ಬಿಎಂಟಿಸಿ ಪ್ರಯಾಣಿಕರಿಗೆ ಬೆಲೆ ಏರಿಕೆ ಬರೆ: ದೀರ್ಘ ಪ್ರಯಾಣದ ಬಸ್ ಪಾಸ್ ದರ ಇಂದಿನಿಂದ ದುಬಾರಿ – Kannada News | BMTC Bus pass price Hike: Introduces Extended Area Pass For Rs 1500, Clarifies No Hike In Regular Monthly Bus Pass

ಬಿಎಂಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ)Image Credit source: tv9

ಬೆಂಗಳೂರು, ಜೂನ್ 23: ಬಿಎಂಟಿಸಿ ಬಸ್​ಗಳ (BMTC Buses) ಕಾರ್ಯವ್ಯಾಪ್ತಿ ವಿಸ್ತರಿಸಲ್ಪಟ್ಟಿರುವುದರಿಂದ ದೀರ್ಘ ಪ್ರಯಾಣದ ಬಸ್ ಪಾಸ್ ದರವನ್ನು 1200 ರೂ.ನಿಂದ 1500 ರೂ.ಗೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜೂನ್ 23) ಜಾರಿಗೆ ಬರುತ್ತಿದೆ. ಆದರೆ, ಸಾಮಾನ್ಯ ಮಾಸಿಕ ಬಸ್ ಪಾಸಿನ ದರ 1200 ರೂ. ಮುಂದುವರಿಯಲಿದೆ. ಬೆಂಗಳೂರಿನ ಹೊರವಲಯದ ಜಿಲ್ಲೆ ಹಾಗೂ ತಾಲೂಕುಗಳಿಗೆ ಪ್ರಯಾಣಿಸುವವರಿಗಾಗಿ ‘ವಿಸ್ತಾರ ಮಾಸಿಕ ಪಾಸ್ (Extended Area Pass)’ ಪರಿಚಯಿಸಲಾಗುತ್ತಿದ್ದು, ಅದಕ್ಕೆ ದರ 1500 ರೂ. ನಿಗದಿಪಡಿಸಲಾಗಿದೆ. ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿರುವ ಬೆನ್ನಲ್ಲೇ ಈ ದರ ಏರಿಕೆ ಮಾಡಿರುವುದು ಪ್ರಯಾಣಿಕರಲ್ಲಿ ಗೊಂದಲ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

ಮುಖ್ಯಾಂಶಗಳು

  • ಸಾಮಾನ್ಯ ಮಾಸಿಕ ಪಾಸಿನ ದರ 1200 ರೂ. ಯಥಾಸ್ಥಿತಿ.
  • ದೂರದ ಊರುಗಳ ಪ್ರಯಾಣಕ್ಕೆ 1500 ರೂ. ವಿಸ್ತಾರ ಪಾಸ್.
  • ಎಸಿ ಬಸ್ ಪಾಸ್ ದರ 2500 ರೂ.ಗೆ ಏರಿಕೆ ಸಂಭವ.

ಕಾರ್ಯಾಚರಣೆ ವ್ಯಾಪ್ತಿ ಹೆಚ್ಚಳವೇ ಕಾರಣ

ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಪ್ರಭಾಕರ್ ರೆಡ್ಡಿ ಅವರ ಪ್ರಕಾರ, ಈ ಹಿಂದೆ ಬೆಂಗಳೂರು ನಗರ ಕೇಂದ್ರದಿಂದ ಕೇವಲ 40 ರಿಂದ 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ಬಸ್ಸುಗಳು, ಈಗ ಸರ್ಕಾರದ ಆದೇಶದಂತೆ 65 ರಿಂದ 70 ಕಿಲೋಮೀಟರ್ ದೂರದ ಕನಕಪುರ, ರಾಮನಗರ, ಚನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ ಮತ್ತು ಮಾಲೂರು ವರೆಗೂ ಸಂಚಾರ ವಿಸ್ತರಿಸಿವೆ. ಈ ವಿಸ್ತರಿತ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ 1500 ರೂಪಾಯಿಯ ವಿಸ್ತಾರ ಮಾಸಿಕ ಪಾಸ್ ನೀಡಲಾಗುತ್ತಿದೆ. ನಗರದ ಒಳಗಡೆ ಪ್ರಯಾಣಿಸುವವರಿಗೆ ಹಳೆಯ 1200 ರೂಪಾಯಿಯ ಪಾಸುಗಳೇ ಸಿಗಲಿವೆ.

ಎಸಿ ಬಸ್ ಪಾಸ್ ದರವೂ ಏರಿಕೆ ಸಾಧ್ಯತೆ

ಇದೇ ವೇಳೆ ಬಿಎಂಟಿಸಿಯ ವಜ್ರ (AC) ಬಸ್ಸುಗಳ ಮಾಸಿಕ ಪಾಸ್ ದರವನ್ನು ಸಹ ಹೆಚ್ಚಿಸಲು ನಿಗಮ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಸದ್ಯ 2000 ರೂಪಾಯಿ ಇರುವ ಎಸಿ ಬಸ್ ತಿಂಗಳ ಪಾಸನ್ನು 2500 ರೂಪಾಯಿಗೆ ಏರಿಕೆ ಮಾಡಲು ಪ್ಲಾನ್ ಮಾಡಲಾಗುತ್ತಿದೆ. ಒಂದು ಕಡೆ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ನೀಡಲಾಗುತ್ತಿದ್ದು, ಸಂಸ್ಥೆಯನ್ನು ಆರ್ಥಿಕ ನಷ್ಟದಿಂದ ಬಚಾವ್ ಮಾಡಲು ಪುರುಷ ಸಾರ್ವಜನಿಕರ ಮೇಲೆ ಪರೋಕ್ಷವಾಗಿ ಹೊರೆ ಹೊರಿಸಲಾಗುತ್ತಿದೆ ಎಂದು ಬಿಎಂಟಿಸಿ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *