ವಿ. ಸೋಮಣ್ಣ Image Credit source: Facebook
ಬೆಂಗಳೂರು, ಜುಲೈ 18: ಬೆಂಗಳೂರಿನಲ್ಲಿ (Bengaluru) ಎರಡನೇ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಚರ್ಚೆ ನಡೆಯುತ್ತಿರುವ ನಡುವೆಯೇ, ನೂತನ ಏರ್ಪೋರ್ಟ್ಗೆ ತುಮಕೂರು ಜಿಲ್ಲೆಯ ಶಿರಾ ಸೂಕ್ತ ಸ್ಥಳವೆಂದು ಕೇಂದ್ರ ಸಚಿವ ವಿ. ಸೋಮಣ್ಣ ಪ್ರತಿಪಾದಿಸಿದ್ದಾರೆ. ಈ ಕುರಿತು ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರಿನ ಸಮೀಪ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವುದಕ್ಕಿಂತ ಶಿರಾದಲ್ಲಿ ನಿರ್ಮಾಣ ಮಾಡಿದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಶಿರಾದಲ್ಲಿ ವಿಮಾನ ನಿಲ್ದಾಣ ಯಾಕೆ? ಸೋಮಣ್ಣ ಕೊಟ್ಟ ಕಾರಣ ಏನು?
ಸೋಮಣ್ಣ ಪ್ರಕಾರ, ಶಿರಾದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾದರೆ ಮಧ್ಯ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಕೈಗಾರಿಕೆ, ವ್ಯಾಪಾರ, ಹೂಡಿಕೆ ಮತ್ತು ಸಾರಿಗೆ ವ್ಯವಸ್ಥೆಗೆ ದೊಡ್ಡ ಉತ್ತೇಜನ ಸಿಗಲಿದೆ. ಈಗಾಗಲೇ ಅಭಿವೃದ್ಧಿ ಬೆಂಗಳೂರು ಕೇಂದ್ರಿತವಾಗಿರುವ ಹಿನ್ನೆಲೆಯಲ್ಲಿ, ಹೊಸ ಮೂಲಸೌಕರ್ಯಗಳನ್ನು ರಾಜ್ಯದ ಇತರ ಭಾಗಗಳಿಗೆ ವಿಸ್ತರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಶಿರಾಕ್ಕೆ ಇರುವ ಪ್ರಮುಖ ಅನುಕೂಲಗಳು
ಶಿರಾ ಭಾಗದಲ್ಲಿ ಈಗಾಗಲೇ ಮುಂಬೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ಚೆನ್ನೈ–ಬೆಂಗಳೂರು ಕೈಗಾರಿಕಾ ಕಾರಿಡಾರ್, ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (NIMZ) ಹಾಗೂ ಕೆಐಎಡಿಬಿ ಕೈಗಾರಿಕಾ ಪ್ರದೇಶಗಳು ಅಭಿವೃದ್ಧಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದರೆ ಕೈಗಾರಿಕೆಗಳಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.
ಇದಲ್ಲದೆ, ರಸ್ತೆ ಮತ್ತು ರೈಲು ಸಂಪರ್ಕವೂ ಉತ್ತಮವಾಗಿದ್ದು, ಭೂಮಿ ಲಭ್ಯತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳ ದೃಷ್ಟಿಯಿಂದಲೂ ಶಿರಾ ಸೂಕ್ತ ಸ್ಥಳವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಿಜಿಸಿಎ ನಿಯಮಕ್ಕೂ ಅನುಕೂಲ
ಡಿಜಿಸಿಎ (DGCA) ನಿಯಮಗಳ ಪ್ರಕಾರ, ಶಿರಾ ನಗರವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿದೆ. ಹೀಗಾಗಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಾಂತ್ರಿಕ ಅಡ್ಡಿಯೂ ಇರುವುದಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವಂತೆ ಸಲಹೆ
ಬೆಂಗಳೂರು ಸುತ್ತಮುತ್ತ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಿದರೆ ಅಭಿವೃದ್ಧಿ ಮತ್ತೆ ಒಂದೇ ಭಾಗಕ್ಕೆ ಸೀಮಿತವಾಗುವ ಸಾಧ್ಯತೆ ಇದೆ. ಆದರೆ ಶಿರಾದಲ್ಲಿ ನಿರ್ಮಿಸಿದರೆ ಮಧ್ಯ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿದ್ದು, ರಾಜ್ಯದ ಸಮತೋಲಿತ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬೆಂಗಳೂರು ಕೇಂದ್ರಿತ ದೃಷ್ಟಿಕೋನದಿಂದ ಹೊರಬಂದು, ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಮಾನದಂಡವಾಗಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು ಎಂದು ವಿ. ಸೋಮಣ್ಣ ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 2:10 pm, Sat, 18 July 26
