ದುಬೈನಲ್ಲಿ ‘ರಾಮಾಯಣ’ ಪ್ರೀಮಿಯರ್? ಯಶ್, ರಣಬೀರ್ ಚಿತ್ರತಂಡದಿಂದ ಬಿಗ್ ಪ್ಲಾನ್ – Kannada News | Ranbir Kapoor Yash Sai Pallavi Ramayana movie grand Dubai premiere plans revived

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಬಜೆಟ್ ಚಿತ್ರವಾಗಿ ಮೂಡಿಬರುತ್ತಿರುವ ‘ರಾಮಾಯಣ’ (Ramayana) ಸಿನಿಮಾ ಈಗ ಮತ್ತೊಂದು ಮಹತ್ತರ ಯೋಜನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ನಿತೇಶ್ ತಿವಾರಿ ನಿರ್ದೇಶನದ ಈ ದೃಶ್ಯ ವೈಭವದ ಚಿತ್ರಕ್ಕೆ ದುಬೈನಲ್ಲಿ ಅತ್ಯಂತ ಅದ್ಧೂರಿಯಾದ ಅಂತಾರಾಷ್ಟ್ರೀಯ ಪ್ರೀಮಿಯರ್ ಶೋ (Ramayana Premiere Show) ಆಯೋಜಿಸಲು ಚಿತ್ರತಂಡ ಮಾತುಕತೆ ಪುನರಾರಂಭಿಸಿದೆ ಎಂದು ‘ಮಿಡ್-ಡೇ’ ವರದಿ ಮಾಡಿದೆ. ಈ ಪ್ರೀಮಿಯರ್ ಶೋವನ್ನು ಅಕ್ಟೋಬರ್ 28ರಂದು ನಡೆಸಲು ಯೋಜಿಸಲಾಗುತ್ತಿದ್ದು, ಚಿತ್ರತಂಡದವರು ಇದಕ್ಕೆ ‘ಡೆಸರ್ಟ್ ಪ್ರೀಮಿಯರ್’ ಎಂಬ ಕೋಡ್ ನೇಮ್ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ, ನಿರ್ದೇಶಕ ನಿತೇಶ್ ತಿವಾರಿ ಮತ್ತು ಪ್ರಸಿದ್ಧ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಆರಂಭದಲ್ಲೇ ದುಬೈನಲ್ಲಿ ಚಿತ್ರದ ಪ್ರೀಮಿಯರ್ ನಡೆಸಲು ಉದ್ದೇಶಿಸಿದ್ದರು. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಮಿಡಲ್ ಈಸ್ಟ್ ಭಾಗದಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಈ ಯೋಜನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು. ಈಗ ಅಲ್ಲಿನ ಪರಿಸ್ಥಿತಿ ತಿಳಿಗೊಂಡಿರುವುದರಿಂದ, ಚಿತ್ರತಂಡವು ದುಬೈನಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಾಧ್ಯತೆಗಳ ಬಗ್ಗೆ ಮರುಪರಿಶೀಲನೆ ನಡೆಸುತ್ತಿದೆ.

‘ದೊಡ್ಡ ಪ್ರಮಾಣದ ಈವೆಂಟ್‌ಗಳನ್ನು ಆಯೋಜಿಸಲು ದುಬೈ ಸೂಕ್ತ ಜಾಗವಾಗಿದೆ. ಅಲ್ಲದೆ ಅಲ್ಲಿ ಅಪಾರ ಸಂಖ್ಯೆಯ ಭಾರತೀಯರಿದ್ದಾರೆ. ಹೀಗಾಗಿ ಚಿತ್ರತಂಡದ ಮೊದಲ ಆದ್ಯತೆ ದುಬೈ ಆಗಿದೆ’ ಎಂದು ಸಿನಿಮಾದ ಆಪ್ತ ಮೂಲವೊಂದು ತಿಳಿಸಿರುವುದಾಗಿ ವರದಿ ಆಗಿದೆ. ಒಂದು ವೇಳೆ ಈ ಪ್ರೀಮಿಯರ್ ಅಧಿಕೃತಗೊಂಡರೆ, ಚಿತ್ರದ ಮುಖ್ಯ ತಾರಾಗಣವಾದ ಬಾಲಿವುಡ್ ನಟ ರಣಬೀರ್ ಕಪೂರ್, ದಕ್ಷಿಣದ ಸ್ಟಾರ್ ನಟಿ ಸಾಯಿ ಪಲ್ಲವಿ ಹಾಗೂ ರಾವಣನ ಪಾತ್ರದಲ್ಲಿ ಅಬ್ಬರಿಸಲಿರುವ ‘ರಾಕಿಂಗ್ ಸ್ಟಾರ್’ ಯಶ್ ಈ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ‘ರಾಮಾಯಣ’, ‘ವಾರಣಾಸಿ’ ಚಿತ್ರಗಳ ಬಜೆಟ್ ಒಂದು ಗಿಮಿಕ್ ಎಂದ ಮನೋಜ್ ಬಾಜಪೇಯಿ

ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸಂಸ್ಥೆ ‘ಡಿಎನ್‌ಇಜಿ’ ಈ ಚಿತ್ರದ ದೃಶ್ಯ ವೈಭವವನ್ನು ರೂಪಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸದ್ಯಕ್ಕೆ ಚಿತ್ರತಂಡದಿಂದ ಈ ದುಬೈ ಪ್ರೀಮಿಯರ್ ಬಗ್ಗೆ ಅಧಿಕೃತ ಪ್ರಕಟಣೆ ಬಾಕಿ ಇದ್ದರೂ, ಈ ಸುದ್ದಿ ಮಾತ್ರ ದೊಡ್ಡ ಮಟ್ಟದಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *