ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಮತ್ತು ಅವರ ಭಾವಿ ಪತ್ನಿ, ನಟಿ ಆಕೃತಿ ಅಗರ್ವಾಲ್ ನಡುವೆ ಎಲ್ಲವೂ ಸರಿಯಿಲ್ಲವಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಆಕೃತಿ ಹಂಚಿಕೊಂಡ ಒಂದು ಪೋಸ್ಟ್. ಮಾರ್ಚ್ 2026 ರಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಕೇವಲ ನಾಲ್ಕೇ ತಿಂಗಳಲ್ಲಿ ಬೇರ್ಪಡುವ ಹಾದಿ ಹಿಡಿದಿದೆಯೇ ಎಂಬ ಅನುಮಾನಗಳನ್ನು ಈ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು ಹುಟ್ಟುಹಾಕಿವೆ.
‘ನನಗೆ ಹಲವು ಬಾರಿ ಮೋಸವಾಗಿದೆ!
ನಟಿ ಮತ್ತು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಆಕೃತಿ ಅಗರ್ವಾಲ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ನನಗೆ ತುಂಬಾ ಬಾರಿ ಮೋಸ ಮಾಡಲಾಗಿದೆ, ಆದರೂ ನಾನು ಎಂದಿಗೂ ಒಂದು ಮಾತನ್ನೂ ಆಡಲಿಲ್ಲ. ಜೀವನದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಮೇಲೂ ಹೀಗಾಗುತ್ತದೆ ಎಂಬುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಬರೆದುಕೊಂಡಿದ್ದರು.
ಪ್ರತಿಯೊಂದು ವದಂತಿಯೂ ನಿಜ:
ಈ ಪೋಸ್ಟ್ನ ಮುಂದುವರಿದ ಭಾಗವಾಗಿ, “ಎಲ್ಲವೂ ನಿಜ, ಸೋಶಿಯಲ್ ಮೀಡಿಯಾದಲ್ಲಿ ಆತನ ಬಗ್ಗೆ ನೀವು ಕಾಣುತ್ತಿರುವ ಪ್ರತಿಯೊಂದು ವದಂತಿಯೂ 100% ನಿಜ” ಎಂದು ಆಕೃತಿ ಉಲ್ಲೇಖಿಸಿದ್ದರು. ಈ ಪೋಸ್ಟ್‌ನಲ್ಲಿ ಅವರು ನೇರವಾಗಿ ಪೃಥ್ವಿ ಶಾ ಹೆಸರನ್ನು ಬಳಸದಿದ್ದರೂ, ‘ಆತ’ ಎಂದು ಸಂಬೋಧಿಸಿರುವುದರಿಂದ ನೆಟ್ಟಿಗರು ಇದು ಪೃಥ್ವಿ ಶಾ ಅವರಿಗೇ ಹೇಳಿದ್ದು ಎಂದು ಬಲವಾಗಿ ನಂಬಿದ್ದಾರೆ.
ಪೋಸ್ಟ್ ಡಿಲೀಟ್!
ಈ ಪೋಸ್ಟ್ ಸ್ಕ್ರೀನ್‌ಶಾಟ್‌ಗಳು ‘ಎಕ್ಸ್’ (ಟ್ವಿಟರ್) ಹಾಗೂ ಇತರೆ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಭಾರಿ ವೈರಲ್ ಆಗುತ್ತಿದ್ದಂತೆಯೇ ಆಕೃತಿ ಆ ಸ್ಟೋರಿಯನ್ನು ಡಿಲೀಟ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಂದು ಹೊಸ ಸ್ಟೋರಿ ಹಾಕಿರುವ ಅವರು, “ಅನೇಕರು ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ! ಎಂದು ಬರೆದುಕೊಳ್ಳುವ ಮೂಲಕ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಹೊಸ ವಿವಾದ… ಟ್ರಂಪ್ ಫೋನ್ ಕರೆ ಬೆನ್ನಲ್ಲೇ ಅಮೆರಿಕ ಆಟಗಾರನ ನಿಷೇಧ ರದ್ದು!
ಇದೀಗ ಇಬ್ಬರ ನಡುವಣ ಬ್ರೇಕಪ್ ಮತ್ತು ವಂಚನೆಯ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದಾಗ್ಯೂ ಪೃಥ್ವಿ ಶಾ ಆಗಲಿ ಅಥವಾ ಆಕೃತಿ ಅಗರ್ವಾಲ್ ಆಗಲಿ ಈವರೆಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಅಲ್ಲದೆ ಇಬ್ಬರೂ ಮೌನಕ್ಕೆ ಶರಣಾಗಿದ್ದಾರೆ.
