ನಾನು ಹೇಳಿದ್ದು ಹಂಗಲ್ಲ, ಹಿಂಗೆ: ಎಸ್​. ಬದರಿನಾಥ್ ಸ್ಪಷ್ಟನೆ! – Kannada News | S badrinath clarification about krunal pandya commentary

IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ವೇಳೆ ತಮಿಳು ಕಾಮೆಂಟರಿಯಲ್ಲಿ ಮಾಜಿ ಕ್ರಿಕೆಟಿಗ ಎಸ್. ಬದರಿನಾಥ್ ಅವರು ಕೃನಾಲ್ ಪಾಂಡ್ಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವಿವಾದ ತಾರಕ್ಕೇರುತ್ತಿದ್ದಂತೆ ಬದರಿನಾಥ್ ಅವರು ತಮ್ಮ ಮಾತಿನ ಹಿಂದಿನ ಅಸಲಿ ಉದ್ದೇಶವನ್ನು ವಿವರಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ವಿವಾದದ ಹಿನ್ನೆಲೆ:

ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾಗ  ಸ್ನಾಯು ಸೆಳೆತಕ್ಕೆ  ಒಳಗಾಗಿ ಮೈದಾನದಲ್ಲಿ ಕುಸಿದಿದ್ದರು. ಈ ವೇಳೆ ಮುಂಬೈ ಇಂಡಿಯನ್ಸ್​ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಅವರು ಕೃನಾಲ್ ಪಾಂಡ್ಯ ಅವರ ಕಾಲುಗಳನ್ನು ಸ್ಟ್ರೆಚ್ ಮಾಡುವ ಮೂಲಕ ಕ್ರೀಡಾ ಮನೋಭಾವ ಮೆರೆದಿದ್ದರು.

ಈ ಸಂದರ್ಭದಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಬದರಿನಾಥ್, ಇದು ಸೆಳೆತ ಅಲ್ಲ, ಮುಂಬೈ ಇಂಡಿಯನ್ಸ್ ತಂಡವರು ನೀ ಅಲ್ಲೇ ಸಾಯಿ ಎಂದರೂ ತಪ್ಪೇನಿಲ್ಲ ಎಂಬಾರ್ಥದಲ್ಲಿ ಹೇಳಿಕೆ ನೀಡಿದ್ದರು. ಈ ಆಕ್ಷೇಪಾರ್ಹ ಕಾಮೆಂಟ್ರಿ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಬದರಿನಾಥ್ ನೀಡಿದ ಸ್ಪಷ್ಟೀಕರಣ:

ತಮ್ಮ ಹೇಳಿಕೆ ತಪ್ಪಾಗಿ ಅರ್ಥೈಸಲ್ಪಟ್ಟಿದೆ ಎಂದು ತಿಳಿಸಿರುವ ಬದರಿನಾಥ್, ಈ ಬಗ್ಗೆ ಈ ಕೆಳಗಿನ ಅಂಶಗಳನ್ನು ಹಂಚಿಕೊಂಡಿದ್ದಾರೆ:

  • ನಾನು ಬಳಸಿದ “ಸಾಯಿ” ಎನ್ನುವುದು ತಮಿಳಿನ ಒಂದು ಆಡುಭಾಷೆಯ ಶೈಲಿಯಾಗಿದೆ (Colloquial Expression). ಇದನ್ನು ನಾವು ಯಾವುದನ್ನಾದರೂ ಅತಿಯಾಗಿ ಹೇಳುವಾಗ ಅಥವಾ ತಮಾಷೆಯ ಸಂದರ್ಭದಲ್ಲಿ ಬಳಸುತ್ತೇವೆ ಹೊರತು ಯಾರಿಗೂ ಹಾನಿಯಾಗಲಿ ಎಂದು ಬಯಸುವುದಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
  • ನನ್ನ ಮಾತಿನ ನಿಜವಾದ ಉದ್ದೇಶ ರಯಾನ್ ರಿಕೆಲ್ಟನ್ ಅವರ ಮಾನವೀಯತೆಯನ್ನು ಹೊಗಳುವುದಾಗಿತ್ತು. “ಎದುರಾಳಿ ತಂಡದ ಅಪಾಯಕಾರಿ ಆಟಗಾರ ನೋವಿನಲ್ಲಿದ್ದಾಗಲೂ, ಪಂದ್ಯದ ಫಲಿತಾಂಶದ ಬಗ್ಗೆ ಯೋಚಿಸದೆ ಸಹಾಯ ಮಾಡಿದ ರಿಕೆಲ್ಟನ್ ಅವರ ಗುಣಕ್ಕೆ ಮುಂಬೈ ಇಂಡಿಯನ್ಸ್ ತಂಡಕ್ಕೆ ‘ಫೇರ್ ಪ್ಲೇ’ ಅಂಕಗಳನ್ನು ನೀಡಬೇಕು” ಎಂಬುದು ತಮ್ಮ ಆಶಯವಾಗಿತ್ತು ಎಂದು ಅವರು ತಿಳಿಸಿದ್ದಾರೆ.
  •  ಎದುರಾಳಿ ಬ್ಯಾಟರ್ ಔಟ್ ಆದರೆ ಸಾಕು ಎಂದು ತಂಡಗಳು ಬಯಸುವ ಸಂದರ್ಭದಲ್ಲಿ, ರಿಕೆಲ್ಟನ್ ಸಹಾಯ ಮಾಡಿದ್ದನ್ನು ಅತಿರಂಜಿತವಾಗಿ ವಿವರಿಸಲು ಆ ಪದ ಬಳಸಿದ್ದಾಗಿ ಎಸ್​ ಬದರಿನಾಥ್ ಹೇಳಿದ್ದಾರೆ.


ಒಟ್ಟಾರೆಯಾಗಿ, ಕಾಮೆಂಟರಿ ಬಾಕ್ಸ್‌ನಲ್ಲಿ ನಡೆಯುವ ಸಣ್ಣ ಸಂವಹನವೂ ಸಹ ಎಷ್ಟೊಂದು ದೊಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬದರಿನಾಥ್ ಅವರು ತಮ್ಮ ಮಾತಿನ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದರೂ, ಆಟಗಾರರ ನಡುವಿನ ಪರಸ್ಪರ ಗೌರವ ಮತ್ತು ಪದಬಳಕೆಯ ವಿಚಾರದಲ್ಲಿ ಈ ವಿವಾದ ಹೊಸದೊಂದು ಚರ್ಚೆಗೆ ನಾಂದಿ ಹಾಡಿರುವುದಂತು ಸುಳ್ಳಲ್ಲ.

Source link

Leave a Reply

Your email address will not be published. Required fields are marked *