ಚಾಮರಾಜನಗರ, ಜೂನ್ 22: ಕಾಡಿನಲ್ಲಿ ಬೇಟೆಯಾಡುತ್ತಾ, ಗೆಡ್ಡೆ ಗೆಣಸು ತಿಂದು ಸ್ವಚ್ಛಂದವಾಗಿ ಬದುಕುತ್ತಿದ್ದ ಆದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಜಿಲ್ಲೆಯ (Chamarajanagar) ಮಲೆ ಮಹದೇಶ್ವರ ಬೆಟ್ಟದ ಕೂಗಳತೆ ದೂರದಲ್ಲಿರುವ ಆನೆ ದಿಂಬ ಎಂಬ ಸ್ಥಳದಲ್ಲಿ ಅವರಿಗೆ ಆಶ್ರಯ ಕಲ್ಪಿಸಲಾಯಿತು. ಆದರೆ, ಕಾಡಿನಿಂದ ನಾಡಿಗೆ ಬಂದ ಈ ಸೋಲಿಗ ಜನಾಂಗದ ಬದುಕು ಈಗ ಬೀದಿಗೆ ಬಿದ್ದಿದೆ. ದಶಕಗಳು ಕಳೆದರೂ ಇಲ್ಲಿನ ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳಾಗಲಿ, ಒಂದು ರೇಷನ್ ಕಾರ್ಡ್ (Ration Card) ಆಗಲಿ ಸಿಕ್ಕಿಲ್ಲ. ಕೂಲಿ ಕೆಲಸ ಸಿಕ್ಕರೆ ಮಾತ್ರ ಇವರ ಮನೆಯಲ್ಲಿ ಒಲೆ ಉರಿಯುತ್ತದೆ. ಇಲ್ಲದಿದ್ದರೆ ಹಸಿವಿನಿಂದ ಕಣ್ಣೀರು ಇಡುವುದೇ ಇವರ ದಿನಚರಿಯಾಗಿದೆ.
ಮುಖ್ಯಾಂಶಗಳು
- ಚಾಮರಾಜನಗರದ ಆನೆ ದಿಂಬ ಹಾಡಿಯ ಆದಿವಾಸಿಗಳಿಗೆ ದಶಕಗಳಿಂದ ಸಿಗದ ರೇಷನ್ ಕಾರ್ಡ್.
- ಪಡಿತರ ಚೀಟಿ ಇಲ್ಲದೆ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಿಂದ ಸೋಲಿಗರು ವಂಚಿತರಾಗಿದ್ದಾರೆ.
- ಕಚೇರಿಗಳಿಗೆ ಅಲೆದು ಸುಸ್ತಾಗಿರುವ ಆದಿವಾಸಿ ಕುಟುಂಬಗಳು ಹಸಿವಿನಿಂದ ತತ್ತರಿಸುವಂತಾಗಿದೆ ಎಂದು ವರದಿ.
ಅಧಿಕಾರಿಗಳ ನಿರ್ಲಕ್ಷ್ಯ
ತಮಗೆ ಪಡಿತರ ಚೀಟಿ ನೀಡುವಂತೆ ಬಡ ಆದಿವಾಸಿಗಳು ಕಳೆದ 10 ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳ ಕೈಕಾಲು ಹಿಡಿದು ಬೇಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಅರ್ಜಿ ಸಲ್ಲಿಸಿ ಇವರ ಚಪ್ಪಲಿ ಸವಿದಿದೆಯೇ ಹೊರತು, ಅಧಿಕಾರಿಗಳ ಕಲ್ಲೆದೆಯು ಕರಗಿಲ್ಲ. ಸೋಲಿಗ ಜನಾಂಗದವರೆಂದರೆ ಈ ಅಧಿಕಾರಿ ವರ್ಗಕ್ಕೆ ಯಾಕಿಷ್ಟು ನಿರ್ಲಕ್ಷ್ಯ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಧಿಕಾರಿಗಳ ಈ ಬೇಜವಾಬ್ದಾರಿತನ ಹಾಗೂ ಕಳ್ಳಾಟದ ಪರಿಣಾಮವಾಗಿ, ಇಂದಿಗೂ ಸಣ್ಣ ಗುಡಿಸಿಲುಗಳಲ್ಲಿ ವಾಸಿಸುತ್ತಿರುವ ಈ ಕುಟುಂಬಗಳು ಅನ್ನಕ್ಕಾಗಿ ಪರದಾಡುವಂತಾಗಿದೆ.
ಅನ್ನಭಾಗ್ಯ ಯೋಜನೆಯಿಂದ ವಂಚಿತರಾದ ಕಟ್ಟಕಡೆಯ ವರ್ಗ
ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎಂದು ಸರ್ಕಾರ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ. ಸಮಾಜದ ಕಟ್ಟಕಡೆಯ ವರ್ಗಕ್ಕೂ ಈ ಸೌಲಭ್ಯ ತಲುಪಬೇಕು ಎಂಬುದು ಸರ್ಕಾರದ ಆಶಯ. ಆದರೆ, ಆನೆ ದಿಂಬ ಹಾಡಿಯ ಆದಿವಾಸಿಗಳಿಗೆ ರೇಷನ್ ಕಾರ್ಡ್ ಇಲ್ಲದ ಕಾರಣ, ಅವರು ಈ ಯೋಜನೆಯಿಂದ ಸಂಪೂರ್ಣವಾಗಿ ವಂಚಿತರಾಗಿದ್ದಾರೆ. ಹಸಿವು ಮುಕ್ತ ರಾಜ್ಯದ ಭರವಸೆಗಳು ಈ ಹಾಡಿಯ ಜನರ ಪಾಲಿಗೆ ಕೇವಲ ಕನಸಾಗಿಯೇ ಉಳಿದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
