ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan) ಅವರ ಸಮಯಪ್ರಜ್ಞೆ ಮತ್ತು ಹಾಸ್ಯ ಪ್ರಜ್ಞೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತು. ಇತ್ತೀಚೆಗೆ ಮಂಗಳೂರಿನಲ್ಲಿ (Mangalore) ನಡೆದ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ಅನಿರೀಕ್ಷಿತವಾಗಿ ವ್ಯಕ್ತಪಡಿಸಿದ ಪ್ರೀತಿಯ ಮಾತು, ಇಡೀ ಸಂಜೆಯ ಅತ್ಯಂತ ತಮಾಷೆಯ ಕ್ಷಣವಾಗಿ ಬದಲಾಯಿತು. ಆ ಅಭಿಮಾನಿ, ‘ನಾನು ನನ್ನ ಗಂಡನಿಗಿಂತಲೂ ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತೇನೆ’ ಎಂದು ವೇದಿಕೆ ಮೇಲಿದ್ದ ಶಾರುಖ್ ಅವರಿಗೆ ಹೇಳಿದರು. ಇದಕ್ಕೆ ಕಿಂಚಿತ್ತೂ ತಡಮಾಡದ ಶಾರುಖ್, ‘ಇದನ್ನೆಲ್ಲಾ ನೀವು ನನಗೆ ಖಾಸಗಿಯಾಗಿ ಹೇಳಬೇಕಿತ್ತು’ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಇಡೀ ಸಭಿಕರು ನಗೆಗಡಲಲ್ಲಿ ತೇಲುವಂತೆ ಮಾಡಿದರು.
ರಿಯಲ್ ಎಸ್ಟೇಟ್ ಕಂಪನಿಯೊಂದು ಮಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾರುಖ್ ಖಾನ್ ಅವರು ಕರ್ನಾಟಕದ ಕರಾವಳಿ ನಗರಿಗೆ ಆಗಮಿಸಿದ್ದರು. ತಮ್ಮ ಸೂಪರ್ ಹಿಟ್ ಹಾಡುಗಳಿಗೆ ಭರ್ಜರಿ ಹೆಜ್ಜೆ ಹಾಕಿದ ಕಿಂಗ್ ಖಾನ್, ನೆರೆದಿದ್ದ ಪ್ರೇಕ್ಷಕರೊಂದಿಗೆ ಸಖತ್ ಆಗಿ ಸಂವಾದ ನಡೆಸಿದರು. ಆ ಸಂದರ್ಭದ ವಿಡಿಯೋಗಳು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಕಾರ್ಯಕ್ರಮದ ಹಲವು ವಿಡಿಯೋಗಳು ಹರಿದಾಡುತ್ತಿವೆ. ಅದರಲ್ಲಿ ಮಹಿಳಾ ಅಭಿಮಾನಿಯೊಬ್ಬರು ತಮಗಿರುವ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದಾಗ, ಶಾರುಖ್ ಖಾನ್ ತಮ್ಮದೇ ಆದ ಸಿಗ್ನೇಚರ್ ಸ್ಟೈಲ್‌ನಲ್ಲಿ ನಗುತ್ತಾ, ‘ಯೇ ಸಬ್ ಅಕೇಲೆ ಮೇ ಬತಾನಾ ಚಾಹಿಯೇ ನಾ (ಇದೆಲ್ಲವನ್ನೂ ರಹಸ್ಯವಾಗಿ ಒಂಟಿಯಾಗಿ ಇದ್ದಾಗ ಹೇಳಬೇಕಿತ್ತು)’ ಎಂದು ಹಿಂದಿಯಲ್ಲಿ ಕಾಲೆಳೆದರು.
ನಂತರ ಗಂಭೀರವಾಗಿ ಮಾತನಾಡಿದ ಅವರು, ‘ಇದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಎಂದು ನನಗೆ ಗೊತ್ತು. ನಿಮ್ಮ ಭಾವನೆಗಳು ನನಗೆ ಅರ್ಥವಾಗುತ್ತವೆ. ನಿಮ್ಮ ಪತಿಗೂ ಇದು ಖಂಡಿತ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಿಮ್ಮ ಪತಿ ಹಾಗೂ ನಿಮ್ಮ ಇಡೀ ಕುಟುಂಬಕ್ಕೆ ನನ್ನ ಪ್ರೀತಿ. ತುಂಬಾ ಧನ್ಯವಾದಗಳು’ ಎಂದು ಅಭಿಮಾನಿಯ ಗೌರವವನ್ನು ಹೆಚ್ಚಿಸಿದರು.
ಇದನ್ನೂ ಓದಿ: ಮಂಗಳೂರಿಗೆ ಬಂದ ಶಾರುಖ್ ಖಾನ್, ಬಾದ್ಶಾನ ನೋಡಲು ಮುಗಿಬಿದ್ದ ಜನ
ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ‘ನಮಸ್ಕಾರ’ ಎಂದು ಮಾತು ಆರಂಭಿಸಿದ ಶಾರುಖ್, ಕರಾವಳಿ ಜನರ ಪ್ರೀತಿಗೆ ಮನಸೋತರು. ‘ಧನ್ಯವಾದಗಳು ಮಂಗಳೂರು! ನಾನು ಇಲ್ಲಿಗೆ ಬರುವಾಗ ಯಾವ ರೀತಿಯ ಪ್ರತಿಕ್ರಿಯೆ ಸಿಗಬಹುದು ಎಂದು ತಿಳಿದಿರಲಿಲ್ಲ. ಆದರೆ ಏರ್‌ಪೋರ್ಟ್‌ನಿಂದ ಹಿಡಿದು ಇಲ್ಲಿಯವರೆಗೆ ನೀವು ತೋರಿದ ಪ್ರೀತಿ, ಉತ್ಸಾಹ ಮತ್ತು ಒಳ್ಳೆಯತನ ನಿಜಕ್ಕೂ ಅದ್ಭುತವಾಗಿತ್ತು’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
