ತುಂಗಾ ತುಂಬಿ ಹರಿಯುತ್ತಿದ್ದರೂ ಶಿವಮೊಗ್ಗದಲ್ಲಿ ನೀರಿಗೆ ಹಾಹಾಕಾರ: ನೀರಿಗಾಗಿ ಜೀವದ ಹಂಗು ತೊರೆದ ಜನರು – Kannada News | No Drinking Water Despite Tunga Dam Overflowing: 57 Families Struggle for Basic Water Supply

ಕುಡಿಯುವ ನೀರಿಗಾಗಿ ಪರದಾಟImage Credit source: tv9 kannada

ಶಿವಮೊಗ್ಗ, ಜುಲೈ 18: ಮಲೆನಾಡಿದ ಜೀವನಾಡಿಯಾಗಿರುವ ತುಂಗಾ ಡ್ಯಾಂ (tungabhadra dam)  ಸಂಪೂರ್ಣ ಭರ್ತಿ ಆಗಿದೆ. ಈ ಬಾರಿಯ ಮಳೆಗೆ ರಾಜ್ಯದಲ್ಲಿ ಮೊದಲು ತುಂಬಿದ ಡ್ಯಾಂ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಈ ನಡುವೆ ಶಿವಮೊಗ್ಗದ (shivamogga) ಹೊರವಲಯದ ಮಂಡ್ಲಿ ಕಲ್ಲೂರಿನ ಪಾಲಿಕೆ ವ್ಯಾಪ್ತಿಗೆ ಬರುವ ವಾರ್ಡ್​ಗಳಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ತುಂಗಾ ಕಾಲುವೆಯಿಂದ ನೀರು ತರುತ್ತಿದ್ದಾರೆ.

ಕುಡಿಯುವ ನೀರಿಗಾಗಿ 57 ಕುಟುಂಬಗಳ ಪರದಾಟ

ಶಿವಮೊಗ್ಗ ನಗರದಲ್ಲಿ ತುಂಗಾ ಡ್ಯಾಂ ಇದೆ. ಇದೇ ತುಂಗಾ ಡ್ಯಾಂ ಮೂಲಕ ನಗರದ 35 ವಾರ್ಡ್​ಗಳಿಗೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಕಳೆದ ನಾಲ್ಕು ವರ್ಷಗಳ ಹಿಂದೆ ತುಂಗಾ ನೆರೆಯ ಸಂತ್ರಸ್ತರನ್ನ ಈ ಭಾಗದಲ್ಲಿ ಮನೆ ಕಟ್ಟಿಕೊಟ್ಟು ಸ್ಥಳಾಂತರ ಮಾಡಿದ್ದರು. ಒಟ್ಟು 57 ಕುಟುಂಬಗಳು ಇಲ್ಲಿ ವಾಸವಾಗಿವೆ. ಈ ಎಲ್ಲ ಬಡ ಕುಟುಂಬಗಳಿಗೆ ಕೇವಲ ಒಂದೇ ಒಂದು ಬೋರ್ ವೆಲ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನು ಆ ಬೋರ್ ವೆಲ್ ಪದೇ ಪದೇ ಕೆಟ್ಟು ಹೋಗುತ್ತಿದ್ದು, ಬಡಾವಣೆಯ ಜನರಿಗೆ ನೀರು ಸಾಕಾಗುತ್ತಿಲ್ಲ.

ಇದನ್ನೂ ಓದಿ: ಬರದ ನಡುವೆ ಮರುಬಿತ್ತನೆ ಮಾಡಿದ ವೃದ್ಧ ದಂಪತಿ!

ಪಾಲಿಕೆ ಮತ್ತು ವಾಟರ್ ಬೋರ್ಡ್ ಅಧಿಕಾರಿಗಳಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಇರುವ ಬೋರ್ ವೆಲ್ ಕೆಟ್ಟು ಹೋಗಿದೆ. ಒತ್ತಾಯಕ್ಕೆ ಒಂದು ಟ್ಯಾಂಕರ್ ಇಲ್ಲಿಗೆ ಕಳುಹಿಸುತ್ತಾರೆ. ಈ ಟ್ಯಾಂಕರ್​ಗೆ 57 ಕುಟುಂಬಗಳು ಮುಗಿಬೀಳುತ್ತವೆ. ಮಹಿಳೆಯರು ಹೊಡೆದಾಡಿ ಕುಡಿಯುವ ನೀರು ಹಿಡಿಯಬೇಕು. ಇಂತಹ ಪರಿಸ್ಥಿತಿಯಲ್ಲಿ ಅನೇಕರಿಗೆ ನೀರು ಸಿಗುತ್ತಿಲ್ಲ.

ನೀರಿಗಾಗಿ ಜೀವದ ಹಂಗು ತೊರೆಯುವ ಜನರು 

ಇದು ಕುಡಿಯುವ ನೀರಿನ ಸಮಸ್ಯೆಯಾದರೆ ಇನ್ನೂ ನಿತ್ಯದ ಬಳಕೆಗೂ ನೀರಲ್ಲ. ಪಕ್ಕದಲ್ಲೇ ಹರಿದು ಹೋಗಿರುವ ತುಂಗಾ ಕಾಲುವೆಯ ಕಲುಷಿತ ನೀರನ್ನೇ ಜನರು ಬಳಕೆ ಮಾಡುತ್ತಿದ್ದಾರೆ. ಅದು ಕೂಡ ಹಗ್ಗ ಬಿಟ್ಟು ಕೊಡಗಳನ್ನು ತುಂಬಿಸುತ್ತಿದ್ದಾರೆ. ನಿತ್ಯ ಅಪಾಯದಲ್ಲೇ ನೀರು ತುಂಬಿಸುತ್ತಿದ್ದಾರೆ. ಹೆಚ್ಚು ಕಡಿಮೆ ಆದರೆ ತುಂಬಿ ಹರಿಯುತ್ತಿರುವ ತುಂಗಾ ಚಾನೆಲ್​ನಲ್ಲಿ ಜನರು ಕೊಚ್ಚಿಕೊಂಡು ಹೋಗುವ ಅಪಾಯವಿದೆ. ಹೀಗೆ ಜೀವದ ಹಂಗು ತೊರೆದು ಜನರು ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ. ನಿತ್ಯ ಈ ಪರಿಸ್ಥಿಗೆ ನೆರೆ ಸಂತ್ರಸ್ತರು ಕಣ್ಣೀರು ಹಾಕುವಂತಾಗಿದೆ.

ಇಷ್ಟೊಂದು ಸುಸಜ್ಜಿತ ಮನೆ ಮತ್ತು ರಸ್ತೆಗಳನ್ನು ಸರ್ಕಾರ ನಿರ್ಮಿಸಿಕೊಟ್ಟಿದೆ. ಆದರೆ ಅಗತ್ಯವಿರುವ ಕುಡಿಯುವ ಮತ್ತು ಬಳಕೆಗೆ ನೀರಿನ ಸೌಕರ್ಯಕ್ಕೆ ಯಾವುದೇ ಯೋಜನೆ ಮಾಡಿಲ್ಲ. ಹತ್ತಿರದ ಬಡಾವಣೆಯಲ್ಲಿ ತುಂಗಾ ನದಿಯ ಶುದ್ಧ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಇದೆ. ಅದನ್ನೇ ಈ ಮಂಡ್ಲಿ ಕಲ್ಲೂರು ಬಡಾವಣೆಗೆ ವಿಸ್ತರಿಸಬೇಕೆಂದು ಬಡಾವಣೆಯ ಜನರು ಒತ್ತಾಯಿಸಿದ್ದಾರೆ. ಅಧಿಕಾರಿಗಳಿಗೆ ಈ ಬಡ ಸಂತ್ರಸ್ತರ ಆರೋಗ್ಯದ ಬಗ್ಗೆ ಯಾವುದೆ ಕಾಳಜಿ ಇಲ್ಲ. ಮಳೆಯ ಕಲುಷಿತ ಮಿಶ್ರಿತ ತುಂಗಾ ನದಿಯ ನೀರನ್ನೇ ನಿತ್ಯ ಬಳಕೆಗೆ ಉಪಯೋಗಿಸಲಾಗುತ್ತಿದೆ. ಇದರಿಂದ ಜನರಿಗೆ ಕೆಮ್ಮು ಶೀತ ಜ್ವರ ಚರ್ಮ ರೋಗದಂತಹ ಕಾಯಿಲೆಗಳು ಶುರುವಾಗಿವೆ.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ!

ಮೌಲ ಸೌಲಭ್ಯಗಳನ್ನು ನೀಡದೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನಿತ್ಯ ಕುಡಿಯುವ ಮತ್ತು ಬಳಕೆಯ ನೀರಿಗಾಗಿ ಜನರು ಕೆಲಸ ಬಿಟ್ಟು ನೀರು ತುಂಬಿಸುವುದೇ ಒಂದು ದೊಡ್ಡ ಕೆಲಸವಾಗಿದೆ. ಕೆಟ್ಟ ಬೋರ್ ವೆಲ್, ಒಂದೇ ಒಂದು ಟ್ಯಾಂಕರ್ ನೀರು ಇದರಿಂದ 57 ಕುಟುಂಬಸ್ಥರು ನಲುಗಿ ಹೋಗಿವೆ. ಇದೇ ರೀತಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ನಾವು ವೋಟ್​ ಹಾಕುವುದಿಲ್ಲ. ಈ ಹಿಂದೆ ಕೈ ಕಾಲು ಬಿದ್ದು ಮತ ಹಾಕಿಸಿಕೊಂಡ ಜನಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಹೀಗಾಗಿ ಮುಂಬರುವ ಚುನಾವಣೆಗಳನ್ನು ಬಹಿಷ್ಕಾರ ಹಾಕುವುದಾಗಿ ಬಡಾವಣೆಯ ಜನರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Karnataka Dam Water Level: ಕಬಿನಿ, ಹೇಮಾವತಿ ಜಲಾಶಯಗಳು ಖಾಲಿ ಖಾಲಿ!

ಇಷ್ಟೊಂದು ಜಲಸಂಪನ್ಮೂಲ ಮತ್ತು ಆರ್ಥಿಕವಾಗಿ ಗಿಟ್ಟಿಯಾಗಿದ್ದರೂ ಈ ಬಡಾವಣೆಯ ಜನರಿಗೆ ಕುಡಿಯಲು ನೀರಿಲ್ಲ. ದೀಪದ ಕೆಳಗೆ ಕತ್ತಲು ಅಂದ ಹಾಗೆ ನದಿ ಪಕ್ಕದಲ್ಲೇ ಹರಿದರೂ ಜನರಿಗೆ ಶುದ್ಧ ಕುಡಿಯುವ ನೀರಿಲ್ಲದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *