ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಲ್ಲಿ ಸರಣಿ ಸೋತು ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ, ಇದೀಗ ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಕಮಬ್ಯಾಕ್ ಮಾಡಿದೆ. ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದು 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿರುವ ಶ್ರೇಯಸ್ ಅಯ್ಯರ್ ಪಡೆ, ಇಂದು (ಜುಲೈ 26, 2026) ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯರನ್ನು ‘ಕ್ಲೀನ್ ಸ್ವೀಪ್’ ಮಾಡುವ ಇರಾದೆಯಲ್ಲಿದೆ.
ಅಂದರೆ ಶನಿವಾರ ಪಂದ್ಯವಾಡಿರುವ ಟೀಮ್ ಇಂಡಿಯಾ ಇದೀಗ ಭಾನುವಾರ ಮತ್ತೆ ಕಣಕ್ಕಿಳಿಯಲಿದೆ. ಶನಿವಾರ ಮತ್ತು ಭಾನುವಾರ ರಜಾದಿನಗಳಾಗಿರುವುದರಿಂದ ಹೆಚ್ಚು ಜನ ಪಂದ್ಯ ವೀಕ್ಷಿಸುತ್ತಾರೆ ಎಂಬ ಕಾರಣಕ್ಕೆ ಝಿಂಬಾಬ್ವೆ ಕ್ರಿಕೆಟ್ ಬೋರ್ಡ್ ಬ್ಯಾಕ್ ಟು ಬ್ಯಾಕ್ ಪಂದ್ಯಗಳಿಗೆ ದಿನಾಂಕ ನಿಗದಿ ಮಾಡಿದ್ದಾರೆ. ಹೀಗಾಗಿಯೇ ನಿನ್ನೆ ಪಂದ್ಯವಾಡಿದ್ದ ಟೀಮ್ ಇಂಡಿಯಾ ಇವತ್ತು ಕೊನೆಯ ಮ್ಯಾಚ್ ಆಡಲಿದ್ದಾರೆ.
ಟೀಮ್ ಇಂಡಿಯಾ ಆರ್ಭಟ: ಝಿಂಬಾಬ್ವೆ ಧೂಳೀಪಟ:
ಶನಿವಾರ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ವಿಕೆಟ್‌ಕೀಪರ್ ಬ್ಯಾಟರ್ ಇಶಾನ್ ಕಿಶನ್ ಆಕರ್ಷಕ 81 ರನ್ (44 ಎಸೆತ) ಬಾರಿಸಿದರೆ, ತಿಲಕ್ ವರ್ಮಾ ಸ್ಫೋಟಕ ಅಜೇಯ 60 ರನ್ಗಳಿಸಿದರು. ಈ ಅರ್ಧಶತಕಗಳ ನೆರವಿನಿಂದ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 219 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಬೃಹತ್ ಗುರಿ ಬೆನ್ನಟ್ಟಿದ ಸಿಕಂದರ್ ರಾಝ ನೇತೃತ್ವದ ಝಿಂಬಾಬ್ವೆ ತಂಡ, ಭಾರತೀಯ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿ 129 ರನ್‌ಗಳಿಗೆ ಆಲೌಟ್ ಆಯಿತು. ಪಾರ್ಟ್-ಟೈಮ್ ಸ್ಪಿನ್ನರ್ ಅಭಿಷೇಕ್ ಶರ್ಮಾ 17 ರನ್ ನೀಡಿ 3 ವಿಕೆಟ್ ಪಡೆದರೆ, ಯುವ ವೇಗಿ ಪ್ರಿನ್ಸ್ ಯಾದವ್ ಮತ್ತು ಚೊಚ್ಚಲ ಪಂದ್ಯವಾಡಿದ ಯಶ್ ಠಾಕೂರ್ ತಲಾ 2 ವಿಕೆಟ್ ಪಡೆದು ಭಾರತದ ಜಯವನ್ನು ಸರಳಗೊಳಿಸಿದರು. ಈ ಮೂಲಕ ಟೀಮ್ ಇಂಡಿಯಾ 90 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ಇಂದು ಕ್ಲೀನ್ ಸ್ವೀಪ್ ಗುರಿ:
ನಾಯಕನಾಗಿ ಶ್ರೇಯಸ್ ಅಯ್ಯರ್ ಅವರಿಗೆ ಇದು ಮೊದಲ ಸರಣಿ ಗೆಲುವಾಗಿದ್ದು, ಕೊನೆಯ ಪಂದ್ಯದಲ್ಲೂ ಜಯಗಳಿಸಿ ಸರಣಿಯನ್ನು 3-0 ಇಂದ ಮುಗಿಸಲು ಅವರು ತಂತ್ರ ರೂಪಿಸುತ್ತಿದ್ದಾರೆ. ಭಾರತ ತಂಡದ ಬ್ಯಾಟಿಂಗ್ ಲೈನಪ್ ಅತ್ಯಂತ ಬಲಿಷ್ಠವಾಗಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ದಾಂಡಿಗರಿಂದ ಅಬ್ಬರವನ್ನು ನಿರೀಕ್ಷಿಸಬಹುದು.
ಮತ್ತೊಂದೆಡೆ, ಝಿಂಬಾಬ್ವೆ ತಂಡ ತನ್ನ ತವರು ಮೈದಾನದಲ್ಲೇ ವೈಟ್‌ವಾಶ್ ಮುಖಭಂಗದಿಂದ ಬಲಿಷ್ಠ ಭಾರತವನ್ನು ತಡೆಯಬೇಕಾದ ಒತ್ತಡದಲ್ಲಿದೆ. ನಾಯಕ ಸಿಕಂದರ್ ರಾಝ, ಬ್ರಯಾನ್ ಬೆನೆಟ್ ಮತ್ತು ಬೌಲಿಂಗ್‌ನಲ್ಲಿ ಬ್ಲೆಸ್ಸಿಂಗ್ ಮುಝರಬಾನಿ ಅವರ ಮೇಲೆ ಝಿಂಬಾಬ್ವೆ ತಂಡ ಅತಿಯಾಗಿ ಅವಲಂಬಿತವಾಗಿದೆ.
ಇದನ್ನೂ ಓದಿ: ‘ಮೈ ಬ್ಯಾಡ್’… ಹೀಗೂ ರನೌಟ್ ಮಿಸ್ ಮಾಡಿಕೊಳ್ತಾರಾ!
ಇದಾಗ್ಯೂ ಮೊದಲೆರಡು ಪಂದ್ಯಗಳಲ್ಲಿ ಝಿಂಬಾಬ್ವೆ ತಂಡ ಹೀನಾಯವಾಗಿ ಸೋತಿರುವ ಕಾರಣ ಟೀಮ್ ಇಂಡಿಯಾ ಮೂರನೇ ಮ್ಯಾಚ್ನಲ್ಲೂ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ. ಅದರಂತೆ ಭಾರತ ತಂಡವು ಈ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಲಿದೆಯಾ ಕಾದು ನೋಡಬೇಕಿದೆ.
