ಟಾಲಿವುಡ್ ನಟಿ ಸಮಂತಾ ಅವರ ಕಂಬ್ಯಾಕ್ ಭರ್ಜರಿಯಾಗಿ ನಡೆದಿದೆ. ಅವರ ನಿರ್ಮಾಣ ಹಾಗೂ ನಟನೆಯ ‘ಮಾ ಇಂಟಿ ಬಂಗಾರಂ’ ಚಿತ್ರವು (Maa Inti Bangaram) ಜೂನ್ 19 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆಯಾದ 4 ದಿನಗಳಲ್ಲಿ ಈ ಸಿನಿಮಾ ವಿಶ್ವಾದ್ಯಂತ ಒಟ್ಟು 46.04 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದ ಪ್ರಚಾರದ ವೇಳೆ ಸಮಂತಾ ಬೇಬಿ ಬಂಪ್ ಫೋಟೋಗಳು ವೈರಲ್ ಆಗಿವೆ. ಈ ವೇಳೆ ಸಮಂತಾ ಈ ಹಿಂದೆ ಮಾಡಿದ್ದ ಕಾಮೆಂಟ್‌ಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿವೆ.
ಸಮಂತಾ ತಮಗೆ ಹುಟ್ಟುವ ಮಕ್ಕಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ‘ನನ್ನ ಮಗುವೇ ನನ್ನ ಪ್ರಪಂಚ. ಕೆಲಸ ಮಾಡುವ ಮತ್ತು ಮಕ್ಕಳನ್ನು ಹಾಗೂ ಮನೆಯ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಮಹಿಳೆಯರ ಬಗ್ಗೆ ನನಗೆ ಅಪಾರ ಗೌರವವಿದೆ. ನನ್ನ ಬಾಲ್ಯದಲ್ಲಿ ನಾನು ಬಹಳಷ್ಟು ಕಷ್ಟಗಳನ್ನು ಎದುರಿಸಿದ್ದೆ. ಅಂತಹ ಬಾಲ್ಯವನ್ನು ಕಳೆದವರೆಲ್ಲರೂ ತಮ್ಮ ಮಕ್ಕಳಿಗೆ ಐಷಾರಾಮಿ ಜೀವನವನ್ನು ನೀಡಲು ಬಯಸುತ್ತಾರೆ. ಈಗ ನಾನು ಅದನ್ನೇ ನಿರ್ಧರಿಸಿದ್ದೇನೆ’ ಎಂದು ಸಮಂತಾ ಹೇಳಿದ್ದರು.
‘ನನಗೆ ಮಕ್ಕಳಾದ ನಂತರ, ನಾನು ಅವರನ್ನು ಕೆಲವು ವರ್ಷಗಳ ಕಾಲ ಎಲ್ಲೂ ಬಿಟ್ಟು ಹೋಗುವುದಿಲ್ಲ. ನಾನು ಅವರನ್ನು ನನ್ನ ಎಲ್ಲವೂ ಎಂದು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದರು. ಸಮಂತಾ ಅವರ ಈ ಹಳೆಯ ಮಾತುಗಳು ಈಗ ವೈರಲ್ ಆಗುತ್ತಿದೆ. ಸಮಂತಾ-ರಾಜ್ ಶೀಘ್ರದಲ್ಲೇ ಸಿಹಿ ಸುದ್ದಿ ಘೋಷಿಸಲಿ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಗು ಜನಿಸಿದ ಬಳಿಕ ಅವರು ಸಿನಿಮಾ ರಂಗದಿಂದ ದೂರ ಇರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಬಾಕ್ಸ್ ಆಫೀಸ್‌ನಲ್ಲಿ ‘ಮಾ ಇಂಟಿ ಬಂಗಾರಂ’ ಹಾಗೂ ‘ಕಾಕ್‌ಟೇಲ್ 2’ ಚಿತ್ರಗಳ ಗಳಿಕೆ ಎಷ್ಟು?
ಇನ್ನು ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದರೆ, ‘ಮಾ ಇಂಟಿ ಬಂಗಾರಂ’ ನಾಲ್ಕನೇ ದಿನ ಭಾರತದಲ್ಲಿ 4.10 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದ್ದು, ದೇಶದ ಒಟ್ಟು ಗ್ರಾಸ್ ಕಲೆಕ್ಷನ್ 31.44 ಕೋಟಿ ರೂಪಾಯಿ ತಲುಪಿದೆ. ಇನ್ನು ವಿದೇಶಗಳಲ್ಲಿ 4ನೇ ದಿನ 1.00 ಕೋಟಿ ರೂಪಾಯಿ ಗಳಿಸಿದ್ದು, ಒಟ್ಟು ಓವರ್‌ಸೀಸ್ ಕಲೆಕ್ಷನ್ 14.60 ಕೋಟಿ ರೂಪಾಯಿಆಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ದಿಗಂತ್, ಶ್ರೀಮುಖಿ ಮತ್ತು ಗೌತಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
