ರೈಲ್ವೆ ಜಾಗದಲ್ಲಿ ಕಸ ಎಸೆದರೆ ಬೀಳುತ್ತೆ ದಂಡ: ನೈರುತ್ಯ ರೈಲ್ವೆಯಿಂದ ಕಠಿಣ ಕ್ರಮದ ಎಚ್ಚರಿಕೆ! – Kannada News | Don’t Dump Waste on Railway Land: South Western Railway Warns Violators

ಬೆಂಗಳೂರು, ಜುಲೈ 26: ರೈಲ್ವೆ ಹಳಿಗಳ ಪಕ್ಕದಲ್ಲಿ ಮತ್ತು ರೈಲ್ವೆಗೆ ಸೇರಿದ ಜಾಗದಲ್ಲಿ ಕಸ ಹಾಗೂ ಕಟ್ಟಡದ ತ್ಯಾಜ್ಯ (ಡೆಬ್ರಿಸ್) ಚೆಲ್ಲುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೈರುತ್ಯ ರೈಲ್ವೆ (SWR)ಎಚ್ಚರಿಕೆ ನೀಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ನಗರದ ಐದು ಪಾಲಿಕೆಗಳ ಸಹಯೋಗದೊಂದಿಗೆ ಮುಂದಿನ ಎರಡು ತಿಂಗಳಲ್ಲಿ ರೈಲ್ವೆ ಹಳಿಗಳ ಸುತ್ತಲಿನ ಕಸ ತೆರವುಗೊಳಿಸಲು ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಕಾನೂನು ಕ್ರಮ ಮತ್ತು ದಂಡ ಪ್ರಯೋಗ!

ಶನಿವಾರ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಾತನಾಡಿ, ರೈಲ್ವೆ ಜಾಗದಲ್ಲಿ ಅನಧಿಕೃತವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ರೈಲ್ವೆ ಆಸ್ತಿಯನ್ನು ರಕ್ಷಿಸುವುದು ಮತ್ತು ಇರುವ ಕಸದ ರಾಶಿಯನ್ನು ಸಂಪೂರ್ಣವಾಗಿ ತೆರವುಗೊಳಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ. ಭವಿಷ್ಯದಲ್ಲಿ ಮತ್ತೆ ಕಸ ಎಸೆಯದಂತೆ ತಡೆಯಲು ಕಠಿಣ ಕಣ್ಗಾವಲು ವಹಿಸಲಾಗುತ್ತದೆ.

ಸಿಗ್ನಲಿಂಗ್ ವೈಯರ್ ನಾಶ!

ರೈಲ್ವೆ ಅಧಿಕಾರಿಗಳ ಪ್ರಕಾರ, ಹಳಿಗಳ ಪಕ್ಕದಲ್ಲಿ ಬೇಕಾಬಿಟ್ಟಿ ಕಸ ಎಸೆಯುವುದು ರೈಲುಗಳ ಸುರಕ್ಷಿತ ಸಂಚಾರಕ್ಕೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಕಸದ ರಾಶಿಗೆ ಬೆಂಕಿ ಬಿದ್ದ ಪರಿಣಾಮ ಹಲವು ಬಾರಿ ಸಿಗ್ನಲಿಂಗ್ ಮತ್ತು ವಿದ್ಯುತ್ ಕೇಬಲ್ಗಳು ಸುಟ್ಟುಹೋಗಿ, ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಅಲ್ಲದೆ, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೊಸೂರು ಮಾರ್ಗಗಳಲ್ಲಿ ತ್ಯಾಜ್ಯ ಪದೇ ಪದೇ ಶೇಖರಣೆಯಾಗುವುದರಿಂದ ರೈಲ್ವೆ ಗಡಿ ರೇಖೆಗಳು ಮರೆಯಾಗಿ, ಜಾಗ ಒತ್ತುವರಿಯಾಗುವ ಭೀತಿಯೂ ಎದುರಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:33 am, Sun, 26 July 26

Source link

Leave a Reply

Your email address will not be published. Required fields are marked *