ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapthy Vijay) ಹಾಗೂ ಅವರ ಪತ್ನಿ ಸಂಗೀತಾ ಅವರ ವಿಚ್ಛೇದನ (Divorce) ಪ್ರಕರಣವು ಇಡೀ ದಕ್ಷಿಣ ಭಾರತದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯವು ವಿಚಾರಣೆಯನ್ನು ಎರಡನೇ ಬಾರಿಗೆ ಮುಂದೂಡಿದೆ. ವಿಜಯ್ ಮತ್ತು ಸಂಗೀತಾ (Sangeeta Sornalingam) ಅವರ ವಿಚ್ಛೇದನ ಪ್ರಕರಣದ ಮುಂದಿನ ವಿಚಾರಣೆ ಜೂನ್ ತಿಂಗಳ ಮಧ್ಯಭಾಗದಲ್ಲಿ ನಡೆಯಲಿದೆ.
ಸೋಮವಾರ (ಏಪ್ರಿಲ್ 20) ನ್ಯಾಯಾಧೀಶರಾದ ಶಶಿಕಲಾ ಅವರ ಮುಂದೆ ಈ ಪ್ರಕರಣ ವಿಚಾರಣೆಗೆ ಬಂದಿತ್ತು. ಅಲ್ಪ ಸಮಯದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಪ್ರಕರಣವನ್ನು ಜೂನ್ 15ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಫೆಬ್ರವರಿ 26ರಂದು ಸಂಗೀತಾ ಅವರು ವಿಚ್ಛೇದನ ಕೋರಿ ಮೊದಲ ಬಾರಿ ಅರ್ಜಿ ಸಲ್ಲಿಸಿದ್ದರು. ಆನಂತರ ಪ್ರಕರಣವನ್ನು ಏಪ್ರಿಲ್ 20ಕ್ಕೆ ನಿಗದಿಪಡಿಸಲಾಗಿತ್ತು. ಈಗ ಎರಡನೇ ಬಾರಿ ಮುಂದೂಡಲ್ಪಟ್ಟಿರುವುದು ಕುತೂಹಲ ಮೂಡಿಸಿದೆ.
ಸಂಗೀತಾ ಅವರು ಸಲ್ಲಿಸಿರುವ ವಿಚ್ಛೇದನ ಅರ್ಜಿಯಲ್ಲಿ ನಟ ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಜಯ್ ಅವರು ಬೇರೊಬ್ಬ ನಟಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅವರು ದೂರಿದ್ದಾರೆ. ‘2021ರಲ್ಲಿ ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಸಂಬಂಧವಿರುವುದು ನನಗೆ ತಿಳಿಯಿತು. ಈ ನಂಬಿಕೆ ದ್ರೋಹದಿಂದ ನನಗೆ ತೀವ್ರ ಮಾನಸಿಕ ನೋವು ಉಂಟಾಗಿದೆ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
2021ರಿಂದ ವಿಜಯ್ ತಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಮತ್ತು ಭಾವನಾತ್ಮಕವಾಗಿ ದೂರವಾಗಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ವಿಜಯ್ ಮತ್ತು ಸಂಗೀತಾ 1999ರ ಆಗಸ್ಟ್ ತಿಂಗಳಲ್ಲಿ ವಿವಾಹವಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಶಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಳೆದ 25 ವರ್ಷಗಳಿಂದ ಅನ್ಯೋನ್ಯವಾಗಿದ್ದ ಈ ಜೋಡಿ ಈಗ ಬೇರ್ಪಡುತ್ತಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ.
ಇದನ್ನೂ ಓದಿ: ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ
ಜೂನ್ 15ರಂದು ನಡೆಯಲಿರುವ ವಿಚಾರಣೆಯು ಈ ಪ್ರಕರಣದಲ್ಲಿ ಬಹಳ ಮುಖ್ಯವಾಗಿದ್ದು, ನ್ಯಾಯಾಲಯವು ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ವಿಜಯ್ ಅವರು ಟಿವಿಕೆ ಪಕ್ಷದಿಂದ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. ಚುನಾವಣೆ ವೇಳೆಯೇ ಅವರ ಸಂಸಾರದ ಬಿರುಕು ಬಹಿರಂಗ ಆಗಿದ್ದು ಚರ್ಚೆಗೆ ಕಾರಣ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
