ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲನುಭವಿಸಿದೆ. ಮೊದಲ ಮ್ಯಾಚ್ನಲ್ಲಿ 34 ರನ್ಗಳಿಂದ ಸೋತಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ 1 ರನ್ನಿಂದ ಸೋಲೊಪ್ಪಿಕೊಂಡಿದೆ. ಈ ಎರಡು ಸೋಲುಗಳೊಂದಿಗೆ ಭಾರತ ತಂಡವು ಇದೇ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸರಣಿ ಸೋತಂತಾಗಿದೆ. ಈ ಸೋಲಿನ ಬೆನ್ನಲ್ಲೇ ಐಸ್‌ಲ್ಯಾಂಡ್ ಕ್ರಿಕೆಟ್ ವ್ಯಂಗ್ಯಭರಿತ ಪೋಸ್ಟ್ವೊಂದು ಹಂಚಿಕೊಂಡು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರ ಕಾಲೆಳೆದಿದ್ದಾರೆ.
ಐಸ್‌ಲ್ಯಾಂಡ್ ಕ್ರಿಕೆಟ್ ಪೋಸ್ಟ್:
ಕ್ರಿಕೆಟ್ ಅಂಗಳದಲ್ಲಿ ನಡೆಯುವ ಕೆಲ ಸನ್ನಿವೇಶಗಳಿಗೆ ತಮ್ಮ ಚುರುಕಾದ ಹಾಸ್ಯಪ್ರಜ್ಞೆಯ ಮೂಲಕ ಪ್ರತಿಕ್ರಿಯಿಸುವ ಐಸ್‌ಲ್ಯಾಂಡ್ ಕ್ರಿಕೆಟ್ ಸೋಷಿಯಲ್ ಮೀಡಿಯಾ ಖಾತೆಯ ಅಡ್ಮಿನ್ ಈ ಬಾರಿ ಗುರಿಯಾಗಿಸಿದ್ದು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು.
“ನಾವು ಗೌತಮ್ ಗಂಭೀರ್ ಅವರನ್ನು ನಮ್ಮ ಕೋಚಿಂಗ್ ಸಿಬ್ಬಂದಿಗೆ ಸೇರಿಸಿಕೊಳ್ಳಲು ಬಯಸುವುದಿಲ್ಲ ಎಂದು ಖಚಿತಪಡಿಸುತ್ತೇವೆ. ಆದರೆ ಅವರಲ್ಲಿ ಅದ್ಭುತ ಪ್ರತಿಭೆಯಂತೂ ಇದೆ. ಅಂತಹ ಸ್ಟಾರ್ ಭಾರತೀಯ ಆಟಗಾರರನ್ನು ಇಟ್ಟುಕೊಂಡು, ಐರ್ಲೆಂಡ್‌ನಲ್ಲಿ ಇಂತಹ ರಿಸಲ್ಟ್ ತರುವುದು ನಿಜಕ್ಕೂ ಸಾಮಾನ್ಯ ವಿಷಯವಲ್ಲ!” ಎಂದು ಐಸ್‌ಲ್ಯಾಂಡ್ ಕ್ರಿಕೆಟ್, ಟೀಮ್ ಇಂಡಿಯಾ ಕೋಚ್ ಅನ್ನು ಕಾಲೆಳೆದಿದ್ದಾರೆ.
We can confirm that we don’t wish to add Gautam Gambhir to our coaching staff. He clearly has talent, though. To take those Indian players and deliver those results in Ireland takes truly remarkable gifts.
— Iceland Cricket (@icelandcricket) June 28, 2026
ಇತಿಹಾಸ ಬರೆದ ಐರ್ಲೆಂಡ್
- ಚಾರಿತ್ರಿಕ ಕ್ಲೀನ್ ಸ್ವೀಪ್: ಬೆಲ್‌ಫಾಸ್ಟ್‌ನ ಸ್ಟೋರ್ಮಾಂಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಟಿ20 ಸರಣಿಯ ಎರಡೂ ಪಂದ್ಯಗಳನ್ನು ಗೆದ್ದ ಐರ್ಲೆಂಡ್, ಭಾರತದ ವಿರುದ್ಧ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ಜಯಿಸಿ ಇತಿಹಾಸ ಬರೆದಿದೆ.
- ವಿಶ್ವ ದಾಖಲೆಗೆ ಬ್ರೇಕ್: ಈ ಗೆಲುವಿನೊಂದಿಗೆ ಐರ್ಲೆಂಡ್ ತಂಡವು ಭಾರತ ತಂಡದ ವಿಶ್ವ ದಾಖಲೆಯ ದ್ವಿಪಕ್ಷೀಯ ಸರಣಿ ಗೆಲುವಿಗೆ ಬ್ರೇಕ್ ಹಾಕಿದೆ. ಅಂದರೆ ಟೀಮ್ ಇಂಡಿಯಾ ಕಳೆದ 3 ವರ್ಷಗಳಲ್ಲಿ ಸತತವಾಗಿ ಬರೋಬ್ಬರಿ 16 ಸರಣಿ ಗೆದ್ದುಕೊಂಡಿತ್ತು. ಇದೀಗ ಈ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.
ಫ್ಯಾನ್ಸ್ ‘ಗಂಭೀರ’ ಆಕ್ರೋಶ:
ಟೀಮ್ ಇಂಡಿಯಾದ ಹೀನಾಯ ಪ್ರದರ್ಶನಕ್ಕೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೇ ಕಾರಣ ಎಂದು ಕ್ರಿಕೆಟ್ ಪ್ರೇಮಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಗಂಭೀರ್ ಅವರ ಅತಿಯಾದ ಪ್ರಯೋಗಗಳು, ಆಟಗಾರರ ಆಯ್ಕೆ ಹಾಗೂ ಸ್ಪೆಷಲಿಸ್ಟ್ ಬ್ಯಾಟರ್‌ಗಳ ಬದಲಿಗೆ ಅತಿಯಾಗಿ ಆಲ್‌ರೌಂಡರ್‌ಗಳ ಮೇಲೆ ನಂಬಿಕೆ ಇಟ್ಟಿದ್ದೇ ಈ ಐತಿಹಾಸಿಕ ಮುಖಭಂಗಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ವಿಶ್ವ ದಾಖಲೆಯ ನಾಗಾಲೋಟಕ್ಕೆ ಬ್ರೇಕ್!
ಒಟ್ಟಾರೆಯಾಗಿ ಟೀಮ್ ಇಂಡಿಯಾ ಅನಿರೀಕ್ಷಿತವಾಗಿ ಐರ್ಲೆಂಡ್ ವಿರುದ್ಧ ಸೋತಿದೆ. ಈ ಸೋಲಿನ ಬೆನ್ನಲ್ಲೇ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆಡಲು ಸಜ್ಜಾಗಿದೆ. ಈ ಸರಣಿ ಮೂಲಕ ಟೀಮ್ ಇಂಡಿಯಾ ಟೀಕಾಗಾರರಿಗೆ ಪ್ರತ್ಯುತ್ತರ ನೀಡಲಿದ್ದಾರಾ ಕಾದು ನೋಡಬೇಕಿದೆ.
