10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ: ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರಿನ ದಂಪತಿ – Kannada News | Bengaluru Couple’s Historic Swim: Sri Lanka to India in 10h 45m

10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ

ಬೆಂಗಳೂರು, ಮೇ 12: ಶ್ರೀಲಂಕಾದಿಂದ ಭಾರತಕ್ಕೆ ಐತಿಹಾಸಿಕ ರಾಮಸೇತು ಮಾರ್ಗದ ಮೂಲಕ ಈಜಿ ಬೆಂಗಳೂರಿನ (Bengaluru) ದಂಪತಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದ್ ಈ ಮಾರ್ಗದ ಮೂಲಕ ಓಪನ್ ವಾಟರ್ ಈಜು ಪೂರ್ಣಗೊಳಿಸಿದ ಮೊದಲ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಮೇ 7ರಂದು ಶ್ರೀಲಂಕಾದ ತಲೈಮನ್ನಾರ್‌ನಿಂದ ಬೆಳಗ್ಗೆ ಸುಮಾರು 4.30ಕ್ಕೆ ಈಜು ಆರಂಭಿಸಿದ್ದ ದಂಪತಿ, ತಮಿಳುನಾಡಿನ ಧನುಷ್ಕೋಡಿಗೆ ಮಧ್ಯಾಹ್ನ ಸುಮಾರು 3.15ಕ್ಕೆ ತಲುಪಿದ್ದಾರೆ. ಪಾಲ್ಕ್ ಜಲಸಂಧಿಯಲ್ಲಿ ಸುಮಾರು 32 ಕಿಲೋಮೀಟರ್ ದೂರವನ್ನು ಈ ಸಮಯದಲ್ಲಿ ಅವರು ಈಜಿದ್ದಾರೆ. ಈ ಸವಾಲಿನ ಈಜು ಪೂರ್ಣಗೊಳಿಸಲು ಅವರಿಗೆ 10 ಗಂಟೆ 45 ನಿಮಿಷಗಳು ತಗುಲಿವೆ.

ಮುಖ್ಯಾಂಶಗಳು

  • ಶ್ರೀಲಂಕಾದಿಂದ ಭಾರತಕ್ಕೆ ಒಟ್ಟಾಗಿ ಈಜಿದ ದಂಪತಿ
  • ಬೆಂಗಳೂರಿನ ದಂಪತಿಯಿಂದ ಐತಿಹಾಸಿಕ ಸಾಧನೆ
  • 10 ಗಂಟೆ 45 ನಿಮಿಷದಲ್ಲಿ 32 ಕಿ.ಮೀ. ಈಜಿದ ಜೋಡಿ

ಇದನ್ನೂ ಓದಿ: 30 ಕಿಮೀ ಸಮುದ್ರ ಈಜಿ ದಾಖಲೆ ಬರೆದ ಚಿನ್ನದ ನಾಡಿನ ಬಾಲಕಿ

ಸೋಶಿಯಲ್​ ಮೀಡಿಯಾ ಪೋಸ್ಟ್​​ ಮೂಲಕ ಸಂತಸ

ಸಾಹಸ ಯಶಸ್ವಿಯಾದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ದಂಪತಿ ಸಂತಸ ಹಂಚಿಕೊಂಡಿದ್ದು, ನಾವು ಸಾಧಿಸಿದ್ದೇವೆ! ಶ್ರೀಲಂಕಾದಿಂದ ಭಾರತಕ್ಕೆ. 10 ಗಂಟೆ 45 ನಿಮಿಷದ ನೀರಿನ ಹಾದು ಅತ್ಯಂತ ಕಠಿಣವಾಗಿತ್ತು. ಈಗ 12 ಗಂಟೆಗಳ ಅಲಾರ್ಮ್ ಇಲ್ಲದ ನಿದ್ರೆ ಬೇಕಾಗಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ. ನಂತರ ಮತ್ತೊಂದು ಪೋಸ್ಟ್‌ನಲ್ಲಿ, ಕೇವಲ ನಾಲ್ಕು ವರ್ಷಗಳ ಹಿಂದೆ ಈಜು ಕಲಿಯಲು ಆರಂಭಿಸಿದ್ದೇವೆ. ಇಷ್ಟು ದೂರ ಬಂದಿದ್ದೇವೆ ಎಂಬುದನ್ನು ಇನ್ನೂ ನಂಬಲಾಗುತ್ತಿಲ್ಲ. ಈ ಸಾಹಸದಲ್ಲಿ ಒಬ್ಬರ ಜೊತೆಗೊಬ್ಬರು ಇದ್ದದ್ದು ನಮಗೆ ಮಾನಸಿಕ ಹಾಗೂ ಭಾವನಾತ್ಮಕ ಶಕ್ತಿಯಾಯಿತು. ನಮ್ಮ ಕೋಚ್‌ಗಳಾದ ಸತೀಶ್ ಮತ್ತು ಯಾಕೂಬ್ ಅವರು ನೀಡಿದ ತರಬೇತಿಯೇ ಈ ದೊಡ್ಡ ಸವಾಲನ್ನು ಎದುರಿಸಲು ಸಹಾಯ ಮಾಡಿತು ಎಂದು ತಿಳಿಸಿದ್ದಾರೆ. ಈಜಿನ ವೇಳೆ ಭಾರತೀಯ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ, ವೈದ್ಯಕೀಯ ತಂಡ ಹಾಗೂ ಸಹಾಯಕ ದೋಣಿಗಳು ಸಂಪೂರ್ಣ ಸುರಕ್ಷತಾ ವ್ಯವಸ್ಥೆ ಒದಗಿಸಿದ್ದವು.

ದಂಪತಿಯ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಿಮ್ಮ ಸಾಧನೆ ಅನೇಕರಿಗೆ ಪ್ರೇರಣೆಯಾಗಿದೆ, ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಅಸಾಧ್ಯವೆನ್ನುವುದೇ ಇಲ್ಲ ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ ಎಂದು ಹೇಳುವ ಮೂಲಕ ದಂಪತಿಯನ್ನು ಅಭಿನಂದಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *