ನಟಿ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು; ಚಿತ್ರರಂಗ ತೊರೆಯಲು ಅಸಲಿ ಕಾರಣ ಇಲ್ಲಿದೆ – Kannada News | Twisha Sharma Dowry Death Case co star Dheekshith Shetty reveals why she quit acting

ಮಾಡೆಲ್ ಹಾಗೂ ನಟಿ ಟ್ವಿಶಾ ಶರ್ಮಾ ಅವರ ನಿಗೂಢ ಸಾವು (Twisha Sharma Death) ಸದ್ಯ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಮಧ್ಯಪ್ರದೇಶದ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ತಮ್ಮ ಪತಿ ಮನೆಯಲ್ಲಿ ಮೇ 12ರಂದು ಟ್ವಿಶಾ ಶರ್ಮಾ ಶವವಾಗಿ ಪತ್ತೆಯಾಗಿದ್ದರು. ವರದಕ್ಷಿಣೆ ಕಿರುಕುಳ ಹಾಗೂ ಪತಿಯ ಮನೆಯವರ ದೈಹಿಕ-ಮಾನಸಿಕ ಹಿಂಸೆಯೇ ಅವರ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ, ಟ್ವಿಶಾ ಶರ್ಮಾ (Twisha Sharma) ಅವರು ಸಿನಿಮಾರಂಗವನ್ನು ತೊರೆದು ಮತ್ತು ಕಾರ್ಪೊರೇಟ್ ವಲಯಕ್ಕೆ ಕಾಲಿಡಲು ಅಸಲಿ ಕಾರಣ ಏನೆಂಬುದು ಈಗ ತಿಳಿದುಬಂದಿದೆ.

ತೆಲುಗಿನ ‘ಮುಗ್ಗುರು ಮೊನಗಾಳ್ಳು’ (2021) ಚಿತ್ರದಲ್ಲಿ ಟ್ವಿಶಾ ಶರ್ಮಾ ಜೊತೆ ನಟಿಸಿದ್ದ ಕನ್ನಡದ ಖ್ಯಾತ ನಟ ದೀಕ್ಷಿತ್ ಶೆಟ್ಟಿ ಅವರು ಈ ದುರಂತ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ದೀಕ್ಷಿತ್ ಶೆಟ್ಟಿ, ‘ಇದು ಅತ್ಯಂತ ಆಘಾತಕಾರಿ ಸುದ್ದಿ. ಅವರು ಯಾವಾಗಲೂ ಕೆಲಸದ ಬಗ್ಗೆ ಅಪಾರ ಬದ್ಧತೆ ಮತ್ತು ಕಠಿಣ ಪರಿಶ್ರಮ ಹೊಂದಿದ್ದ ಹುಡುಗಿ. ತುಂಬ ಉತ್ಸಾಹದಿಂದ ಬದುಕುತ್ತಿದ್ದ ಅವರು ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ವಿಶಾ ಸಿನಿಮಾರಂಗ ತೊರೆದ ಬಗ್ಗೆ ಮಾತನಾಡಿದ ದೀಕ್ಷಿತ್, ‘ನಾನು ಸುಮಾರು ನಾಲ್ಕು ವರ್ಷಗಳ ಹಿಂದೆ ಅವರೊಂದಿಗೆ ಮಾತನಾಡಿದ್ದೆ. ಅವರಿಗೆ ಮದುವೆಯಾಗಿದ್ದ ವಿಷಯವೇ ನನಗೆ ಗೊತ್ತಿರಲಿಲ್ಲ. ನಾವು ಆ ಒಂದು ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು, ಆಮೇಲೆ ಅವರು ತಮ್ಮ ಸ್ವಂತ ಊರಿಗೆ ಮರಳಿದರು. ತಮಗೆ ನಟನೆಯಲ್ಲಿ ತಾವು ಅಂದುಕೊಂಡಷ್ಟು ತೃಪ್ತಿ ಸಿಗುತ್ತಿಲ್ಲ, ಹಾಗಾಗಿ ಸ್ನಾತಕೋತ್ತರ ಪದವಿ ಮಾಡಬಯಸುವುದಾಗಿ ಹೇಳಿದ್ದಳು. ಅವರ ಸಹೋದರ ಸೇನೆಯಲ್ಲಿದ್ದಾರೆ. ಚಿತ್ರರಂಗ ತಮಗೆ ಒಗ್ಗುತ್ತಿಲ್ಲ ಎಂದು ಅರಿತುಕೊಂಡ ಅವರು, ಊರಿಗೆ ವಾಪಸ್ ಹೋಗಿ ಕುಟುಂಬದೊಂದಿಗೆ ನೆಲೆಸಲು ಬಯಸಿದ್ದರು’ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಅದೇ ರೀತಿ ‘ಮುಗ್ಗುರು ಮೊನಗಾಳ್ಳು’ ಚಿತ್ರದ ನಿರ್ದೇಶಕ ಅಭಿಲಾಷ್ ರೆಡ್ಡಿ ಕೂಡ ಸಂತಾಪ ಸೂಚಿಸಿದ್ದು, ‘ಚಿತ್ರದ ಸ್ಕ್ರೀನಿಂಗ್ ದಿನ ನಾನು ಅವರ ಪೋಷಕರನ್ನು ಭೇಟಿಯಾಗಿದ್ದೆ, ಅವರು ತುಂಬಾ ಒಳ್ಳೆಯ ವ್ಯಕ್ತಿಗಳು. ಅವರ ಅಗಲಿಕೆಯ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ’ ಎಂದಿದ್ದಾರೆ. ಟ್ವಿಶಾ ಶರ್ಮಾ ಅವರು ಮಾಡೆಲಿಂಗ್ ದಿನಗಳಲ್ಲಿ ‘ಮಿಸ್ ಪುಣೆ’ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದರು.

ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಗಾಯಕಿ ಇಂದರ್ ಕೌರ್ ಅಪಹರಣ; 6 ದಿನದ ಬಳಿಕ ಹೆಣವಾಗಿ ಪತ್ತೆ

ಟ್ವಿಶಾ ಶರ್ಮಾ ಅವರು 2024ರಲ್ಲಿ ಡೇಟಿಂಗ್ ಆ್ಯಪ್ ಮೂಲಕ ಸಮರ್ಥ್ ಸಿಂಗ್ ಎಂಬಾತನನ್ನು ಪರಿಚಯ ಮಾಡಿಕೊಂಡು, ಡಿಸೆಂಬರ್ 2025ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇತ್ತ ಪತಿ ಸಮರ್ಥ್ ಸಿಂಗ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು, ಟ್ವಿಶಾ ಮಾದಕ ವ್ಯಸನಿಯಾಗಿದ್ದರು ಮತ್ತು ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರತಿ-ಆರೋಪ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *