದ ವಿಜಯ್
ಈಗ ಅದೇ ಹಾದಿಯಲ್ಲಿ ದಳಪತಿ ವಿಜಯ್ ಅವರು ಹೆಜ್ಜೆ ಇಟ್ಟಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಮುಂದಿನ ಮುಖ್ಯಮಂತ್ರಿಯಾಗುತ್ತಾರೆಯೇ ಎಂಬ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತಮಿಳುನಾಡು ರಾಜಕಾರಣದಲ್ಲಿ ಸಿನಿಮಾ ಸಂಸ್ಕೃತಿ ಮತ್ತು ರಾಜಕೀಯ ಅಸ್ಮಿತೆ ಅಷ್ಟೊಂದು ಆಳವಾಗಿ ಬೆಸೆದುಕೊಂಡಿದೆ. ತಮಿಳುನಾಡಿನ ಎಲ್ಲಾ ಕ್ಷೇತ್ರದಲ್ಲೂ ವಿಜಯ್ ಸ್ಪರ್ಧೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.