ಮೈಲಾರ ಮಲ್ಲಣ್ಣ ದೇವಸ್ಥಾನದಲ್ಲಿ ಗ್ರೀನ್ ಮ್ಯಾಟ್ ಅಳವಡಿಕೆImage Credit source: tv9 kannada
ಬೀದರ್, ಏಪ್ರಿಲ್ 20: ಜಿಲ್ಲೆಯಲ್ಲಿ ಬಿಸಿಲಿನ (heat) ಕಾವು ದಿನದಿಂದ ದಿನಕ್ಕೆ ಏರುತ್ತಲಿದೆ. ಇದರಿಂದ ಹೆದರಿ ಜನರು ಮನೆಯಿಂದ ಹೊರಬರುತ್ತಿಲ್ಲ. ಜಿಲ್ಲೆಯಲ್ಲಿ ಪ್ರತಿದಿನ 36ರಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಇನ್ನು ದೇವಸ್ಥಾನಕ್ಕೂ ಭಕ್ತರು ಹೋಗಲು ಹಿಂದೆಟು ಹಾಕುತ್ತಿದ್ದಾರೆ. ಹೀಗಾಗಿ ಭಕ್ತರಿಗೆ ನೆರಳು ಒದಗಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ಗ್ರೀನ್ ಮ್ಯಾಟ್ ಅಳವಡಿಸಲಾಗಿದೆ. ಆ ಮೂಲಕ ಭಕ್ತರ ಖುಷಿ ಹೆಚ್ಚಿಸುವಂತೆ ಮಾಡಿದೆ.
ಬಿಸಿಲ ತಾಪಕ್ಕೆ ಇಳಿಕೆಯಾದ ಭಕ್ತರ ಸಂಖ್ಯೆ
ಬಿದರ್ ಜಿಲ್ಲೆಯಲ್ಲಿ ಬರುವ ಐತಿಹಾಸಿ ಪುರಾತನ ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ತೆಲಂಗಾಣ-ಮಹಾರಾಷ್ಟ್ರ, ಕರ್ನಾಟದ ವಿವಿಧೆಡೆಯಿಂದ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆದು ಪುಣಿತರಾಗುತ್ತಾರೆ. ಆದರೆ ಈಗ ಕಳೆದೆರಡು ವಾರದಿಂದ ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರುತ್ತಲೇ ಇದೆ.
ಇದನ್ನೂ ಓದಿ: ರಾಜ್ಯದ 5 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ: ಬಿಸಿಲಿನ ಝಳದಿಂದ ಪಾರಾಗಲು ಜನರ ನಾನಾ ಕಸರತ್ತು
ಹೀಗಾಗಿ ಜಿಲ್ಲೆಯಲ್ಲಿರುವ ದೇವಸ್ಥಾನಕ್ಕೆ ಭಕ್ತರು ಬರುವುದು ಕಡಿಮೆಯಾಗುತ್ತಿದಂತೆ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದ ಆವರಣದಲ್ಲಿ ಗ್ರೀನ್ ಮ್ಯಾಟ್ ಅಳವಡಿಸಿದ್ದಾರೆ. ಆ ಮೂಲಕ ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯಕ್ಕೆ ಭಕ್ತರು ಸಂಸತ ವ್ಯಕ್ತಪಡಿಸಿದ್ದಾರೆ.
ಗ್ರೀನ್ ಮ್ಯಾಟ್ ಆಸರೆ
ಇನ್ನು ಬಿಸಿಲಿನ ಝಳ ಜಾಸ್ತಿಯಿರುವ ಕಾರಣ ಇಲ್ಲಿಗೆ ಬರುವ ಭಕ್ತರು ದೇವಸ್ಥಾನವನ್ನ ಪ್ರದಕ್ಷಿಣೆ ಹಾಕಲು ಸಾಧ್ಯವಾಗುತ್ತಿರಲಿಲ್ಲ, ಅದಕ್ಕೆ ಕಾರಣವೆಂದರೆ ದೇವಸ್ಥಾನ ಆವರಣದಲ್ಲಿ ಹಾಕಿದ ಕಲ್ಲುಗಳು ಕಾದು ಕೆಂಡವಾಗುತ್ತಿದ್ದವು. ದೇವಸ್ಥಾನವನ್ನ ಒಂದು ಸುತ್ತು ಕೂಡ ಪ್ರದಕ್ಷಿಣೆ ಹಾಕಲು ಸಾಧ್ಯವಾಗದ ಭಕ್ತರು ದೂರಿನಿಂದಲೇ ನಮಸ್ಕಾರ ಮಾಡಿ ಹೋಗುತ್ತಿದ್ದರು. ಹೀಗಾಗಿ ಮುಜರಾಯಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ದೇವಸ್ಥಾನದ ಆವರಣ ತುಂಬಾ ಗ್ರೀನ್ ಮ್ಯಾಟ್ ಹಾಕಿದ್ದಾರೆ.
ಮೈಲಾರ ಮಲ್ಲಣ್ಣ ದೇವಸ್ಥಾನಕ್ಕಿದೆ ಐತಿಹಾಸಿಕ ಹಿನ್ನೆಲೆ
ಮೈಲಾರ ಮಲ್ಲಣ್ಣ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ರಾಕ್ಷಸರನ್ನು ಸಂಹಾರ ಮಾಡಲು ಮಲ್ಲಣ್ಣನ ರೂಪದಲ್ಲಿ ಶಿವ 11ನೇ ರೂಪ ತಾಳಿ ಮೈಲಾರದಲ್ಲಿ ನೆಲೆಸಿದ ಎನ್ನುವ ಪ್ರತೀತಿ ಇದೆ. ಜನರಿಗೆ ಎಲ್ಲಿಲ್ಲದ ತೊಂದರೆ ಕೊಡುತ್ತಿದ್ದ ಮಣಿಕಂಠ ಹಾಗೂ ಮಲ್ಲ ಎನ್ನುವ ಅಸುರರನ್ನು ಸಂಹರಿಸಲು ಮಾರ್ತಾಂಡ ಭೈರವನ ರೂಪ ತಳೆದ ಶಿವ (ಮಲ್ಲಣ್ಣ) ನಂತರ ಇಲ್ಲಿ ನೆಲೆಸಿದ ಎನ್ನುವ ಉಲ್ಲೇಖ ಪುರಾಣಗಳಲ್ಲಿ ಇದೆ.
ಇದನ್ನೂ ಓದಿ: ಬಲಮುರಿ-ಎಡಮುರಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ ಮಂಡ್ಯ ಜಿಲ್ಲಾಡಳಿತ: ಕಾರಣ ಇಲ್ಲಿದೆ
ದ್ವಾಪರ ಯುಗದಲ್ಲಿ ಈ ಘಟನೆ ನಡೆದಿದೆ ಎಂದು ಮರಾಠಿಯ ಮಲ್ಹಾರಿ ಮಹಾತ್ಮೆ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ತಿರುಪತಿಯ ತಿಮ್ಮಪ್ಪನಿಗೆ ಮಲ್ಲಣ್ಣ ದೇವರು ಸಾಲ ನೀಡಿದ್ದರು. ಏಳು ಕೋಟಿ ರೂ ಸಾಲ ಪಡೆದುಕೊಂಡಿದ್ದ ತಿಮ್ಮಪ್ಪ ಅದನ್ನು ಮರಳಿ ನೀಡಲಿಲ್ಲ. ಹೀಗಾಗಿ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಏಳು ಕೋಟಿ, ಏಳು ಕೋಟಿ ಎನ್ನುವ ಪ್ರತೀತಿ ಇದೆ ಎಂದು ಅರ್ಚಕರಾದ ಆಕಾಸ್ ಹಿರಿವಗ್ಗೆ ಮಾಹಿತಿ ನೀಡಿದ್ದಾರೆ.
ಸದ್ಯ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ನೆರಳು, ತಂಪು ನೀರಿನ ವ್ಯವಸ್ಥೆ ಮಾಡಿದ್ದಾರೆ. ಹೀಗಾಗಿ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೆ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದು, ಇದು ಭಕ್ತರ ಖುಷಿಗೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 3:14 pm, Mon, 20 April 26